ದೇಶವನ್ನು ಕಾಂಗ್ರೆಸ್ ಮುಕ್ತವಾಗಿಸೋಣ : ಗುಲ್ಬರ್ಗದಲ್ಲಿ ಮೋದಿ

ಗುಲ್ಬರ್ಗ, ಫೆ. 28 : ಬಿಜೆಪಿ ಪ್ರಧಾನಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಶುಕ್ರವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದರು. ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಗುಲ್ಬರ್ಗದಲ್ಲಿ ಭಾರತ ಗೆಲ್ಲಿಸಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ವಿರುದ್ಧ ಕಟು ಶಬ್ದಗಳಿಂದ ವಾಗ್ದಾಳಿ ನಡೆಸಿದರು. ದೇಶವನ್ನು ಕಾಂಗ್ರೆಸ್ ಮುಕ್ತವಾಗಿಸೋಣ ಎಂದು ಕರೆ ನೀಡಿದರು.

ಗುಲ್ಬರ್ಗದ ಜೇವರ್ಗಿ ರಸ್ತೆಯ ಅಟಲ್ ಬಿಹಾರಿ ವಾಜಪೇಯಿ ಲೇಔಟ್ ವಿಶಾಲ ಮೈದಾನದಲ್ಲಿ ನರೇಂದ್ರ ಮೋದಿ ಭಾರತ ಗೆಲ್ಲಿಸಿ ಸಮಾವೇಶ ಆಯೋಜಿಸಲಾಗಿತ್ತು. ಜನರಿಂದ ತುಂಬಿ ತುಳುಕುತ್ತಿದ್ದ ಸಮಾವೇಶಕ್ಕೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ನರೇಂದ್ರ ಮೋದಿ, ಪಕ್ಷದ ಹಿರಿಯ ನಾಯಕ ವೆಂಕಯ್ಯ ನಾಯ್ಡು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಮುಂತಾದವರೊಂದಿಗೆ ಆಗಮಿಸಿದರು. [ಮೋದಿ ದಾವಣಗೆರೆಯಲ್ಲಿ ಹೇಳಿದ್ದೇನು?]

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವರಾದ ರೇವೂ ನಾಯಕ ಬೆಳಮಗಿ, ಅರವಿಂದ ಲಿಂವಾವಳಿ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಸದಸ್ಯೆ ತಾರಾ ಮುಂತಾದವರು ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದ ಮಾಜಿ ಸಚಿವ ರಾಜೂಗೌಡ (ನರಸಿಂಹ ನಾಯಕ್) ಸಮಾವೇಶದಲ್ಲಿ ಮೋದಿ ಸಮ್ಮಖದಲ್ಲಿ ಬಿಜೆಪಿಗೆ ಮರಳಿದರು. [ಮೋದಿ ಮಂಗಳೂರಿನಲ್ಲಿ ಹೇಳಿದ್ದೇನು?]

rally in Gulbarga

ಕಳೆದ ವಿಧಾನಸಭೆ ಚುನಾವಣೆಯಲ್ಲಿ 9 ಕ್ಷೇತ್ರಗಳಿರುವ ಗುಲ್ಬರ್ಗ ಜಿಲ್ಲೆಯಲ್ಲಿ ಬಿಜೆಪಿ ಕೇವಲ ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿತ್ತು. ಶುಕ್ರವಾರ ಮೋದಿ ಅವರ ಸಮಾವೇಶ ನಡೆಸುವ ಮೂಲಕ ಜಿಲ್ಲೆಯ ಕಾರ್ಯಕರ್ತರನ್ನು ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧಗೊಳಿಸಿದೆ. ಅಂದಹಾಗೆ ಈ ಬಾರಿ ಗುಲ್ಬರ್ಗ ಕ್ಷೇತ್ರದಿಂದ ಮಾಜಿ ಸಚಿವ ರೇವು ನಾಯಕ ಬೆಳಮಗಿ ಅವರಿಗೆ ಪಕ್ಷ ಟಿಕೆಟ್ ನೀಡುವ ಸಾಧ್ಯತೆ ಇದೆ. [ಮೋದಿ ಸಮಾವೇಶದ ಚಿತ್ರಗಳು]

ಮೋದಿ ಭಾಷಣದ ಮುಖ್ಯಾಂಶಗಳು

* ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಮೊದಲ ಬಾರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು. ದೇಶವನ್ನು ಕಾಂಗ್ರೆಸ್ ಮುಕ್ತವಾಗಿಸುವ ಬಿಜೆಪಿಯ ಸಂಕಲ್ಪಕ್ಕೆ ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಇಷ್ಟು ಜನರು ಸೇರುವ ಮೂಲಕ ಗುಲ್ಬರ್ಗದಲ್ಲಿ ಇತಿಹಾಸ ನಿರ್ಮಾಣ ಮಾಡಿದ್ದೀರಿ. 2014ರ ಲೋಕಸಭೆ ಚುನಾವಣೆಯಲ್ಲಿಯೂ ಜಿಲ್ಲೆಯಲ್ಲಿ ಇಂತಹ ಫಲಿತಾಂಶ ನೀಡಬೇಕು ಎಂದು ಕರೆ ನೀಡಿದರು. [ಮಹಾತ್ಮ ಗಾಂಧಿ ಅವರ ಕನಸನ್ನು ನನಸು ಮಾಡೋಣ!]

* ಕಾಂಗ್ರೆಸ್ ಪಕ್ಷ ಜನರಿಗೆ ಎಂತಹ ವಂಚನೆ ಮಾಡಿದೆ ಎಂಬುದು ಜನರಿಗೆ ತಿಳಿದಿದೆ. ಚುನಾವಣೆಗೆ ಅವರು ಮತ ಕೇಳಲು ಬಂದಾಗ, ಹಿಂದಿನ ಚುನಾವಣೆ ಪ್ರಣಾಳಿಕೆಯಲ್ಲಿ ಏನು ಹೇಳಿದ್ದಿರಿ? ನೀವು ಮಾಡಿರುವುದು ಏನು? ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿ ಎಂದ ಮೋದಿ. "ಮೇಡಂ ಸೇ ಪೂಚೋ" ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿ ಅವರಿಗೆ ಕುಟುಕಿದರು.

* ಗುಲ್ಬರ್ಗದ ಮಣ್ಣಿಗೆ ಕಾಲಿಟ್ಟ ನಾನು, ಇಂದು ಸರ್ದಾರ್ ವಲ್ಲಭಾಯಿ ಪಟೇಲ್ ಅವರನ್ನು ನೆನಪುಮಾಡಿಕೊಳ್ಳಬೇಕು. ದೇಶದಿಂದ ನಿಜಾಮರನ್ನು ಓಡಿಸಿ ಗುಲ್ಬರ್ಗಕ್ಕೆ ಸ್ವತಂತ್ರ್ಯ ನೀಡಿದ್ದು ಸರ್ದಾರ್ ಪಟೇಲ್. ಇಲ್ಲದಿದ್ದರೆ ಇಂದು ನಾವು ಗುಲ್ಬರ್ಗ, ಹೈದರಾಬಾದ್ ಗೆ ಹೋಗಬೇಕಾದರೆ ಪಾಕಿಸ್ತಾನದ ವೀಸಾ ಪಡೆಯಬೇಕಾಗಿತ್ತು. ಸರ್ದಾರ್ ಪಟೇಲ್ ದೇಶವನ್ನು ಒಗ್ಗೂಡಿಸಿದರೆ, ಕಾಂಗ್ರೆಸ್ ದೇಶವನ್ನು ಒಡೆಯುತ್ತಿದೆ ಎಂದು ಮೋದಿ ಆರೋಪಿಸಿದರು.

* ಕಾಂಗ್ರೆಸ್ ದೇಶವನ್ನು ಒಡೆಯುತ್ತಿದೆ ಎಂದು ಆರೋಪಿಸಿದ ಮೋದಿ ಆಂಧ್ರಪ್ರದೇಶ ರಾಜ್ಯಕ್ಕೆ "10 ನೇ ನಂಬರ್ ಗಾಂಧಿ ಏನು ಮಾಡಿದರು" (10 ನೇ ಜನಪಥ್ ರಸ್ತೆಯಲ್ಲಿ ಅವರ ನಿವಾಸವಿದೆ ಆದ್ದರಿಂದ 10ನೇ ನಂಬರಿನ ಗಾಂಧಿ ಎಂದು ಕರೆದೆ) ಎಂದು ಮೋದಿ ಪ್ರಶ್ನಿಸಿದರು. ಮಗುವನ್ನು ಹೆತ್ತ ನಂತರ ತಾಯಿಯನ್ನು ಕೊಲ್ಲಿ ಎಂಬುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಇದರಿಂದಾಗಿ ದೇಶ ವಿಭಜನೆಯಾಗುತ್ತಿದೆ ಎಂದು ಮೋದಿ ಆತಂಕ ವ್ಯಕ್ತಪಡಿಸಿದರು.

* ಆಂಧ್ರಪ್ರದೇಶವನ್ನು ವಿಭಜನೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಸೀಮಾಂಧ್ರವನ್ನು ಅನಾಥವನ್ನಾಗಿ ಮಾಡಿದೆ. ದೆಹಲಿಯಲ್ಲಿ ಕುಳಿತ ಸರ್ಕಾರ ದೇಶದ ಯಾವ ರಾಜ್ಯವನ್ನು ಅನಾಥವಾಗಿಸಲು ಬಿಡಬಾರದು, ಆದರೆ ಕಾಂಗ್ರೆಸ್ ತನ್ನ ಕರ್ತವ್ಯ ನಿಭಾಯಿಸಲು ವಿಫಲವಾಗಿದೆ. ಇಂತಹ ಸರ್ಕಾರ ನಿಮಗೆ ಬೇಕೆ ಎಂದು ಮೋದಿ ಪ್ರಶ್ನಿಸಿದರು.

ಸಿದ್ದುಗೆ ಕುಟುಕಿದ ಮೋದಿ : ಇದೇ ಮೊದಲ ಬಾರಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ವಿರುದ್ಧ ನರೇಂದ್ರ ಮೋದಿ ರಾಜ್ಯದಲ್ಲಿ ವಾಗ್ದಾಳಿ ನಡೆಸಿದರು. ಕರ್ನಾಟಕ ಅಭಿವೃದ್ಧಿಯಾಗುತ್ತಿತ್ತು. ಆದರೆ, ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ನಾಯಕರು ಇನ್ನೂ "ಹೂವಿನ ಮಾಲೆ ಹಾಕಿಕೊಂಡು ತಿರುಗಾಡುತ್ತಿದ್ದಾರೆ" ಅವರು ಜನರ ಸಮಸ್ಯೆಯನ್ನು ಬಗೆಹರಿಸುವತ್ತ ಗಮನಹರಿಸುತ್ತಿಲ್ಲ ಎಂದು ಮೋದಿ ಕುಟುಕಿದರು. ಕಾಂಗ್ರೆಸ್ ಪಕ್ಷದ ಮೇಲೆ ಜನರು ಭರವಸೆ ಇಡಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು.

* ಕಾಂಗ್ರೆಸ್ ಪಕ್ಷದ ಮತ್ತೊಂದು ಮುಖ ಭ್ರಷ್ಟಾಚಾರ, ವಂಚನೆ, ವೋಟ್ ಬ್ಯಾಂಕ್ ರಾಜಕಾರಣ ಎಂದು ಟೀಕಿಸಿದ ಮೋದಿ, ದೇಶವನ್ನು ಕಾಂಗ್ರೆಸ್ ಮುಕ್ತವಾಗಿಸೋಣ ಎಂದು ಸಂಕಲ್ಪ ಮಾಡಿ. ಭ್ರಷ್ಟಾಚಾರದಿಂದ ಪಾರದರ್ಶಕ ಆಡಳಿದತ್ತ ತೆರಳೋಣ ಅದಕ್ಕಾಗಿ ಬಿಜೆಪಿ ಬೆಂಬಲಿಸಿ ಎಂದು ಮೋದಿ ಕರೆ ನೀಡಿದರು.

* 2014ರ ಲೋಕಸಭೆ ಚುನಾವಣೆ ನಮ್ಮ ಮುಂದಿದೆ ಚುನಾವಣೆ ನಂತರ ಕಾಂಗ್ರೆಸ್ ತನ್ನ ಕಚೇರಿಯಿಂದ ಹೊರಬರುವುದಿಲ್ಲ. ಕಾಂಗ್ರೆಸ್ ಮೊದಲು ದೇಶವನ್ನು ವಿಭಜಿಸಿ ಅಧಿಕಾರ ಪಡೆಯಿತು. ನಂತರ ಭಾ‍‍ಷೆಯ ಆಧಾರದ ಮೇಲೆ ವಿಭಜನೆ ಆರಂಭಿಸಿತು. ನಂತರ ನೀರಿನ ಹಂಚಿಕೆ ಆಧಾರದ ಮೇಲೆ ರಾಜ್ಯವನ್ನು ಒಡೆಯಲು ಆರಂಭಿಸಿತು ಇಂತಹ ಸರ್ಕಾರ ನಿಮಗೆ ಬೇಕೆ ಎಂದು ಮೋದಿ ಪ್ರಶ್ನಿಸಿದರು.

* ಕಾಂಗ್ರೆಸ್ ಸರ್ಕಾರ ಜನರ ಅಭಿವೃದ್ಧಿ ಮಾಡುವುದಿಲ್ಲ, ರೈತರ ಹಿತ ಕಾಪಾಡುವುದಿಲ್ಲ, ದೇಶವನ್ನು ಅಭಿವೃದ್ಧಿ ಮಾಡುವುದಿಲ್ಲ, ಯುವಕರಿಗೆ ಉದ್ಯೋಗ ನೀಡುವುದಿಲ್ಲ. ಹಾಗಾದರೆ ಕಾಂಗ್ರೆಸ್ ಪಕ್ಷದ ಅವಶ್ಯಕತೆ ದೇಶಕ್ಕೆ ಇದೆಯೇ ಎಂದು ಸಮಾವೇಶದಲ್ಲಿದ್ದ ಜನರನ್ನು ಪ್ರಶ್ನಿಸುವ ಮೂಲಕ ಮೋದಿ ಚಪ್ಪಾಳೆ ಗಿಟ್ಟಿಸಿದರು.

* ನಾನು ಒಂದು ರೂಪಾಯಿ ಅನ್ನು ನನಗಾಗಿ ಉಪಯೋಗಿಸುವುದಿಲ್ಲ. ದೇಶದ ಖಜಾನೆಯ ಪ್ರತಿಯೊಂದು ರೂ.ವನ್ನು ಖರ್ಚು ಮಾಡಿದ ಕುರಿತು ನಿಮಗೆ ಲೆಕ್ಕ ನೀಡುತ್ತೇನೆ, ಪಾರದರ್ಶಕ ಆಡಳಿತ ನೀಡುತ್ತೇನೆ ಎಂದು ಹೇಳಿದ ಮೋದಿ, ಕರ್ನಾಟಕ ದೇಶದ ಅಭಿವೃದ್ಧಿಗೆ ಹಲವಾರು ಕೊಡುಗೆಯನ್ನು ನೀಡಿದೆ. ದೇಶವನ್ನು ಕಾಂಗ್ರೆಸ್ ಮುಕ್ತವಾಗಿಲು ನಮ್ಮೊಂದಿಗೆ ಸಹಕರಿಸಿ ಎಂದು ಮೋದಿ ಮನವಿ ಮಾಡಿದರು.

ಅಂದಹಾಗೆ ನರೇಂದ್ರ ಮೋದಿ ಶುಕ್ರವಾರ ಸಂಜೆ ಹುಬ್ಬಳ್ಳಿಯಲ್ಲಿ ಭಾರತ ಗೆಲ್ಲಿಸಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ನರೇಂದ್ರ ಮೋದಿ ಸಮಾವೇಶವನ್ನು ನೇರವಾಗಿ http://www.narendramodi.in ಮತ್ತು http://www.india272.com/karnataka/ ವೆಬ್ ಸೈಟ್ ಗಳ ಮೂಲಕವೂ ವೀಕ್ಷಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+