ನವೆಂಬರ್ 11ರಂದು ಮೋದಿ ಕರ್ನಾಟಕ ಭೇಟಿ; 5 ಕಾರ್ಯಕ್ರಮಗಳು
ಬೆಂಗಳೂರು, ನವೆಂಬರ್ 06; ಭಾರತದ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿಯೇ 5 ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳಲಿದ್ದು, ಬಳಿಕ ಅಂದೇ ದೆಹಲಿಗೆ ವಾಪಸ್ ಆಗಲಿದ್ದಾರೆ.
ಕರ್ನಾಟಕ ಬಿಜೆಪಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಮೈದಾನದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪ್ರಮುಖವಾಗಿ ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಹಾಗೂ ಕೆಂಪೇಗೌಡ ಥೀಮ್ ಪಾರ್ಕ್ ಉದ್ಘಾಟನೆ ಮಾಡಲಿದ್ದಾರೆ. ಮೋದಿ ಐದು ಕಾರ್ಯಕ್ರಮಗಳು ಬೆಂಗಳೂರು ನಗರದಲ್ಲಿಯೇ ನಿಗದಿಯಾಗಿವೆ.
ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನರೇಂದ್ರ ಮೋದಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ, ಇಂತಹ ಸಂದರ್ಭದಲ್ಲಿ ಮೋದಿ ಭೇಟಿ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಲಿದೆ.

ಮೋದಿ ಕಾರ್ಯಕ್ರಮ 01
ನವೆಂಬರ್ 11ರ ಶುಕ್ರವಾರ ಬೆಂಗಳೂರಿನಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಶಾಸಕರ ಭವನದ ಆವರಣದಲ್ಲಿ ಕನಕದಾಸರ ಪ್ರತಿಮೆಗೆ ಗೌರವ ಸಲ್ಲಿಸಲಿದ್ದಾರೆ. ಬಳಿಕ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಮೊದಲು ನಿಗದಿಯಾಗಿರಲಿಲ್ಲ. ಶಾಸಕರ ಒತ್ತಾಯದ ಬಳಿಕ ಇದನ್ನು ಕಾರ್ಯಕ್ರಮಗಳ ಪಟ್ಟಿಯಲ್ಲಿ ಸೇರಿಸಲಾಯಿತು.

ನರೇಂದ್ರ ಮೋದಿ ಕಾರ್ಯಕ್ರಮ 02
ಪ್ರಧಾನಿ ನರೇಂದ್ರ ಮೋದಿ 2ನೇ ಕಾರ್ಯಕ್ರಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಡೆಯಲಿದೆ. ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಮೋದಿ ಚಾಲನೆ ನೀಡಲಿದ್ದಾರೆ. ಇದು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಾಗಿದೆ.
ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ವಂದೇ ಭಾರತ್ ರೈಲು 497 ಕಿ. ಮೀ. ದೂರವನ್ನು ಕೇವಲ 6 ಗಂಟೆ 40 ನಿಮಿಷದಲ್ಲಿ ಕ್ರಮಿಸಲಿದೆ. ಭಾರತದ 5ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಿದೆ.

ನರೇಂದ್ರ ಮೋದಿ ಕಾರ್ಯಕ್ರಮಗಳು 03
ನರೇಂದ್ರ ಮೋದಿ 3ನೇ ಕಾರ್ಯಕ್ರಮ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಮಾಡಿರುವ 2ನೇ ಟರ್ಮಿನಲ್ ಅನ್ನು ಮೋದಿ ಉದ್ಘಾಟನೆ ಮಾಡಲಿದ್ದಾರೆ. 4.41 ಲಕ್ಷ ಚದರ ಮೀಟರ್ ಜಾಗದಲ್ಲಿ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. ಸುಂದರವಾದ ಟರ್ಮಿನಲ್‌ನ ವಿನ್ಯಾಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಂದನೇ ಟರ್ಮಿನಲ್‌ಗೆ ಹೋಲಿಕೆ ಮಾಡಿದರೆ ಎರಡನೇ ಟರ್ಮಿನಲ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಚೆಕ್-ಇನ್ ಕೌಂಟರ್ ಮತ್ತು ನಿರ್ಗಮನ ಕೌಂಟರ್ ದೊಡ್ಡದಾಗಿವೆ. ಸೋಲಾರ್ ಮೂಲಕ ವಿದ್ಯುತ್ ಬಳಕೆ ಮಾಡುವ ಸೌಲಭ್ಯ ಹೊಂದಲಾಗಿದೆ.

ಪ್ರತಿಮೆ ಉದ್ಘಾಟನೆ, ಕಾರ್ಯಕ್ರಮ 04
ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಕಾರ್ಯಕ್ರಮ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣಗೊಂಡಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಅನಾವರಣ ಆಗಿದೆ.
ಕರ್ನಾಟಕ ಸರ್ಕಾರ ಈ ಪ್ರಗತಿ ಪ್ರತಿಮೆಗೆ 'ಪ್ರಗತಿ ಪ್ರತಿಮೆ' ಎಂದು ನಾಮಕರಣ ಮಾಡಿದೆ. 20 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಆಗಮಿಸುವಾಗ ಎಡಭಾಗದಲ್ಲಿ ಪ್ರತಿಮೆ ಜನರಿಗೆ ಕಾಣಲಿದೆ.

ಥೀಮ್ ಪಾರ್ಕ್ ಉದ್ಘಾಟನೆ, ಕಾರ್ಯಕ್ರಮ 05
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣಗೊಂಡಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಬಳಿಯಲ್ಲಿಯೇ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಮೋದಿ ಪ್ರತಿಮೆ ಲೋಕಾರ್ಪಣೆ ಮಾಡಿದ ಬಳಿಕ ಥೀಮ್ ಪಾರ್ಕ್ ಉದ್ಘಾಟನೆ ಮಾಡಲಿದ್ದಾರೆ. 23 ಅಡಿ ಪ್ರದೇಶದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗಿದೆ.












Click it and Unblock the Notifications