ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಭಯ, ಆತಂಕ ಶುರುವಾಗಿದೆ : ನಳಿನ್ ಕುಮಾರ್ ಕಟೀಲ್
ಬೆಂಗಳೂರು,ಡಿಸೆಂಬರ್ 31: ರಾಜ್ಯ ರಾಜಕೀಯದಲ್ಲಿ ನಿನ್ನೆಯಿಂದ ಪರಿವರ್ತನೆ ಆಗಿದ್ದು. ಕಾಂಗ್ರೆಸ್ ಮತ್ತು ಜೆಡಿಎಸ್ ಒಳಗೆ ಭಯ, ಆತಂಕ ಶುರುವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳದರು.
ಬೆಂಗಳೂರಿನಲ್ಲಿ ಶನಿವಾರ ನಡೆದ ಬಿಜೆಪಿ ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ 150 ಸ್ಥಾನ ಪಡೆಯುವ ಸಂಕಲ್ಪ ಮಾಡಿದ್ದೇವೆ. ಬೆಂಗಳೂರಿನಲ್ಲೂ ಕಾಂಗ್ರೆಸ್ ಕಟ್ಟೆ ಒಡೆದು ಬಿಜೆಪಿ ಗೆಲುವು ಆಗಲಿದೆ ಎಂದರು.

ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಜನಸ್ಪಂದನ, ಸಹಕಾರ ಸಿಕ್ಕಿದೆ. ಹಾಸನದಲ್ಲೂ ನಮ್ಮ ಪತಾಕೆ ಹಾರಲಿದೆ. ಜನಮಾನಸದಲ್ಲಿ ಬಿಜೆಪಿ ಎದ್ದು ನಿಂತಿದೆ. ಶೇ 60ಕ್ಕೂ ಹೆಚ್ಚು ಮತ ಗಳಿಸುವ ಸಂಕಲ್ಪ ನಮ್ಮದಾಗಲಿದೆ. ಬೂತ್ ವಿಜಯಕ್ಕೆ ಪೂರಕವಾದ ಧ್ವಜಾರೋಹಣ ಮಾಡಬೇಕು. ವಿಜಯ ಸಂಕಲ್ಪ ಅಭಿಯಾನ ಜನವರಿ 21ರಿಂದ 29ರವರೆಗೆ ಮುಂದುವರಿಯಲಿದೆ ಎಂದರು.
ರೈತ ವಿದ್ಯಾನಿಧಿಯಂಥ ಹತ್ತಾರು ಯೋಜನೆಗಳು, ಕೇಂದ್ರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಿ. ಮನೆಮನೆಗಳಲ್ಲಿ ಈ ಕಾರ್ಯ ನಡೆಯಲಿದೆ ಎಂದು ವಿವರಿಸಿದರು. ಇದೇವೇಳೆ ಸದಸ್ಯತ್ವ ಅಭಿಯಾನ ಮಾಡಬೇಕು. 50 ಲಕ್ಷ ಯುವಕರನ್ನು ಸದಸ್ಯರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು. ಕೇಂದ್ರ- ರಾಜ್ಯದ ಫಲಾನುಭವಿಗಳ ಸಂಪರ್ಕ, ಸಮಾವೇಶ ಮಾಡಿ ಜನರ ಮನ ಒಲಿಸಬೇಕು ಎಂದು ತಿಳಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಉತ್ತರಪ್ರದೇಶ, ಉತ್ತರಾಖಂಡ ಸೇರಿ ಹಲವೆಡೆ ಗೆದ್ದಿರುವ ಉದಾಹರಣೆಗಳು ನಮ್ಮ ಮುಂದಿವೆ. ಬೂತ್ ಅತ್ಯುತ್ತಮ ನಿರ್ವಹಣೆಯು ನಮ್ಮ ಗೆಲುವಿಗೆ ಪ್ರಮುಖ ಸಾಧನ ಆಗಲಿದೆ ಎಂದು ತಿಳಿಸಿದರು.
ಬೂತ್ ಗಟ್ಟಿಗೊಳಿಸಲು ಈ ವಿಜಯ ಅಭಿಯಾನ ಪೂರಕ. ಬೂತ್ ಸಶಕ್ತೀಕರಣದ ಮೂಲಕ ನಾವು ಪಕ್ಷದ ಗೆಲುವಿಗೆ ಮುಂದಾಗಬೇಕು. ಬೂತ್‍ನಲ್ಲಿ ಲೀಡ್ ತರುವ ಸಂಕಲ್ಪ ನಮ್ಮದಾಗಲಿ ಎಂದು ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬರುವ ಮೊದಲೇ ಕಾಂಗ್ರೆಸ್ ಭ್ರಷ್ಟಾಚಾರ- ಹಗರಣಗಳದ್ದೇ ಚರ್ಚೆ ಆಗುತ್ತಿತ್ತು. ಇವತ್ತು ಬಿಜೆಪಿ ಸರಕಾರದ ಸಾಧನೆ, ಪಕ್ಷದ ಕಾರ್ಯವನ್ನು ಚರ್ಚಿಸುತ್ತಾರೆ. ಕುಟುಂಬ ರಾಜಕಾರಣವನ್ನು ನಾವು ದೂರ ಇಡುತ್ತೇವೆ ಎಂದು ತಿಳಿಸಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮಾತನಾಡಿ, ಬೂತ್ ಅಧ್ಯಕ್ಷರು ಆಯಾ ಬೂತ್‍ನ ಪ್ರಭಾವಿ ವ್ಯಕ್ತಿಗಳನ್ನು ಗುರುತಿಸಬೇಕು. ಪಕ್ಷವು ಬೂತ್‍ನಲ್ಲಿ ಅತಿ ಹೆಚ್ಚು ಮತ ಗಳಿಸುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೋದಿಜಿ- ಅಮಿತ್ ಶಾ ಅವರು ಬೆಂಕಿ ಬಿರುಗಾಳಿ ಇದ್ದಂತೆ: ಆರ್ ಅಶೋಕ್
ರಾಜ್ಯದ ಸಚಿವ ಆರ್.ಅಶೋಕ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ಗರಿಷ್ಠ ಶಾಶಕ ಸ್ಥಾನ ಗೆಲ್ಲುವ ಬಿಜೆಪಿ ಕರ್ನಾಟಕ ಮತ್ತು ದೇಶದಲ್ಲಿ ಗೆಲುವನ್ನು ತನ್ನದಾಗಿಸಿಕೊಳ್ಳಲಿದೆ. ಇನ್ನು 4 ದಶಕಗಳ ಕಾಲ ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಗೆಲುವಿಗಾಗಿ ಸಂಕಲ್ಪ ಮಾಡಿ ಎಂದು ನರೇಂದ್ರ ಮೋದಿಜಿ ಹೇಳಿದ್ದಾರೆ. ಅದನ್ನು ಈಡೇರಿಸಲು ಸಿದ್ಧರಾಗಬೇಕು ಎಂದು ಹೇಳಿದರು.
ಮೋದಿಜಿ- ಅಮಿತ್ ಶಾ ಅವರು ಬೆಂಕಿ ಬಿರುಗಾಳಿ ಇದ್ದಂತೆ. ಅವರನ್ನು ತಡೆಯುವ ಶಕ್ತಿ ಕಾಂಗ್ರೆಸ್ಸಿಗರಿಗೆ ಇಲ್ಲ. ರಾಹುಲ್ ಗಾಂಧಿ ಗಡ್ಡ ಬಿಟ್ಟು ಚುನಾವಣೆಯಿಂದ ದೂರ ನಿಂತಿದ್ದಾರೆ ಎಂದು ತಿಳಿಸಿದರು.












Click it and Unblock the Notifications