Namma Metro: ಸಂಚಾರಕ್ಕೆ ಸಿದ್ಧವಾಯ್ತು ಈ ನಮ್ಮ ಮೆಟ್ರೋ ಮಾರ್ಗ
ಬೆಂಗಳೂರು, ಮಾರ್ಚ್ 04: ಸುಮಾರು ಆರು ವರ್ಷಗಳಿಂದ ನಡೆಯುತ್ತಿದ್ದ ನಮ್ಮ ಮೆಟ್ರೋ ಹಸಿರು ಮಾರ್ಗದ ಕಾಮಗಾರಿ ಹಳಿಯನ್ನು ಜೋಡಿಸುವ ಮೂಲಕ ಪೂರ್ಣಗೊಂಡಿದೆ. ಈ ವಿಸ್ತರಿತ ಮಾರ್ಗ ಮೂರು ನಿಲ್ದಾಣಗಳನ್ನು ಒಳಗೊಂಡಿದ್ದು, ಕೆಲವೇ ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.
ನಾಗಸಂದ್ರ-ಮಾದವರ ನಡುವಿನ 3.31 ಕಿ. ಮೀ. ಮಾರ್ಗದಲ್ಲಿ ಹಳಿ ಜೋಡಣೆ ಮಾಡುವ ಕಾರ್ಯವನ್ನು Texmaco Rail and Engineering ಪೂರ್ಣಗೊಳಿಸಿದೆ. ತುಮಕೂರು ರಸ್ತೆಯಲ್ಲಿ ಈ ಮಾರ್ಗವಿದೆ.

ನಮ್ಮ ಮೆಟ್ರೋ 2ನೇ ಹಂತದ 73.92 ಕಿ. ಮೀ. ಮಾರ್ಗವನ್ನು ವಿಸ್ತರಣೆ ಮಾಡುವ ಪ್ರಮುಖ ಕಾಮಗಾರಿ ಇದಾಗಿದೆ. ಹಳಿ ಜೋಡಣೆ ಕಾರ್ಯ ಪೂರ್ಣಗೊಂಡಿದ್ದು, ಕೆಲವು ಚಿಕ್ಕಪುಟ್ಟ ಕಾಮಗಾರಿಗಳು ಪೂರ್ಣಗೊಂಡ ಬಳಿಕ ನಮ್ಮ ಮೆಟ್ರೋ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗಲಿದೆ.
ಈ ರೈಲು ಮಾರ್ಗ ನಾಗಸಂದ್ರ-ಮಾದವರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ಗೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.
ಡಿಸೆಂಬರ್‌ನ ಗಡುವು: ನಾಗಸಂದ್ರ-ಮಾದವರ ನಡುವಿನ ಮಾರ್ಗದಲ್ಲಿ ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು. 2023ರ ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಳಿ ಜೋಡಣೆ ಪೂರ್ಣಗೊಳ್ಳುವ ಮೂಲಕ ರೈಲುಗಳ ಪ್ರಾಯೋಗಿಕ ಸಂಚಾರಕ್ಕೆ ಅವಕಾಶ ಸಿಕ್ಕಿದಂತೆ ಆಗಿದೆ.
ಸಿಗ್ನಲ್ ಅಳವಡಿಕೆ, ಸಿಗ್ನಲ್ ಪರೀಕ್ಷೆ, ಹಳಿಗಳ ಸಾಮರ್ಥ್ಯ ಪರೀಕ್ಷೆ, ಓಪನ್ ವೆಬ್ ಗಿರ್ಡರ್ ಪರೀಕ್ಷೆ ಸಹಿತ ವಿವಿಧ ತಾಂತ್ರಿಕ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರು ಪ್ರಾಯೋಗಿಕ ಸಂಚಾರವನ್ನು ನಡೆಸಿ ರೈಲುಗಳ ವಾಣಿಜ್ಯ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಬೇಕಿದೆ.
ನಾಗಸಂದ್ರ-ಮಾದವರ ನಡುವಿನ ರೀಚ್-3 ಕಾಮಗಾರಿಗೆ 2017ರ ಮೇ ತಿಂಗಳಿನಲ್ಲಿ ಚಾಲನೆ ಸಿಕ್ಕಿತ್ತು. ಆದರೆ ಈ ಮಾರ್ಗದ ಭೂ ಸ್ವಾಧೀನ ಭಾರೀ ವಿವಾದಕ್ಕೆ ಕಾರಣವಾಯಿತು. ಕರ್ನಾಟಕ ಹೈಕೋರ್ಟ್‌ಗೆ ಸಹ ಅರ್ಜಿಗಳು ಸಲ್ಲಿಕೆಯಾದವು. ಈ ಮಾರ್ಗದಲ್ಲಿ ಮಂಜುನಾಥನಗರ, ಚಿಕ್ಕಬಿದರಕಲ್ಲು (ಜಿಂದಾಲ್), ಮಾದವರ ನಿಲ್ದಾಣಗಳಿವೆ.
ಬೆಂಗಳೂರು-ತುಮಕೂರು ರಸ್ತೆಯಲ್ಲಿ ಭಾರೀ ವಾಹನ ದಟ್ಟಣೆ ಇದೆ. ನೆಲಮಂಗಲ ಕಡೆಯಿಂದ ಪೀಣ್ಯ ಕೈಗಾರಿಕಾ ವಲಯ ಸೇರಿ ನಗರಕ್ಕೆ ಬರುವ ಜನರು, ಉದ್ಯೋಗಿಗಳು ಈಗ ನಾಗಸಂದ್ರ ತನಕ ಬಂದು ಅಲ್ಲಿಂದ ಮೆಟ್ರೋ ಮೂಲಕ ನಗರಕ್ಕೆ ಆಗಮಿಸುತ್ತಾರೆ.
ಹಸಿರು ಮಾರ್ಗದಲ್ಲಿ ಈಗಾಗಲೇ ನಾಗಸಂದ್ರ ತನಕ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಈಗ ಸುಮಾರು 3 ಕಿ. ಮೀ. ಮೆಟ್ರೋ ಮಾರ್ಗ ಉದ್ಘಾಟನೆಗೊಂಡರೆ ನಾಗಸಂದ್ರದಿಂದ ಮಾರ್ಗ ವಿಸ್ತರಣೆಯಾಗಲಿದ್ದು, ಜನರಿಗೆ ಅನುಕೂಲವಾಗಲಿದೆ.
ಈ ಮೆಟ್ರೋ ಮಾರ್ಗದ ಭೂ ಸ್ವಾಧೀನಕ್ಕೆ 964 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಆದರೆ ಭೂ ಸ್ವಾಧೀನವೇ ದೊಡ್ಡ ಸಮಸ್ಯೆಯಾಯಿತು. ಬಳಿಕ ಕೋವಿಡ್ ಸಮಯದಲ್ಲಿ ಕಾಮಗಾರಿಗೆ ಪೂರ್ಣ ಹಿನ್ನಡೆ ಆಯಿತು. ಬಳಿಕ ಕಾಮಗಾರಿ ವೇಗ ಪಡೆದುಕೊಂಡು ಈಗ ಹಳಿಗಳನ್ನು ಹಾಕುವ ಕಾರ್ಯ ಪೂರ್ಣಗೊಂಡಿದೆ.
ನಮ್ಮ ಮೆಟ್ರೋವನ್ನು ತುಮಕೂರಿಗೆ ವಿಸ್ತರಣೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಈ ಕುರಿತು ಕಾರ್ಯ ಸಾಧ್ಯತಾ ವರದಿ ತಯಾರಿ ಮಾಡಲು ಬಿಎಂಆರ್‌ಸಿಎಲ್ ಟೆಂಡರ್ ಕರೆದಿದೆ. ಇಂತಹ ಸಂದರ್ಭದಲ್ಲೇ ಮಾದವರ ತನಕ ಮೆಟ್ರೋ ಮಾರ್ಗ ವಿಸ್ತರಣೆಗೊಂಡರೆ ಇನ್ನಷ್ಟು ಸಹಾಯಕವಾಗಲಿದೆ.












Click it and Unblock the Notifications