ಮೈಸೂರು - ಮಂಗಳೂರು ವಯಾ ಸಂಪಾಜೆ ಘಾಟ್: ಹೆದ್ದಾರಿ ಪ್ರಾಧಿಕಾರದ ಮಹತ್ವದ ಮಾಹಿತಿ
ಮೈಸೂರು - ಮಂಗಳೂರು ವಯಾ ಸಂಪಾಜೆ ಘಾಟ್: ಹೆದ್ದಾರಿ ಪ್ರಾಧಿಕಾರದ ಮಹತ್ವದ ಮಾಹಿತಿ
ಬೆಂಗಳೂರು, ಸೆ 13: ಭಾರೀ ಮಳೆ, ಭೂಕುಸಿತದಿಂದ ಬಂದ್ ಆಗಿದ್ದ, ಬೆಂಗಳೂರು-ಮೈಸೂರು-ಮಡಿಕೇರಿ-ಮಂಗಳೂರು ವಯಾ ಸಂಪಾಜೆ ಘಾಟ್ ನಲ್ಲಿ ಲಘು ವಾಹನ ಸಂಚಾರಕ್ಕೆ ಹೆದ್ದಾರಿ ಪ್ರಾಧಿಕಾರ ಬುಧವಾರ (ಸೆ 12) ಗ್ರೀನ್ ಸಿಗ್ನಲ್ ನೀಡಿದೆ. ಆ ಮೂಲಕ, ಸಮರೋಪಾದಿಯಲ್ಲಿ ದುರಸ್ಥಿ ಕಾರ್ಯ ನಡೆಸಿದ ಹೆದ್ದಾರಿ ಪ್ರಾಧಿಕಾರಕ್ಕೆ ಅಭಿನಂದನೆಗಳು.
ಮಂಗಳೂರು-ಮೈಸೂರು ಸಂಪರ್ಕಿಸುವ ಸಂಪಾಜೆ ಘಾಟ್ ರಸ್ತೆ ಮರು ನಿರ್ಮಾಣಕ್ಕೆ ಕನಿಷ್ಠ ಮೂರ್ನಾಲ್ಕು ತಿಂಗಳುಗಳೇ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಜೋಡುಪಾಲದ ಬಳಿ ಜಲಸ್ಪೋಟಕ್ಕೆ ರಸ್ತೆಯೇ ಕೊಚ್ಚಿ ಹೋಗಿತ್ತು.
ಇನ್ನು ಒಂದು ತಿಂಗಳೊಳಗೆ ಎಲ್ಲಾ ರೀತಿಯ ವಾಹನಗಳಿಗೆ ಸಂಪಾಜೆ ಘಾಟ್ ಮೂಲಕ ಅನುವು ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. (ಸಂಪಾಜೆ ಘಾಟ್‌ನಲ್ಲಿ ಲಘು ವಾಹನ ಸಂಚಾರಕ್ಕೆ ಒಪ್ಪಿಗೆ)

ರಸ್ತೆಯ ದುರಸ್ಥಿ ಕೆಲಸ ಇನ್ನೂ ಮುಗಿಯದೇ ಇರುವುದರಿಂದ, ದ್ವಿಚಕ್ರ, ಕಾರು, ಆಟೋ, ಜೀಪು ವಾಹನಗಳಿಗೆ ಸದ್ಯ ಅನುಮತಿ ನೀಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಸಹಾಯಕ ಇಂಜಿನಿಯರ್ ಹೇಳಿದ್ದಾರೆ. ಈ ರಸ್ತೆಯಲ್ಲಿ ಸಾಗುವ ಪ್ರಯಾಣಿಕರಿಗೆ ಕೆಲವೊಂದು, ಮಹತ್ವದ ಟಿಪ್ಸ್ ಮತ್ತು ಮನವಿಯನ್ನು ಪ್ರಾಧಿಕಾರ ಮಾಡಿದೆ.
> ಸಂಪಾಜೆ ಘಾಟ್ ಕ್ರಮಿಸುವವರೆಗೂ ವೇಗದ ಚಾಲನೆ ನಡೆಸದೇ ಶಾಂತವಾಗಿ ಘಾಟ್ ಕ್ರಮಿಸಿ.
> ಲೈನ್ ಶಿಸ್ತನ್ನು ಪಾಲಿಸಿ, ಅನಗತ್ಯ ಹಾರ್ನ್ ಬಳಸಬೇಡಿ.
> ರಸ್ತೆ ದುರಸ್ಥಿ ಇನ್ನೂ ಮುಗಿಯದೇ ಇರುವುದರಿಂದ, ಕೆಲವೊಂದು ಕಡೆ ಏಕಮುಖ ಸಂಚಾರವಿರುತ್ತದೆ. ಹಾಗಾಗಿ, ನಿಮ್ಮ ಸರತಿಗಾಗಿ ತಾಳ್ಮೆಯಿಂದ ಕಾಯಿರಿ.
> ಟ್ರಾಫಿಕ್ ಜಾಮ್ ಉಂಟಾದರೆ, ನೀರು, ಬಿಸ್ಕಟ್ ಜೊತೆಗಿಟ್ಟುಕೊಂಡು ಹೋಗುವುದು ಉತ್ತಮ.
> ಮಡಿಕೇರಿ ಮತ್ತು ದೇವರಕೊಲ್ಲಿ ಭಾಗದಲ್ಲಿ ಭೂಕುಸಿತದ ದೃಶ್ಯ ಸೆರೆಹಿಡಿಯಲು ಗಾಡಿ ನಿಲ್ಲಿಸಬಾರದು.
> ಘಾಟ್ ಕ್ರಮಿಸುವ ವರೆಗೂ ಎಲ್ಲೂ ಗಾಡಿ ನಿಲ್ಲಿಸಿ ಸೆಲ್ಫಿ ತೆಗೆದುಕೊಂಡು ಟ್ರಾಫಿಕ್ ಜಾಂಗೆ ಅವಕಾಶ ನೀಡಬೇಡಿ.












Click it and Unblock the Notifications