ಇಂದಿನಿಂದಲೇ (ಆಗಸ್ಟ್ 1) ನಂದಿನಿ ಹಾಲಿನ ಬೆಲೆ ಏರಿಕೆ: ಎಷ್ಟೆಷ್ಟು ರೇಟ್ ತಿಳಿಯಿರಿ!
ಬೆಂಗಳೂರು: ರಾಜ್ಯದಲ್ಲಿ ಹಾಲಿನ ಬೆಲೆ ಏರಿಕೆ ಇಂದಿನಿಂದಲೇ ಜಾರಿಗೆ ಬರಲಿದೆ. ಹಾಲಿನ ದರ ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ನಂದಿನಿಯ ಯಾವ ಯಾವ ಉತ್ಪನ್ನದ ಬೆಲೆ ಎಷ್ಟೆಷ್ಟು ಏರಲಿದೆ? ಹಾಲು ಸೇರಿದಂತೆ ಮಜ್ಜಿಗೆ ಮತ್ತು ಮೊಸರಿನ ಬೆಲೆ ಎಷ್ಟಾಗಲಿದೆ? ಬನ್ನಿ ಅದರ ಸಂಪೂರ್ಣವಾದ ಮಾಹಿತಿ ಇಲ್ಲಿ ತಿಳಿಯೋಣ.
ರಾಜ್ಯದಲ್ಲಿ ಹಾಲಿನ ದರ ಏರಿಕೆಗೆ ಪದೇ ಪದೆ ಒತ್ತಾಯ ಕೇಳಿಬರುತ್ತಿತ್ತು. ಹೀಗಾಗಿ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳಕ್ಕೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿತ್ತು. ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಅವರು 3 ರೂಪಾಯಿ ಬೆಲೆ ಹೆಚ್ಚಳಕ್ಕೆ ಅನುಮತಿ ನೀಡಿದ್ದರು. ಹಾಗೇ ಹೆಚ್ಚಳವಾದ 3 ರೂಪಾಯಿ ಹಾಲು ಉತ್ಪಾದಕರಿಗೆ ಹೋಗಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಇದೀಗ ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದ್ದು, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯ ಕಂಪ್ಲೀಟ್ ಮಾಹಿತಿಗಾಗಿ ಮುಂದೆ ಓದಿ.

| ಹಾಲು & ಮೊಸರಿನ ಮಾದರಿ | ಹಳೆಯ ದರ | ಹೊಸ ದರ |
| ಟೋನ್ಡ್ ಹಾಲು (ನೀಲಿ ಪೊಟ್ಟಣ) | 39 | 42 |
| ಹೋಮೋಜಿನೈಸ್ಡ್ ಹಾಲು | 40 | 43 |
| ಹಸುವಿನ ಹಾಲು (ಹಸಿರು ಪೊಟ್ಟಣ) | 43 | 46 |
| ಶುಭಂ(ಕೇಸರಿ ಪೊಟ್ಟಣ)/ಸ್ಪೆಷಲ್ ಹಾಲು | 45 | 48 |
| ಮೊಸರು, ಪ್ರತಿ ಕೆಜಿಗೆ | 47 | 50 |
| ಮಜ್ಜಿಗೆ, 200 ಮಿಲಿ ಪೊಟ್ಟಣ | 8 | 9 |

ರೇಟ್ ಹೆಚ್ಚಳದ ಬಗ್ಗೆ ಸಿಎಂ ಹೇಳಿದ್ದೇನು?
ದರ ಏರಿಕೆ ನಿರ್ಧಾರ ಸಮರ್ಥಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಹಾಲು ಕಡಿಮೆ ದರದಲ್ಲಿ ಸಿಗ್ತಿದೆ. ಹಾಲಿನ ದರ ಬೇರೆ ರಾಜ್ಯಗಳಲ್ಲಿ ಇಲ್ಲಿಗಿಂತ ಹೆಚ್ಚಿದೆ ಎಂದಿದ್ದಾರೆ. ಹಾಲಿನ ಮಾದರಿಗೆ ಅನುಗುಣವಾಗಿ ಎಲ್ಲಾ ರೀತಿಯ ಹಾಲಿಗೆ ಲೀಟರ್‌ಗೆ 3 ರೂಪಾಯಿ ಹೆಚ್ಚಿನ ದರ ಪಾವತಿಸಬೇಕು. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಈ ರೀತಿ ಹಾಲಿನ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ನಾಳೆಯಿಂದಲೇ ಜನ ಹಾಲಿನ ಮೇಲೆ ಹೆಚ್ಚಿನ ಬೆಲೆ ತೆರಬೇಕಿದೆ.
ಒಟ್ನಲ್ಲಿ ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಹಾಲಿನ ದರ ಹೆಚ್ಚಳದ ಬೇಡಿಕೆಗೆ ಇದೀಗ ಕಾಂಗ್ರೆಸ್ ಸರ್ಕಾರ ಅಂತಿಮ ಮುದ್ರೆ ಒತ್ತಿದೆ. ನಾಳೆಯಿಂದಲೇ ಹೊಸ ದರ ಕೂಡ ಜಾರಿಗೆ ಬರಲಿದೆ. ಈ ಮೂಲಕ ರಾಜ್ಯದ ಜನರು ಹೆಚ್ಚಿನ ಬೆಲೆ ನೀಡಿ ಹಾಲು ಸೇರಿದಂತೆ ಹಾಲಿನ ಉತ್ಪನ್ನಗಳನ್ನು ಖರೀದಿ ಮಾಡಬೇಕಿದೆ. ಕೆಲವರು ಹಾಲಿನ ಬೆಲೆ ಹೆಚ್ಚಳದ ಬಗ್ಗೆ ಬೇಸರ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ನಿರ್ಧಾರದ ಬಗ್ಗೆ ಸಮರ್ಥನೆ ನೀಡುತ್ತಿದ್ದಾರೆ. ಹೀಗೆ ನಂದಿನಿ ಬ್ರ್ಯಾಂಡ್ ಮತ್ತೊಮ್ಮೆ ಸದ್ದು ಮಾಡುತ್ತಾ ಸುದ್ದಿಯಾಗಿದೆ.












Click it and Unblock the Notifications