Ramya: ಜೋಡೆತ್ತುಗಳ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯ ಬಗ್ಗೆ ರಮ್ಯಾ ಹೇಳಿದ್ದೇನು?
ಬೆಂಗಳೂರು, ಮೇ 20: ಕರ್ನಾಟಕ ವಿಧಾನಸಭಾ ಚುನವಾಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯಗಳಿದ್ದು, ಶನಿವಾರ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಸೇರಿದಂತೆ 8 ಜನ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇನ್ನೂ ಕಾಂಗ್ರೆಸ್ ಸರ್ಕಾರ ರಚನೆಗೆ ಕುರಿತು ಮಾಜಿ ಸಂಸದೆ ಹಾಗೂ ನಟಿ ರಮ್ಯ ಮಾಧ್ಯಮಗಳ ಜೊತೆಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದು ಬಹಳ ಖುಷಿ ತಂದಿದೆ. ಕಾಂಗ್ರೆಸ್ ನಾಯಕರು ಕೊಟ್ಟ ಭರವಸೆಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆ 100% ರಷ್ಟಿದೆ. ಕಾಂಗ್ರೆಸ್ ನ ಹಿರಿಯ ನಾಯಕರುಗಳಿಗೆ ಸಚಿವ ಸಂಪುಟದಲ್ಲಿ ಅವಕಾಶವನ್ನ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ನೀಡಿರುವ ಐದು ಗ್ಯಾರೆಂಟಿಗಳನ್ನು ಈಡೇರಿಸುತ್ತಾರೆ ಎಂಬ ಭರವಸೆ ನನಗೆ ಇದೆ. ಅದರಲ್ಲಿ ಅನುಮಾನವೇ ಇಲ್ಲ ಎಂದು ರಮ್ಯಾ ಹೇಳಿದ್ದಾರೆ.

ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪಾಸ್. ನಿರುದ್ಯೋಗಿ ಪದವಿದರರಿಗೆ, ಡಿಪ್ಲೋಮಾ ಶಿಕ್ಷಿತರಿಗೆ ಪ್ರತಿ ತಿಂಗಳು ಹಣ ನೀಡುತ್ತಾರೆ. ಗೃಹಿಣಿಯರಿಗೆ 2000 ಹಣ ನೀಡುತ್ತಾರೆ. ಮತ್ತೆ ಅನ್ನಭಾಗ್ಯ ಅಂತೂ ಕೊಟ್ಟೆ ಕೊಡುತ್ತಾರೆ. ಕಳೆದ ಬಾರಿ ಅನ್ನಭಾಗ್ಯ ಯೋಜನೆ ತಂದಾಗ ಅದರಿಂದ ಬಹಳಷ್ಟು ಬಡಜನರಿಗೆ ಒಳ್ಳೆಯದಾಗಿತ್ತು. ಆ ಯೋಜನೆಯನ್ನು ಈಗ ಮತ್ತೆ ತರುವ ನಿರೀಕ್ಷೆ ಇದೆ ಎಂದು ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ.
ಬಿಜೆಪಿ ವಿರುದ್ದ ಮಲ್ಲಿಕಾರ್ಜುನ್ ಖರ್ಗೆ ಕಿಡಿ
ನಮ್ಮ ಮೊದಲ ಸಚಿವ ಸಂಪುಟದಲ್ಲಿ ನಮ್ಮ ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ವಾಗ್ದಾನ ನೀಡಿದ್ದು, ಅದನ್ನು ಮಾಡಲಿದ್ದೇವೆ. ಇದರ ಜತೆಗೆ ನಾವು ನೀಡಿರುವ ಇತರೆ ಭರವಸೆಗಳನ್ನು ಜಾರಿ ಮಾಡುತ್ತೇವೆ. ಕಳೆದ ಬಾರಿಯ ಸರ್ಕಾರ ಇದ್ದಾಗಲೂ ನಾವು ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. ನಾವು ಬಿಜೆಪಿಯವರ ರೀತಿ ಹೇಳುವುದೊಂದು ಮಾಡುವುದು ಮತ್ತೊಂದು ರೀತಿ ಆಡಳಿತ ಮಾಡುವುದಿಲ್ಲ. ನಾವು ಹೇಳಿದ್ದನ್ನು ಮಾಡಿ ತೋರಿಸುತ್ತೇವೆ.
ಪ್ರಧಾನಿ ಮೋದಿ ಅವರು ಈಗ ಮತ್ತೊಂದು ಆದೇಶ ಹೊರಡಿಸಿದ್ದಾರೆ. ಅವರು ಜಪಾನ್ ಗೆ ತೆರಳಿದಾಗಲೆಲ್ಲಾ ನೋಟು ರದ್ದು ತೀರ್ಮಾನ ಪ್ರಕಟಿಸುತ್ತಾರೆ. ಕಳೆದ ಬಾರಿ ಜಪಾನ್ ಗೆ ತೆರಳಿದಾಗ ಒಂದು ಸಾವಿರ ರೂ. ಮುಖಬೆಲೆ ನೋಟು ರದ್ದು ಮಾಡಿದ್ದರು. ಈ ಬಾರಿ 2 ಸಾವಿರ ಮುಖಬೆಲೆಯ ನೋಟು ರದ್ದು ಮಾಡಿದ್ದಾರೆ. ಇದರರ್ಥ ಇದರಿಂದ ದೇಶಕ್ಕೆ ಲಾಭವೋ, ನಷ್ಟವೋ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವುದಿಲ್ಲ. ಮೋದಿ ಅವರ ಈ ಕೆಲಸ ದೇಶದ ಜನರಿಗೆ ತೊಂದರೆ ಆಗುತ್ತಿದೆ. ನಮ್ಮ ಸರ್ಕಾರ ರಾಜ್ಯದಲ್ಲಿ ದ್ವೇಷವನ್ನು ಕಿತ್ತೊಗೆದು, ಪ್ರೀತಿ, ಸೌಹಾರ್ದತೆ, ಸಾಮರಸ್ಯದ ಸರ್ಕಾರವಾಗಿದೆ. ನಾವು ನುಡಿದಂತೆ ನಡೆಯುತ್ತೇವೆ. ನಮ್ಮ ಭರವಸೆ ಈಡೇರಿಸುತ್ತೇವೆ.

ನಾವು ಸುಳ್ಳು ಆಶ್ವಾಸನೆ ನೀಡುವುದಿಲ್ಲ: ರಾಹುಲ್ ಗಾಂಧಿ
ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹೃದಯಪೂರ್ವಕ ನಮನಗಳು. ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಬಹುಮತ ನೀಡಿದ್ದೀರಿ. ಕಳೆದ ಐದು ವರ್ಷಗಳಲ್ಲಿ ಎದುರಾದ ಸಮಸ್ಯೆಗಳನ್ನು ನಾವು ಕಂಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಇಷ್ಟು ದೊಡ್ಡ ಗೆಲುವು ಸಿಕ್ಕಿದೆ ಎಂದು ಮಾಧ್ಯಮಗಳಲ್ಲಿ ವಿಶ್ಲೇಷಣೆ ನೋಡಿದ್ದೀರಿ. ಅನೇಕರು ಅನೇಕ ಬಗೆಯ ವಿಶ್ಲೇಷಣೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಈ ಗೆಲವು ಸಿಗಲು ಕಾರಣ ಎಂದರೆ ಕಾಂಗ್ರೆಸ್ ಪಕ್ಷ ರಾಜ್ಯದ ಬಡವರು, ರೈತರು, ಕಾರ್ಮಿಕರು, ಶೋಷಿತರು, ದಲಿತರ ಬೆನ್ನಿಗೆ ನಿಂತಿರುವುದು.
ನಮ್ಮ ಬಳಿ ಸತ್ಯ ಹಾಗೂ ಬಡ ಜನರಿದ್ದರು. ಬಿಜೆಪಿ ಬಳಿ ಹಣ, ಅಧಿಕಾರ, ಪೊಲೀಸ್ ಅಧಿಕಾರಿಗಳು ಎಲ್ಲವೂ ಇತ್ತು. ಅವರ ಈ ಎಲ್ಲಾ ಶಕ್ತಿಗಳನ್ನು ಕರ್ನಾಟಕದ ಜನ ಮಣಿಸಿದ್ದಾರೆ. ಜನ ಅವರ ಭ್ರಷ್ಟಾಚಾರ, ದ್ವೇಷವನ್ನು ಮಣಿಸಿದ್ದೀರಾ. ಈ ಚುನಾವಣೆಯಲ್ಲಿ ರಾಜ್ಯದ ಜನ ದ್ವೇಷವನ್ನು ಒಡೆದೋಡಿಸಿ ಪ್ರೀತಿ ಸಾಮರಸ್ಯಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ದ್ವೇಷದ ಮಾರುಕಟ್ಟೆಯಲ್ಲಿ ಕರ್ನಾಟಕದ ಜನ ಪ್ರೀತಿ ಸಾಮರಸ್ಯದ ಅಂಗಡಿ ತೆರೆದಿದ್ದಾರೆ. ಕಳೆದ ಐದು ವರ್ಷಗಳಿಂದ ನೀವು ಭ್ರಷ್ಟಾಚಾರ ನೋಡಿದ್ದೀರಿ.
ನಾವು ನಿಮಗೆ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೆವು. ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹಧನ, ಗೃಹಜ್ಯೋತಿ ಮೂಲಕ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ, ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಪ್ರತಿ ತಿಂಗಳು ಉಚಿತ, ಯುವನಿಧಿ ಮೂಲಕ ಪದವೀಧರ ನಿರುದ್ಯೋಗ ಯುವಕರಿಗೆ ಪ್ರತಿ ತಿಂಗಳು 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ. ನಂತರ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಸಂಚಾರ ವ್ಯವಸ್ಥೆ.
ನಾವು ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ. ನುಡಿದಂತೆ ನಡೆಯುತ್ತೇವೆ. ಮುಂದಿನ ಕೆಲವೇ ಗಂಟೆಗಳಲ್ಲಿ ರಾಜ್ಯದ ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಈ ಐದೂ ಗ್ಯಾರಂಟಿ ಯೋಜನೆಗಳು ಕಾನೂನು ರೂಪಪಡೆದು ಜಾರಿಗೆ ಬರಲಿದೆ. ನಾವು ಹೇಳಿದ್ದನ್ನು ಮಾಡಿ ತೋರಿಸುತ್ತೇವೆ. ಸರ್ಕಾರದ ಆದ್ಯತೆ ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಯುವಕರ ಹಿತ ಕಾಪಾಡಿ ಅವರ ಭವಿಷ್ಯ ಭದ್ರಗೊಳಿಸುವುದಾಗಿದೆ.












Click it and Unblock the Notifications