Sugar Factory: ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ವಿಚಾರ ಮುನ್ನೆಲೆಗೆ
ಮಂಡ್ಯ , ಜುಲೈ 11: ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವಂತೆ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ಹೊಸ ಸಕ್ಕರೆ ಕಾರ್ಖಾನೆಯ ರೂಪುರೇಷೆಗಳು ಹೇಗಿರಬೇಕೆಂಬ ಕುರಿತಂತೆ ಪಕ್ಷಾತೀತವಾಗಿ ರೈತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುವುದಕ್ಕೆ ಗುರುವಾರ ವೇದಿಕೆ ಸಿದ್ಧಗೊಂಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಜಿಲ್ಲಾಡಳಿತದ ನಿರ್ದೇಶನದಂತೆ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು ಎಲ್ಲಾ ಪಕ್ಷಗಳ ರೈತ ಪ್ರತಿನಿಧಿಗಳು, ರೈತ ಮುಖಂಡರ ಸಭೆ ಕರೆದು ಸಾಧಕ-ಬಾಧಕಗಳ ಕುರಿತಂತೆ ಚರ್ಚೆ ನಡೆಸಲಿದ್ದು, ಈಗಾಗಲೇ ಮೈಷುಗರ್ ಅತಿಥಿಗೃಹದಲ್ಲಿ ನಡೆಯಲಿರುವ ಸಭೆಗೆ ಎಲ್ಲರನ್ನೂ ಆಹ್ವಾನಿಸಲಾಗಿದೆ.

ತಾಂತ್ರಿಕ ಸಮಿತಿಯಿಂದ ವರದಿ
ಹೊಸ ಕಾರ್ಖಾನೆಯನ್ನು ಎಲ್ಲಿ ಸ್ಥಾಪನೆ ಮಾಡಬೇಕೆಂಬ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳುವ ಮುನ್ನ ಕಾರ್ಖಾನೆಗೆ ಸಿಗಬಹುದಾದ ಕಬ್ಬಿನ ಪ್ರಮಾಣ, ಕಬ್ಬು ಅರೆಯುವ ಸಾಮರ್ಥ್ಯ, ಸಹ ವಿದ್ಯುತ್ ಘಟಕ ಆರಂಭಗೊಳ್ಳುವುದಕ್ಕೆ ಪೂರಕವಾಗಿ ಕಬ್ಬು ಸಿಗಲಿದೆಯೇ ಎಂಬ ಬಗ್ಗೆ ಚರ್ಚೆ ನಡೆಯಲಿರುವುದಾಗಿ ತಿಳಿದುಬಂದಿದೆ.
ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ ಕುರಿತಂತೆ ತಾಂತ್ರಿಕ ಸಮಿತಿ ಸಿದ್ಧಪಡಿಸುವ ವರದಿಯನ್ನು ಆಧರಿಸಿ ಎಲ್ಲಿ ಸ್ಥಾಪನೆ ಮಾಡಬೇಕು, ಏನೆಲ್ಲಾ ಸೌಲಭ್ಯಗಳನ್ನು ಒಳಗೊಂಡಿರಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಹೊಸ ಕಾರ್ಖಾನೆಯನ್ನು ಈಗ ಕಾರ್ಖಾನೆ ಇರುವ ಸ್ಥಳದಲ್ಲೇ ಸ್ಥಾಪಿಸಿದರೆ ಎಷ್ಟು ಹಣ ಖರ್ಚಾಗಲಿದೆ. ಬೇರೆ ಬೇರೆ ಘಟಕಗಳ ಸ್ಥಾಪನೆಗೆ ಅವಕಾಶ ಸಿಗಲಿದೆಯೇ, ಬೇರೆಡೆ ಸ್ಥಾಪಿಸಿದರೆ ಆಗುವ ಖರ್ಚೆಷ್ಟು. ರೈತರಿಗೆ ಆಗಬಹುದಾದ ಅನುಕೂಲಗಳೇನು ಎನ್ನುವುದನ್ನು ತಾಂತ್ರಿಕ ಸಮಿತಿ ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದೆ.
ಒಮ್ಮೆ ಹೊಸ ಕಾರ್ಖಾನೆಯನ್ನು ಈಗಿರುವ ಸ್ಥಳದಿಂದ ಬೇರೆ ಕಡೆಗೆ ಸ್ಥಳಾಂತರ ಮಾಡಿದರೆ ಹಳೇ ಕಾರ್ಖಾನೆ ಇರುವ ಪ್ರದೇಶವನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡಬೇಕು ಎನ್ನುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಶಾಸಕ ಪಿ.ರವಿಕುಮಾರ್ ಅವರೊಬ್ಬರು ಮಾತ್ರ ಸಾತನೂರು ಾರಂನ 75 ಎಕರೆ ಪ್ರದೇಶದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಬೇಕು, ಹಳೇ ಕಾರ್ಖಾನೆ ಇರುವ ಸ್ಥಳವನ್ನು ಸ್‌ಟಾವೇರ್ ಪಾರ್ಕ್ ಮಾಡಬೇಕೆಂಬ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ.
ಈ ಬೇಡಿಕೆಯನ್ನು ಈಗಾಗಲೇ ತಿರಸ್ಕರಿಸುತ್ತಿರುವ ರೈತ ಮುಖಂಡರು ಮೈಷುಗರ್ ಕಾರ್ಖಾನೆ ಇರುವ ಜಾಗದಲ್ಲೇ ಹೊಸ ಕಾರ್ಖಾನೆ ನಿರ್ಮಾಣವಾಗಬೇಕು. ಯಾವ ಕಾರಣಕ್ಕೂ ಕಾರ್ಖಾನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಬಾರದು. ಕಾರ್ಖಾನೆ ಭಾಗಶಃ ಸುಸ್ಥಿತಿಯಲ್ಲಿದ್ದು, ಮತ್ತೊಂದು ಮಿಲ್‌ನ್ನು ದುರಸ್ತಿಗೊಳಿಸಿ ಸುಸ್ಥಿತಿಗೆ ತಂದರೆ ಕಬ್ಬು ಅರೆಯುವುದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಎಥೆನಾಲ್ ಘಟಕ, ಡಿಸ್ಟಿಲರಿ ಘಟಕಗಳನ್ನು ಆರಂಭಿಸುವುದಕ್ಕೂ ಸ್ಥಳಾವಕಾಶದ ಕೊರತೆ ಏನಿಲ್ಲ. ಹೊಸ ಕಾರ್ಖಾನೆ ವಿಚಾರವನ್ನು ಪ್ರಸ್ತಾಪಿಸುತ್ತಿರುವ ಉದ್ದೇಶದ ಬಗ್ಗೆ ರೈತ ಪ್ರತಿನಿಧಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವರ್ಷ ಮೈಷುಗರ್ ಕಾರ್ಖಾನೆ ಸುಮಾರು 1.90 ಲಕ್ಷ ಟನ್ ಕಬ್ಬು ಅರೆದಿದೆ. ಎರಡನೇ ಮಿಲ್ ಕಾರ್ಯಾಚರಣೆ ಆರಂಭಿಸಿದರೆ ನಿರೀಕ್ಷೆಯಂತೆ ನಿತ್ಯ 5 ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಲಿದೆ. ಅದಕ್ಕಾಗಿ ಹೊಸ ಕಾರ್ಖಾನೆ ಸ್ಥಾಪನೆಯ ಉದ್ದೇಶವಾದರೂ ಏನೆಂಬುದು ಹಲವರ ಪ್ರಶ್ನೆಯಾಗಿದೆ.
ರಾಜ್ಯಸರ್ಕಾರ ಬಜೆಟ್‌ನಲ್ಲಿ ತಿಳಿಸಿರುವಂತೆ ಮೈಷುಗರ್ ಆಸ್ತಿಯನ್ನು ಅಡಮಾನ ಮಾಡಿ ಹೊಸ ಕಾರ್ಖಾನೆಯನ್ನು ಸ್ಥಾಪಿಸುವುದಾಗಿ ಸ್ಪಷ್ಟಪಡಿಸಿದೆ. ಇದಕ್ಕೆ ರೈತ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದು, ಹಾಲಿ ಇರುವ ಸಕ್ಕರೆ ಕಾರ್ಖಾನೆಯನ್ನು ನವೀಕರಣಗೊಳಿಸಿದರೆ ಸಾಕು. ಯಾವ ಆಸ್ತಿಯನ್ನು ಮಾರಾಟ ಮಾಡುವ ಅವಶ್ಯಕತೆ ಎದುರಾಗುವುದಿಲ್ಲ. ಮೈಷುಗರ್ ಕಾರ್ಖಾನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುವುದರ ಹಿಂದೆ ರಾಜಕೀಯ ಒಳಸಂಚಿರುವ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚಿತವಾಗುತ್ತಿದೆ.
ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ ಕುರಿತಂತೆ ಚರ್ಚೆ ನಡೆಸಲು ಎಲ್ಲಾ ಪಕ್ಷಗಳ ರೈತ ಪ್ರತಿನಿಽಗಳು, ರೈತ ಮುಖಂಡರನ್ನು ಸಭೆಗೆ ಆಹ್ವಾನಿಸಿದ್ದೇನೆ. ಗುರುವಾರ ಮೈಷುಗರ್ ಅತಿಥಿಗೃಹದಲ್ಲಿ ಸಭೆ ಕರೆದಿದ್ದೇನೆ. ಹೊಸ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪನೆ ಮಾಡಬೇಕೆನ್ನುವುದು ಅಂತಿಮವಾಗಿಲ್ಲ. ತಾಂತ್ರಿಕ ಸಮಿತಿ ವರದಿ ಪಡೆದುಕೊಂಡು ನಿರ್ಧರಿಸಲಾಗುತ್ತದೆ.












Click it and Unblock the Notifications