ಎನ್ ಡಿಎ ಅಧಿಕಾರಕ್ಕೆ ಬಂದ್ರೆ ರಾಜ್ಯಪಾಲರು ಮನೆಗೆ
ಬೆಂಗಳೂರು, ಮೇ.6 : ಲೋಕಸಭೆ ಚುನಾವಣೆ ಮುಗಿಯುತ್ತ ಬಂದಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ. ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕರ್ನಾಟಕ ಸೇರಿ ಹಲವು ರಾಜ್ಯಗಳ ರಾಜ್ಯಪಾಲರು ಬದಲಾವಣೆಯಾಗುವ ಸಾಧ್ಯತೆ ಇದೆ.
ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವ ಕನಿಷ್ಠ ಅರ್ಧ ಡಜನ್ ರಾಜ್ಯಪಾಲರ ಬದಲಾವಣೆಯಾಗಲಿದೆ. ರಾಜಸ್ಥಾನ ರಾಜ್ಯಪಾಲೆ ಮರ್ಗಾರೆಟ್ ಆಳ್ವ, ಮಹಾರಾಷ್ಟ್ರದ ಶಂಕರನಾರಾಯಣ, ಗುಜರಾತ್ ನ ಕಮಲಾ ಬೆನಿವಾಲ್, ಜಾರ್ಖಂಡ್ ನ ಸಹೀದ್ ಅಹ್ಮದ್, ಕೇರಳದ ಶೀಲಾದೀಕ್ಷಿತ್ ಮತ್ತು ಪಂಜಾಬ್ ನ ಶಿವರಾಜ್ ಪಾಟೀಲ್ ಮತ್ತು ಕರ್ನಾಟಕ ಎಚ್.ಆರ್.ಭಾರದ್ವಾಜ್ ಅವರು ಬದಲಾವಣೆಯಾಗಲಿದ್ದಾರೆ. [ರಾಜ್ಯಪಾಲರ ಬದಲಾವಣೆಗೆ ಬಿಜೆಪಿ ಮನವಿ]

ಕರ್ನಾಟಕದ ರಾಜ್ಯಪಾಲರು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸರ್ಕಾರದೊಂದಿಗೆ ಸದಾ ಸಂಘರ್ಷಕ್ಕೆ ಇಳಿದಿದ್ದರು. ಸಾರ್ವಜನಿಕವಾಗಿ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸುವ, ಚಾಟಿ ಬೀಸುವ ಕೆಲಸ ಮಾಡುತ್ತಿದ್ದರು. ಆದ್ದರಿಂದ ಎಚ್.ಆರ್.ಭಾರದ್ವಾಜ್ ಮೇಲೆ ಬಿಜೆಪಿ ನಾಯಕರಿಗೆ ಅಸಮಾಧಾನವಿದೆ.
ಸದ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ರಾಜ್ಯಪಾಲರ ಟೀಕೆ-ಟಿಪ್ಪಣಿಗಳು ನಿಂತಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಅವರು ಈಗಾಲೂ ಚಾಟಿ ಬೀಸುತ್ತಿದ್ದಾರೆ. ಆದ್ದರಿಂದ ರಾಜ್ಯಪಾಲರನ್ನು ಬದಲಾವಣೆ ಮಾಡುವ ಮಾತು ದೆಹಲಿ ವಲಯದಿಂದಲೇ ಕೇಳಿಬರುತ್ತಲಿದೆ. [ಸಿಎಂ ಸಿದ್ದು ಕಿವಿ ಹಿಂಡಿದ ರಾಜ್ಯಪಾಲರು]
ಹಿಂದೆಯೂ ಆಗಿತ್ತು : ಹೊಸ ಸರ್ಕಾರ ಬಂದ ನಂತರ ರಾಜ್ಯಪಾಲರು ಬದಲಾವಣೆ ಆಗುವುದು ಹೊಸದೇನಲ್ಲ ಹಿಂದೆಯೂ ಈ ರೀತಿ ನಡೆದಿತ್ತು. 2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ, ಆರ್‌ಎಸ್‌ಎಸ್ ಹಿನ್ನೆಲೆಯ ಉತ್ತರ ಪ್ರದೇಶ ರಾಜ್ಯಪಾಲ ವಿಷ್ಣುಕಾಂತ್ ಶಾಸ್ತ್ರಿ, ಗುಜರಾತ್ ನ ಕೈಲಾಸಪತಿ ಮಿಶ್ರಾ, ಗೋವಾದ ಬಾಬು ಪರಮಾನಂದ ಅವರನ್ನು ಬದಲಾವಣೆ ಮಾಡಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಂಡಿತ್ತು.












Click it and Unblock the Notifications