Nandini vs Amul: ನಂದಿನಿಯ ತಲೆ ಕಡಿಯಲು ಸುಪಾರಿ ಪಡೆದ ಬೊಮ್ಮಾಯಿ- ವಾಗ್ದಾಳಿ ತೀವ್ರಗೊಳಿಸಿದ ಕಾಂಗ್ರೆಸ್
ಬೆಂಗಳೂರು, ಏಪ್ರಿಲ್ 08: ನಂದಿನಿ ಹಾಗೂ ಅಮೂಲ್ ವಿವಾದ ರಾಜ್ಯದಾದ್ಯಂತ ಭಾರೀ ಸದ್ದು ಮಾಡುತ್ತಿವೆ. ಈ ವಿಚಾರವಾಗಿ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಬಿಜೆಪಿಯಂತಹ ದ್ರೋಹಿ ಸರ್ಕಾರವನ್ನ & ಬೊಮ್ಮಾಯಿಯಂತಹ ಪೇಲವ ಸಿಎಂ ಪಡೆದಿದ್ದು ಕರ್ನಾಟಕದ ದೌರ್ಭಾಗ್ಯ. ಬಸವರಾಜ ಬೊಮ್ಮಾಯಿ, ನೀವೇ ನಂದಿನಿಯ ತಲೆ ಕಡಿಯಲು ಸುಪಾರಿ ಪಡೆದಿದ್ದು ದುರಂತ. ಸಹಕಾರಿ ತತ್ವದಲ್ಲಿ ಹುಟ್ಟಿದ ಸಂಸ್ಥೆಗಳು ಅದಾನಿಯಂತಹ ಖಾಸಗಿ ಕಂಪೆನಿಗಳಂತೆ ಸ್ಪರ್ಧೆಗೆ ಬೀಳುವುದು ಸರಿಯೇ? ನಂದಿನಿಯನ್ನ ನಂಬಿದ ರಾಜ್ಯದ ರೈತರ ಹಿತ ನಿಮಗೆ ಬೇಡವೇ?' ಎಂದು ಪ್ರಶ್ನಿಸಿದೆ.

'ಹಿಂದೆ ಇದೇ ಬಸವರಾಜ ಬೊಮ್ಮಾಯಿ ಅವರು ಅಮಿತ್ ಶಾ ಹೇಳಿಕೆ ಸಮರ್ಥಿಸಲು ನಂದಿನಿ ಅಮೂಲ್‌ನೊಂದಿಗೆ ಪರಸ್ಪರ ಸಹಕಾರದ ಒಪ್ಪಂದವಾದರೆ ತಪ್ಪೇನು ಎಂದಿದ್ದರು. ಆದರೆ ಈಗ ನಂದಿನಿಗೆ ಪ್ರತಿಸ್ಪರ್ಧಿಯಾಗಿ ಅಮೂಲ್ ಬರುತ್ತಿದೆ. ಸ್ಪರ್ಧೆ ಮಾಡುವ ಸಂಸ್ಥೆಗಳು ಸಹಕರಿಸಿಕೊಳ್ಳಲು ಸಾಧ್ಯವೇ? ಅಷ್ಟೆಲ್ಲ 'ಸಹಕಾರ' ಇದ್ದರೆ ಅಮೂಲ್‌ಗೆ ಹಿಂದೆ ಸರಿಯುವಂತೆ ಸಿಎಂ ಹೇಳಲಿ' ಎಂದು ಕೆಪಿಸಿಸಿ ಹೇಳಿದೆ.
'ಕ್ರೋನಾಲಜಿ: ಅಮುಲ್ + ನಂದಿನಿ ವಿಲೀನ ಎಂದರು. ಮೊಸರಿಗೆ ಹಿಂದಿಯ 'ದಹಿ' ಇರಲೇಬೇಕು ಎಂದರು. KMFಗೆ ಹಾಲು ನೀಡುವ ರೈತರಿಗೆ 5,6 ತಿಂಗಳಿಂದ ಸಹಾಯಧನ ನಿಲ್ಲಿಸಿದರು. ಉದ್ದೇಶಪೂರ್ವಕವಾಗಿ 'ನಂದಿನಿ' ಉತ್ಪನ್ನಗಳ ಕೊರತೆ ಸೃಷ್ಟಿಸಿದರು. ಈಗ ಅಮೂಲ್‌ನ್ನು ಕರ್ನಾಟಕಕ್ಕೆ ತಂದುಬಿಟ್ಟರು. ನಂದಿನಿಯ ಕೆಚ್ಚಲು ಕೊಯ್ಯುತ್ತಿದೆ ಬಿಜೆಪಿ' ಎಂದು ತಿಳಿಸಿದ್ದಾರೆ.

ಸಿಟಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
'ನಂದಿನಿಯನ್ನು ಅಮೂಲ್‌ನಲ್ಲಿ ವಿಲೀನ ಮಾಡುತ್ತೇವೆ ಎಂದರೂ ಸಮರ್ಥನೆ. ಮೊಸರಿಗೆ ದಹಿ ಎಂದರೂ ಸಮರ್ಥನೆ. ನಂದಿನಿಯನ್ನು ಮುಳುಗಿಸುವ ಷಡ್ಯಂತ್ರ ನಡೆದರೂ ಸಮರ್ಥನೆ. ಹಿಂದಿ ಹೇರಿಕೆಗೂ ಸಮರ್ಥನೆ. ಮಹಾರಾಷ್ಟ್ರ ಕರ್ನಾಟಕದ ನೆಲವನ್ನು ಕಬಳಿಸುವ ಸಂಚಿನ ಬಗ್ಗೆ ಏಕೆ ಮೌನ? ಅದನ್ನೂ ಸಮರ್ಥಿಸಿಕೊಳ್ಳಿ' ಎಂದು ವಾಗ್ದಾಳಿ ನಡೆಸಿದೆ.
'ಕನ್ನಡಿಗರು ತಮ್ಮ ಹಕ್ಕುಗಳಿಗಾಗಿ, ತಮ್ಮ ಭಾಷೆಯ ಉಳಿವಿಗಾಗಿ, ತಾವು ಕಟ್ಟಿ ಬೆಳೆಸಿದ ಸಂಸ್ಥೆಗಳಿಗಾಗಿ ಹೋರಾಡಿದಾಗೆಲ್ಲ ಅಣಕಿಸುವ, ಟೀಕಿಸುವ ಸಿ.ಟಿ ರವಿಯವರೇ, ನಿಮಗೆ ಕನ್ನಡದ ಮೇಲೆ, ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ಯಾಕಿಷ್ಟು ದ್ವೇಷ, ತಾತ್ಸಾರ? ಸಿಟಿ ರವಿ ಅಂದರೆ, ಕನ್ನಡಿಗರ ಟೀಕೆ ರವಿ. ಕನ್ನಡಕ್ಕೆ ಕಂಟಕ ರವಿ' ಎಂದು ಕಾಂಗ್ರೆಸ್ ಟೀಕಿಸಿದೆ.

ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಟ್ವೀಟ್
ನಂದಿನಿ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ, 'ಆತ್ಮೀಯ ಬಂಧುಗಳೇ, ಇನ್ನು ಮುಂದೆ ನಾವು ಕೇವಲ #KMF ನಂದಿನಿಯ ಹಾಲು, ಮೊಸರು ಹಾಗೂ ಇತರೇ ಎಲ್ಲಾ ಪದಾರ್ಥಗಳನ್ನು ಅತೀ ಹೆಚ್ಚು ಖರೀದಿಸೋಣ, ಉಪಯೋಗಿಸೋಣ ಮತ್ತು ಬೆಳೆಸಲು ಸಂಕಲ್ಪ ಮಾಡೋಣ. ಇದರಿಂದ ನಮ್ಮ ಕರುನಾಡಿನ ರೈತರಿಗೆ ಅನುಕೂಲವಾಗಲಿದ್ದು ಅವರ ಏಳಿಗೆಗೆ ಕೈಜೋಡಿಸಿ #ನಂದಿನಿ ಕೆಎಂಎಫ್'ನೊಂದಿಗೆ ನಾವೆಲ್ಲರೂ ನಿಲ್ಲೋಣ' ಎಂದು ಟ್ವೀಟಿಸಿದ್ದಾರೆ.
'ನನ್ನ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ನಂದಿನಿ ಕೆಎಂಎಫ್ ಒಂದು ಕಾರ್ಖಾನೆಯ ಯೂನಿಟ್ ಇದ್ದು, ಅಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಕೆಲಸಗಾರರ ಪರವಾಗಿ ಹಾಗೂ ರಾಜ್ಯದ ರೈತರ ಪರವಾಗಿ ನಿಲ್ಲುವ ಸಲುವಾಗಿ ನಾನು ಸದಾ ಕೆಎಂಎಫ್ ನಂದಿನಿಗೆ ಬೆಂಬಲವಾಗಿ ಇರುತ್ತೇನೆ' ಎಂದು ಭರವಸೆ ನೀಡಿದ್ದಾರೆ.












Click it and Unblock the Notifications