ಕರ್ನಾಟಕಕ್ಕೆ ಹೊಸ 3 ಮೆಡಿಕಲ್ ಕಾಲೇಜು ಮಂಜೂರು, ಡಿಕೆಶಿಗೆ ಹಿನ್ನಡೆ
ಬೆಂಗಳೂರು, ಜುಲೈ 09: ಕರ್ನಾಟಕದಲ್ಲಿ ವೈದ್ಯಕೀಯ ಕೋರ್ಸ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. 2024-25ನೇ ಸಾಲಿನಿಂದಲೇ ರಾಜ್ಯಕ್ಕೆ ಮೂರು ಹೊಸ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಆದರೆ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ಗೆ ಹಿನ್ನಡೆಯಾಗಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಮೂರು ಹೊಸ ಮೆಡಿಕಲ್ ಕಾಲೇಜು ಆರಂಭಿಸಲು ಒಪ್ಪಿಗೆ ನೀಡಿದೆ. ಇದರಿಂದಾಗಿ ರಾಜ್ಯದಲ್ಲಿ ಹೆಚ್ಚುವರಿಯಾಗಿ 350 ಮೆಡಿಕಲ್ ಸೀಟು ಲಭ್ಯವಾಗಲಿದೆ.

ಬೆಂಗಳೂರು ನಗರದ ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ 150 ಸೀಟು, ಪಿಇಎಸ್ ವಿವಿ ಹಾಗೂ ವೈದ್ಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ 100 ಸೀಟು, ಬಾಗಲಕೋಟೆಯ ಎಸ್ಆರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 100 ಸೀಟುಗಳ ಭರ್ತಿಗೆ ಒಪ್ಪಿಗೆ ನೀಡಲಾಗಿದೆ.
ಎನ್‌ಎಂಸಿ ನಿಗದಿ ಮಾಡಿರುವ ಮಾನದಂಡಗಳಿಗಿಂತ ಹೆಚ್ಚಿನ ಸೌಲಭ್ಯಗಳು ತಮ್ಮಲ್ಲಿವೆ. ವಿಶಾಲವಾದ ಕ್ಯಾಂಪಸ್ ಇದೆ. ಆದ್ದರಿಂದ 150 ಸೀಟುಗಳಿಗೆ ಅನುಮತಿ ನೀಡಬೇಕು ಎಂದು ಬಿಜಿಎಸ್ ಸಲ್ಲಿಸಿದ್ದ ಮನವಿಯನ್ನು ಎನ್‌ಎಂಸಿ ಪುರಸ್ಕರಿಸಿದೆ.
5 ಕಾಲೇಜುಗಳಿಗೆ ಮನವಿ: ಕರ್ನಾಟಕದಲ್ಲಿ ಈ ಬಾರಿ 5 ವೈದ್ಯಕೀಯ ಕಾಲೇಜು ಆರಂಭಿಸಲು ಒಪ್ಪಿಗೆ ನೀಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಮನವಿ ಸಲ್ಲಿಕೆ ಮಾಡಲಾಗಿತ್ತು. ಈ ಪೈಕಿ ಮೂರು ಕಾಲೇಜುಗಳಿಗೆ ಒಪ್ಪಿಗೆ ಸಿಕ್ಕಿದೆ.
ವೈದ್ಯಕೀಯ ಕಾಲೇಜು ಆರಂಭದ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ಗೆ ಹಿನ್ನಡೆಯಾಗಿದೆ. ರಾಮನಗರ ಮತ್ತು ಕನಕಪುರದಲ್ಲಿ ಕಾಲೇಜು ಆರಂಭಿಸಲು ಅವರು ಪ್ರಯತ್ನ ನಡೆಸಿದ್ದರು. ಆದರೆ ಕೆಲವು ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಹೊಸ ಕಾಲೇಜು ಆರಂಭಿಸಲು ಅನುಮತಿ ನೀಡಲಾಗಿಲ್ಲ.
ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ ಸಿಬ್ಬಂದಿ ಕೊರತೆ, 650 ಬೆಡ್‌ಗಳು ಇರದ ಕಾರಣ ಕಾಲೇಜು ಆರಂಭಕ್ಕೆ ಒಪ್ಪಿಗೆ ಸಿಕ್ಕಿಲ್ಲ. ರಾಜ್ಯದಲ್ಲಿ ಒಟ್ಟು 70 ಮೆಡಿಕಲ್ ಕಾಲೇಜುಗಳಿದ್ದವು. ಸದ್ಯ 3 ಕಾಲೇಜು ಆರಂಭಕ್ಕೆ ಅನುಮತಿ ಸಿಕ್ಕಿದ್ದು, ಕಾಲೇಜುಗಳ ಸಂಖ್ಯೆ 73 ಆಗಿದೆ.
ಸದ್ಯ ರಾಜ್ಯದಲ್ಲಿ 11,745 ವೈದ್ಯಕೀಯ ಸೀಟುಗಳಿವೆ. 2024-25ನೇ ಸಾಲಿನಿಂದ 350 ಸೀಟುಗಳು ಏರಿಕೆಯಾಗಿವೆ. ರಾಮನಗರ ಮತ್ತು ಕನಕಪುರದಲ್ಲಿ ಕಾಲೇಜು ಆರಂಭಕ್ಕೆ ಒಪ್ಪಿಗೆ ಸಿಕ್ಕಿದರೆ ಇನ್ನೂ 300 ಸೀಟು ಹೆಚ್ಚುವರಿಯಾಗಿ ಸಿಗಲಿದೆ.
ದೇಶದಲ್ಲಿ ಅತಿ ಹೆಚ್ಚು ಮೆಡಿಕಲ್ ಕಾಲೇಜು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 74 ಮೆಡಿಕಲ್ ಕಾಲೇಜುಗಳಿವೆ. ಉತ್ತರ ಪ್ರದೇಶ 68, ಮಹರಾಷ್ಟ್ರ 67, ತೆಲಂಗಾಣದಲ್ಲಿ 56 ಕಾಲೇಜುಗಳಿವೆ.
50, 100 ಮತ್ತು 150 ಸೀಟುಗಳನ್ನು ಹೊಂದಿರುವಂತೆ ವೈದ್ಯಕೀಯ ಕಾಲೇಜು ಆರಂಭಿಸಲು ಎನ್‌ಎಂಸಿ ಅನುಮತಿ ನೀಡುತ್ತದೆ. ಕಾಲೇಜು ಆರಂಭಕ್ಕೆ ಸುಸಜ್ಜಿತ ಆಸ್ಪತ್ರೆ ಇರಬೇಕು, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಇರಬೇಕಿದೆ. ಆಸ್ಪತ್ರೆಯಲ್ಲಿ ಕನಿಷ್ಠ 200 ಹಾಸಿಗೆಗಳು ಇರಬೇಕು.
ರಾಮನಗರ ಮತ್ತು ಕನಕಪುರದಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲು ಡಿ. ಕೆ. ಶಿವಕುಮಾರ್ ಬಹಳ ಪ್ರಯತ್ನ ನಡೆಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಅವರು ಉಪಮುಖ್ಯಮಂತ್ರಿಯಾದ ಬಳಿಕ ತವರು ಜಿಲ್ಲೆಗೆ ವೈದ್ಯಕೀಯ ಕಾಲೇಜು ತರಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಮನಗರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆರಂಭವಾಗುವ ಸಾಧ್ಯತೆ ಇದೆ.












Click it and Unblock the Notifications