ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ ಎನ್‌ಐಎ
ಕಳೆದ ವರ್ಷ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಲಾಗಿತ್ತು
ಬೆಂಗಳೂರು, ಮಾರ್ಚ್ 05: ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಎನ್‌ಐಎ ಬೆಂಗಳೂರಿನಲ್ಲಿ ಬಂಧಿಸಿದೆ. ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದಾಸರಳ್ಳಿಯಲ್ಲಿ ಅಡಗಿಕೊಂಡಿದ್ದ ಆರೋಪಿಯನ್ನು ತನಿಖಾ ಸಂಸ್ಥೆಯ ಅಧಿಕಾರಿಗಳು ಬಂದಿಸಿದ್ದಾರೆ ಎಂದು ವರದಿಯಾಗಿದೆ.
ಬಂಧಿತ ಆರೋಪಿಯನ್ನು ಎಂ ಎಚ್ ತೌಫಿಲ್ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದಾಸರಳ್ಳಿಯಲ್ಲಿರುವ ಅಡಗುತಾಣದಿಂದ ಭಾನುವಾರ ಬಂಧಿಸಿದೆ. ಅಧಿಕಾರಿಗಳ ಪ್ರಕಾರ, ಆರೋಪಿಯು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ರಚಿಸಿದ ಕೊಲೆಗಾರ ಸ್ಕ್ವಾಡ್‌ನ ಸದಸ್ಯರಾಗಿದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ದೇಶದಲ್ಲಿ ನಿಷೇಧಿಸಲಾಗಿದೆ.

ಕಳೆದ ವರ್ಷ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಲಾಗಿತ್ತು. ಈ ಕೊಲೆ ಮಾಡಿದ ತಂಡಲ್ಲಿ ತೌಫಿಲ್ ಇದ್ದರು ಎಂದು ತನಿಖಾ ಸಂಸ್ಥೆ ಆರೋಪಿಸಿ, ಬಂಧಿಸಿದೆ. ಘಟನೆಯ ನಂತರ, ತೌಫಿಲ್ ಸೇರಿದಂತೆ ಆರು ಆರೋಪಿಗಳು ತಲೆಮರೆಸಿಕೊಂಡಿದ್ದರು, ಆದರೆ ಎನ್ಐಎ 14 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿಯ ಗದ್ದುಗೆಯ ನಿವಾಸಿ ತೌಫಿಲ್‌ನನ್ನು ಬಂಧಿಸಲು ಸುಳಿವು ನೀಡಿದ ಮಾಹಿತಿದಾರರಿಗೆ ಎನ್‌ಐಎ 5 ಲಕ್ಷ ಬಹುಮಾನ ಘೋಷಿಸಿತ್ತು.
ಶನಿವಾರ ರಾತ್ರಿ ಎನ್‌ಐಎ ಅಧಿಕಾರಿಗಳು ಅಧಿಕೃತ ಮಾಹಿತಿ ಮೇರೆಗೆ ದಾಸರಹಳ್ಳಿಯ ಕಟ್ಟಡವೊಂದರ ಎರಡನೇ ಮಹಡಿಯಲ್ಲಿರುವ ತೌಫಿಲ್‌ನ ಕೊಠಡಿ ಮೇಲೆ ದಾಳಿ ನಡೆಸಿದ್ದರು. ಇಬ್ಬರು ಅಧಿಕಾರಿಗಳು ಆರೋಪಿಯಿದ್ದ ಕೋಣೆಗೆ ಪ್ಲಂಬರ್‌ಗಳಂತೆ ನಟಿಸುತ್ತಾ ಹೋಗಿದ್ದಾರೆ. ಇವರನ್ನು ಗುರುತು ಹಿಡಿದ ನಂತ ತೌಫಿಲ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ಹೊರಗೆ ಕಾಯುತ್ತಿದ್ದ ಇತರ ಅಧಿಕಾರಿಗಳು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ಮುಂದುವರಿದಿದ್ದು, ತೌಫಿಲ್ ಬಂಧನದಿಂದ ಇನ್ನೂ ಐವರು ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
"ನಮ್ಮ ತಂಡಗಳು ಆರೋಪಿಗಳನ್ನು ಬಂಧಿಸಲು ಕೇರಳ, ಮುಂಬೈ, ತಮಿಳುನಾಡು ಮತ್ತು ಇತರ ಸ್ಥಳಗಳಲ್ಲಿ ಆರೋಪಿಗಳಿಗಾಗಿ ತಿಂಗಳುಗಟ್ಟಲೆ ಶೋಧ ನಡೆಸಿದ್ದವು. ಆರೋಪಿಗಳ ಸುಳಿವು ಸಿಗುವುದು ಕಷ್ಟವಾದಾಗ ಎನ್‌ಐಎ ತೌಫಿಲ್ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ'' ಎಂದು ಹೆಸರು ಹೇಳಲಿಚ್ಛಿಸದ ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಜನವರಿ 20 ರಂದು ಎನ್‌ಐಎ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ 20 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ಸಮಾಜದಲ್ಲಿ ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿ ಸೃಷ್ಟಿಸಲು ಮತ್ತು 2047 ರ ವೇಳೆಗೆ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸಲು ಪಿಎಫ್‌ಐ ತನ್ನ ಕಾರ್ಯಸೂಚಿಯ ಭಾಗವಾಗಿ, ಹತ್ಯೆಗಳನ್ನು ನಡೆಸಲು ಸೇವಾ ತಂಡಗಳು ಅಥವಾ ಕಿಲ್ಲರ್ ಸ್ಕ್ವಾಡ್ ಎಂಬ ರಹಸ್ಯ ತಂಡಗಳನ್ನು ರಚಿಸಿದೆ ಎಂದು ಚಾರ್ಜ್ ಶೀಟ್‌ನಲ್ಲಿ ಎನ್‌ಐಎ ತಿಳಿಸಿದೆ.
"ಕೆಲವು ಸಮುದಾಯಗಳು ಮತ್ತು ಗುಂಪುಗಳಿಗೆ ಸೇರಿದ ವ್ಯಕ್ತಿಗಳು/ನಾಯಕರನ್ನು ಗುರುತಿಸಲು, ಪಟ್ಟಿ ಮಾಡಲು ಮತ್ತು ಕಣ್ಗಾವಲು ಇಡಲು ಈ ಸೇವಾ ತಂಡದ ಸದಸ್ಯರಿಗೆ ಶಸ್ತ್ರಾಸ್ತ್ರಗಳ ಜೊತೆಗೆ ದಾಳಿ ತರಬೇತಿ ಮತ್ತು ಬೇಹುಗಾರಿಕೆ ತಂತ್ರಗಳಲ್ಲಿ ತರಬೇತಿಯನ್ನು ನೀಡಲಾಯಿತು. ಹಿರಿಯ ಪಿಎಫ್‌ಐ ನಾಯಕರ ಸೂಚನೆಯ ಮೇರೆಗೆ ಗುರುತು ಮಾಡಿದ ವ್ಯಕ್ತಿಗಳ ಮೇಲೆ ದಾಳಿ ಮಾಡಲು ಅಥವಾ ಕೊಲ್ಲಲು ಅವರಿಗೆ ಹೆಚ್ಚಿನ ತರಬೇತಿ ನೀಡಲಾಗಿದೆ ಎಂದು ಎನ್‌ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) 120B, 153A, 302 ಮತ್ತು 34 ಮತ್ತು UA (P)A ಕಾಯಿದೆ 1967ರ ಸೆಕ್ಷನ್ 16, 18 ಮತ್ತು 20, ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 25 (1) (a) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಆರೋಪಿಗಳ ಪೈಕಿ ಮುಸ್ತಫಾ ಪೈಚಾರ್, ಮಸೂದ್ ಕೆ ಎ, ಕೊಡಾಜೆ ಮೊಹಮ್ಮದ್ ಶೆರೀಫ್, ಅಬೂಬಕ್ಕರ್ ಸಿದ್ದಿಕ್ ಮತ್ತು ಉಮ್ಮರ್ ಫಾರೂಕ್ ಎಂಆರ್ ಸದ್ಯ ತಲೆಮರೆಸಿಕೊಂಡಿದ್ದು, ಅವರ ಸುಳಿವು ನೀಡಿದವರಿಗೂ ಬಹುಮಾನ ಘೋಷಿಸಲಾಗಿದೆ.












Click it and Unblock the Notifications