ನೀರಿನ ನಲ್ಲಿ ಉದ್ಘಾಟನೆಗೂ ಕರ್ನಾಟಕಕ್ಕೆ ಬರಲು ಮೋದಿ ತಯಾರು!
ಬೆಂಗಳೂರು, ಜನವರಿ 19; ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದರು. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಪ್ರವಾಸ ಮುಗಿಸಿ ಅವರು ವಾಪಸ್ ತೆರಳಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದೆ. ಮೋದಿ ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಕರ್ನಾಟಕದ ಚುನಾವಣೆ ಹಿನ್ನಲೆಯಲ್ಲಿ ಎಂದು ಕಿಡಿ ಕಾರಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆಯೇ @narendramodi ಅವರು ನೀರಿನ ನಲ್ಲಿ, ಚರಂಡಿ ಉದ್ಘಾಟನೆಗೂ ಕರ್ನಾಟಕಕ್ಕೆ ಬರಲು ತಯಾರಾಗಿದ್ದಾರೆ!
— Karnataka Congress (@INCKarnataka) January 19, 2023
ನೆರೆ ಬಂದಾಗ ಕರ್ನಾಟಕದ ಕಡೆ ತಿರುಗಿ ನೋಡದ, ಆಗಿನ ಸಿಎಂ @BSYBJP ಅವರ ಭೇಟಿಗೂ ಸತಾಯಿಸಿದ ಮೋದಿ ಈಗ ಮೂರು ದಿನಕ್ಕೊಮ್ಮೆ ಕರ್ನಾಟಕದಲ್ಲಿರುತ್ತಾರೆ.
ರಾಜ್ಯಕ್ಕೆ ಖರ್ಚು ಬಿಟ್ಟರೆ ಪ್ರಯೋಜನ ಮಾತ್ರ ಶೂನ್ಯ!
ಕಾಂಗ್ರೆಸ್ ಟ್ವೀಟ್‌ನಲ್ಲಿ, 'ಚುನಾವಣೆ ಸಮೀಪಿಸುತ್ತಿದ್ದಂತೆಯೇ Narendra Modi ಅವರು ನೀರಿನ ನಲ್ಲಿ, ಚರಂಡಿ ಉದ್ಘಾಟನೆಗೂ ಕರ್ನಾಟಕಕ್ಕೆ ಬರಲು ತಯಾರಾಗಿದ್ದಾರೆ!' ಎಂದು ವಾಗ್ದಾಳಿ ನಡೆಸಿದೆ.

'ನೆರೆ ಬಂದಾಗ ಕರ್ನಾಟಕದ ಕಡೆ ತಿರುಗಿ ನೋಡದ, ಆಗಿನ ಸಿಎಂ BS Yediyurappa ಅವರ ಭೇಟಿಗೂ ಸತಾಯಿಸಿದ ಮೋದಿ ಈಗ ಮೂರು ದಿನಕ್ಕೊಮ್ಮೆ ಕರ್ನಾಟಕದಲ್ಲಿರುತ್ತಾರೆ. ರಾಜ್ಯಕ್ಕೆ ಖರ್ಚು ಬಿಟ್ಟರೆ ಪ್ರಯೋಜನ ಮಾತ್ರ ಶೂನ್ಯ!' ಎಂದು ಟೀಕೆ ಮಾಡಿದೆ.
#ModiLies ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. '2018ರಲ್ಲಿ ಪ್ರಧಾನಿ ಮೋದಿಯವರು ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ (MSP) ಯನ್ನು ಉತ್ಪಾದನಾ ವೆಚ್ಚಕ್ಕಿಂತ 1.5 ಪಟ್ಟು ಹೆಚ್ಚಿಸಿದ್ದೇವೆ ಎಂದಿದ್ದರು. ಆದರೆ ಇದು ರೈತರ ದಾರಿ ತಪ್ಪಿಸುವ ಹೇಳಿಕೆಯಾಗಿತ್ತು, ವಾಸ್ತವವಾಗಿ ಸ್ವಾಮಿನಾಥನ್ ವರದಿ ಅನ್ವಯ ಬೆಂಬಲ ಬೆಲೆ ಹೆಚ್ಚಿಸಿಲಾಗಿಲ್ಲ' ಎಂದು ಆರೋಪಿಸಿದೆ.
'ಮೋದಿ ಮತ್ತು ಸುಳ್ಳು ಎರಡು ಅನ್ವರ್ಥ ನಾಮಗಳು. ಸುಳ್ಳು ಹೇಳುವುದರಲ್ಲಿ ಈ ದೇಶದ ಪ್ರಧಾನಿ ನಿಸ್ಸೀಮರು. 2018ರಲ್ಲಿ, ದೇಶದ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ನೀಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದರು ಮೋದಿ. ಆದರೆ ವಾಸ್ತವವಾಗಿ ಈ ಮಾಹಿತಿ ಸುಳ್ಳಾಗಿತ್ತು' ಎಂದು ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ದೂರಿದೆ.

ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್, '2022 ರ ಒಳಗಾಗಿ ರೈತರ ಆದಾಯ ಡಬಲ್ ಮಾಡಿಬಿಡುತ್ತೇನೆ ಎಂದಿದ್ದರು ಮೋದಿ.
ಆದರೆ ವಾಸ್ತವದಲ್ಲಿ ಡಬಲ್ ಆಗಿದ್ದು,
* ರೈತರ ಕೃಷಿ ವೆಚ್ಚ
* ಗೊಬ್ಬರದ ಬೆಲೆ
* ಡೀಸೆಲ್ ಬೆಲೆ
* ಯಂತ್ರೋಪಕರಣಗಳ ಬಾಡಿಗೆ
* ನೀರಾವರಿ ಪೈಪ್‌ಗಳ ಬೆಲೆ
ಆದಾಯದ ಬದಲು ಕಷ್ಟಗಳನ್ನು ಡಬಲ್ ಮಾಡಿದ Narendra Modi ಅವರೇ, ನಿಮ್ಮ ಸುಳ್ಳುಗಳಿಗೆ ಕೊನೆ ಎಂದು?' ಕಾಂಗ್ರೆಸ್ ಕೇಳಿದೆ.
ಸಿದ್ದರಾಮಯ್ಯ ವಾಗ್ದಾಳಿ; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾವೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
"ನರೇಂದ್ರ ಮೋದಿ ಅವರೇ ಬಿಜೆಪಿಯ ಬಂಡವಾಳ. ಯಾಕೆಂದರೆ ರಾಜ್ಯದ ಬಿಜೆಪಿ ಜನರಿಗೆ ಹಳಸಲಾಗಿದೆ. ತಮ್ಮದು ಭ್ರಷ್ಟ ಸರ್ಕಾರ ಆದರೂ ಕೂಡ ಮೋದಿ ಅವರನ್ನು ನೋಡಿ ಜನ ತಮಗೆ ಮತ್ತೆ ಮತ ನೀಡುತ್ತಾರೆ ಎಂಬ ಭ್ರಮೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಇದ್ದಾರೆ" ಎಂದು ಟೀಕಿಸಿದರು.
"ನ ಖಾವೂಂಗ, ನ ಖಾನೆದೂಂಗ ಎಂದಿದ್ದ ಮೋದಿ ಅವರು ರಾಜ್ಯ ಬಿಜೆಪಿ ನಾಯಕರಿಗೆ ಯಾಕೆ ಲಂಚ ತಿನ್ನಲು ಬಿಟ್ಟಿದ್ದಾರೆ? ಕೆಂಪಣ್ಣ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ. ಇವರು ಮೋದಿ ಅವರಿಗೆ ಪತ್ರ ಬರೆದಿದ್ದಾರೆ" ಎಂದರು.
"ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ, ಅದಕ್ಕೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಾನು ಕೊಡುತ್ತೇನೆ ಎಂದು ಕೆಂಪಣ್ಣ ಹೇಳಿದ್ದರು. ಬೇರೆಯವರ ಧಮ್, ತಾಕತ್ ಪ್ರಶ್ನೆ ಮಾಡುವ ಬೊಮ್ಮಾಯಿ ಅವರಿಗೆ ಧಮ್, ತಾಕತ್ ಇದ್ದರೆ ನ್ಯಾಯಾಂಗ ತನಿಖೆ ಮಾಡಿಸಲಿ" ಎಂದು ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಸವಾಲು ಹಾಕಿದರು.
"ಆಪರೇಷನ್ ಕಮಲಕ್ಕೆ ಶಾಸಕರಿಗೆ 30 ರಿಂದ 35 ಕೋಟಿ ಹಣ ಕೊಟ್ಟಿದ್ದು ಯಡಿಯೂರಪ್ಪ ಅವರ ಹಣ. ಯಡಿಯೂರಪ್ಪ ಅವರ ಮನೆಯಲ್ಲೇ ಯಾರಿಗೆ ಗುತ್ತಿಗೆ ಕೆಲಸ ಕೊಡಬೇಕು, ಯಾರಿಂದ ಎಷ್ಟು ವಸೂಲಿ ಮಾಡಬೇಕು ಎಂದು ತೀರ್ಮಾನವಾಗುತ್ತದೆ. ಇದನ್ನು ಹೇಳಿದ್ದು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್. ಯತ್ನಾಳ್ ಅವರು ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ ತಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಆಗಲು 2000 ಕೋಟಿ ಮತ್ತು ಸಚಿವರಾಗಲು 100 ಕೋಟಿ ಲಂಚ ಕೊಡಬೇಕು ಎಂದರು. ಇದೆಲ್ಲ ನಿಮ್ಮ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ವ ಬೊಮ್ಮಾಯಿ ಅವರೇ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.












Click it and Unblock the Notifications