ಹುಸೇನ್ ರೀತಿ ಅನಂತಮೂರ್ತಿಗೂ ಆಗುತ್ತಾ!

ಮೋದಿ ಅವರು ಪ್ರಧಾನಿಯಾದರೆ ನಾನು ದೇಶದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದು, ದೇಶ ಬಿಟ್ಟು ಹೋಗುತ್ತೇನೆ ಎಂದು ಎಲ್ಲೆಡೆ ಪ್ರಸಾರವಾಗಿದೆ ಎಂದು ಅನಂತಮೂರ್ತಿ ಅವರು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಗೀಡಾಗಿದೆ.
ಬರೀ ಚರ್ಚೆ ಪರಸ್ಪರ ಕೆಸರೆರಚಾಟಕ್ಕೆ ಮಾತ್ರ ಸೀಮಿತವಾಗದೆ ಫೇಸ್ ಬುಕ್ ನಲ್ಲಿ ಅಭಿಯಾನ ಆರಂಭಿಸಲಾಗಿದೆ. ಮೋದಿ ಆಡಳಿತದ ಭಾರತದಲ್ಲಿ ನೆಲೆಸಲು ಸಾಧ್ಯವಿಲ್ಲದಿದ್ದರೆ ದೇಶ ತೊರೆಯಬಹುದು ಎಂದು ಫರ್ಮಾನು ಹೊರಡಿಸಲಾಗಿದೆ. ವಿದೇಶಿ ಯಾತ್ರೆಗೆ ಹಣ ಸಾಲದಿದ್ದರೆ ಮನಿ ಆರ್ಡರ್ ಕಳಿಸಲು ರೆಡಿ ಎನ್ನಲಾಗಿದೆ. ಕೆಲವರು ಈಗಾಗಲೇ ಮನಿ ಆರ್ಡರ್ ಮಾಡಿದ್ದಾರೆ ಎಂಬ ಸುದ್ದಿಯೂ ಇದೆ.
ಮಂಗಳೂರು ಮೂಲದ ಉದ್ಯಮಿ ನರೇಶ್ ಶೆಣೈ ಎಂಬುವವರು ಈ ಅಭಿಯಾನದ ರುವಾರಿಯಾಗಿದ್ದಾರೆ. ಈಗಾಗಲೇ ಅನಂತಮೂರ್ತಿ ಅವರಿಗೆ 12 ರು ಮನಿ ಆರ್ಡರ್ ಮಾಡಿದ್ದಾಗಿ ಹೇಳಿದ್ದಾರೆ. ಅನಂತಮೂರ್ತಿ ಅವರ ಆರ್ ಎಂವಿ ಎರಡನೇ ಹಂತದಲ್ಲಿರುವ ಮನೆಗೆ ಮನಿ ಆರ್ಡರ್ ಕಳಿಸಲಾಗಿದೆ.
ಮೋದಿ ಅವರು ಮುಂದಿನ ಪ್ರಧಾನಿಯಾಗಲಿದ್ದಾರೆ ಇದರಲ್ಲಿ ಯಾವುದೇ ಸಂಶಯಬೇಡ. ಮೋದಿ ಪ್ರಧಾನಿಯಾದರೆ ಅನಂತಮೂರ್ತಿ ಅವರು ನೆಲೆಸಲು ಸಾಧ್ಯವಿಲ್ಲವಂತೆ. ಹೀಗಾಗಿ ಅವರಿಗೆ ನನ್ನ ಕಡೆಯಿಂದ ಸ್ವಲ್ಪ ಹಣ ಸಹಾಯ ಮಾಡುತ್ತಿದ್ದೇನೆ ಎಂದು ಶೆಣೈ ಹೇಳಿದ್ದಾರೆ ಎಂದು ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.
"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದುಕೊಂಡು ಹಿರಿಯ ಸಾಹಿತಿಗಳಾಗಿ ಈ ರೀತಿ ಹೇಳಿಕೆ ನೀಡಿರುವುದು ತಪ್ಪಲ್ಲವೇ. ನಮ್ಮ ನಮೋ ಬ್ರಿಗೇಡ್ ನ ಸದಸ್ಯರೆಲ್ಲರೂ ಮನಿ ಆರ್ಡರ್ ಕಳಿಸಲು ಇಚ್ಛಿಸಿದ್ದಾರೆ. ಭಾರತೀಯರಾಗಿ ನಾವು ಮೋದಿ ಅವರನ್ನು ಬೆಂಬಲಿಸಬೇಕು. ಒಂದು ವೇಳೆ ಸೋನಿಯಾ ಗಾಂಧಿ ಪ್ರಧಾನಿಯಾದರೆ ನಾನೇನು ಓಡಿ ಹೋಗುವುದಿಲ್ಲ. ದೇಶ ಮೊದಲು ನಂತರ ವ್ಯಕ್ತಿ" ಎಂದು ಶೆಣೈ ವಿವರಿಸಿದ್ದಾರೆ.












Click it and Unblock the Notifications