Mysuru Dasara 2026: ಜಂಬೂ ಸವಾರಿ, ಡ್ರೋನ್ ಶೋ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ಆನ್‌ಲೈನ್ ಬುಕಿಂಗ್ ಆರಂಭ, ಲಿಂಕ್ ಇಲ್ಲಿದೆ!
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನವರಾತ್ರಿ ಸಂಭ್ರಮವನ್ನ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ದಸರಾ ವೀಕ್ಷಿಸಲು ಕಾತರದಿಂದ ಕಾಯುತ್ತಿರುವ ಪ್ರವಾಸಿಗರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ.
ಹೌದು, ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಾದ ಜಂಬೂ ಸವಾರಿ, ಪಂಜಿನ ಕವಾಯತು, ಹಾಗೂ ಅತ್ಯಾಕರ್ಷಕ ಡ್ರೋನ್ ಶೋ ವೀಕ್ಷಣೆಗೆ ಆನ್‌ಲೈನ್ ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಬುಕಿಂಗ್ ಪ್ರಕ್ರಿಯೆ ಸೋಮವಾರ ಅಂದ್ರೆ ನಿನ್ನೆ(ಸೆ.21)ರಿಂದ ಅಧಿಕೃತವಾಗಿ ಆರಂಭವಾಗಿದೆ.

ಆನ್‌ಲೈನ್ ಟಿಕೆಟ್ ದರ
ದಸರಾ ಕಾರ್ಯಕ್ರಮಗಳನ್ನು ಹತ್ತಿರದಿಂದ ಹಾಗೂ ಆರಾಮದಾಯಕವಾಗಿ ಕಣ್ತುಂಬಿಕೊಳ್ಳಲು ಬಯಸುವವರು ಮೈಸೂರು ದಸರಾದ ಅಧಿಕೃತ ಜಾಲತಾಣವಾದ https://mysoredasara.gov.in ಮೂಲಕ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದು.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ದರಪಟ್ಟಿಯ ಪ್ರಕಾರ, ಈ ಬಾರಿ ಪ್ರತಿಷ್ಠಿತ ದಸರಾ ಗೋಲ್ಡ್ ಕಾರ್ಡ್ ಬೆಲೆಯನ್ನು ಪ್ರತಿ ವ್ಯಕ್ತಿಗೆ ₹6500 ನಿಗದಿಪಡಿಸಲಾಗಿದೆ. ಅರಮನೆ ಆವರಣದಲ್ಲಿ ವಿಜಯದಶಮಿಯಂದು ನಡೆಯುವ ಅದ್ದೂರಿ ಜಂಬೂ ಸವಾರಿ ಕಣ್ತುಂಬಿಕೊಳ್ಳಲು ₹3500 ದರ ನಿಗದಿ ಮಾಡಲಾಗಿದೆ.
ಅದೇ ರೀತಿ ಸಂಜೆ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ರೋಮಾಂಚಕಾರಿ ಪಂಜಿನ ಕವಾಯತು ವೀಕ್ಷಿಸಲು ₹1500 ಟಿಕೆಟ್ ದರ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿ ಹಣ ಪಾವತಿಸಿದ ಬಳಿಕ ಸಿಗುವ ವೋಚರ್ ಬಳಸಿ ಭೌತಿಕ ಟಿಕೆಟ್ ಪಡೆಯಬಹುದು.
ಡ್ರೋನ್ ಶೋ ವೀಕ್ಷಣೆಗೆ ವಿಶೇಷ ಟಿಕೆಟ್
ಈ ಬಾರಿಯ ದಸರಾದಲ್ಲಿ ತಂತ್ರಜ್ಞಾನದ ಸ್ಪರ್ಶವಿದ್ದು, ವಿಶೇಷವಾಗಿ ಅತ್ಯಾಕರ್ಷಕ ಡ್ರೋನ್ ಶೋ ಆಯೋಜಿಸಲಾಗುತ್ತಿದೆ. ಬನ್ನಿಮಂಟಪ ಮೈದಾನದಲ್ಲಿ ರಾತ್ರಿ ಆಗಸದಲ್ಲಿ ಮೂಡಿಬರುವ ಈ ಅದ್ಭುತ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರತ್ಯೇಕ ಟಿಕೆಟ್ ನಿಗದಿಪಡಿಸಲಾಗಿದೆ.
ಡ್ರೋನ್ ಶೋ ವೀಕ್ಷಣೆಗೆ ಪ್ರತಿ ವ್ಯಕ್ತಿಗೆ ₹1000 ಟಿಕೆಟ್ ದರ ನಿಗದಿ ಮಾಡಲಾಗಿದೆ. ಈ ಡ್ರೋನ್ ಶೋ ಎರಡು ದಿನಗಳ ಕಾಲ ನಡೆಯಲಿದ್ದು, ಪ್ರೇಕ್ಷಕರು ಎರಡು ದಿನವೂ ನೋಡಬೇಕೆಂದರೆ ಪ್ರತಿ ದಿನಕ್ಕೂ ಪ್ರತ್ಯೇಕವಾಗಿ ಟಿಕೆಟ್ ಖರೀದಿಸಬೇಕಾಗುತ್ತದೆ. ಇದು ಪ್ರವಾಸಿಗರಿಗೆ ಹೊಸ ಅನುಭವ ನೀಡಲಿದೆ.
ಗೋಲ್ಡ್ ಕಾರ್ಡ್ ಬುಕಿಂಗ್ ಪ್ರಯೋಜನಗಳು
ದಸರಾ ಹಬ್ಬದ ಸಂದರ್ಭದಲ್ಲಿ ₹6500 ನೀಡಿ ಗೋಲ್ಡ್ ಕಾರ್ಡ್ ಖರೀದಿಸುವವರಿಗೆ ಅನೇಕ ವಿಶೇಷ ಹಾಗೂ ವಿಐಪಿ ಸೌಲಭ್ಯಗಳಿವೆ. ಗೋಲ್ಡ್ ಕಾರ್ಡ್ ಹೊಂದಿರುವವರು ಅರಮನೆ ಆವರಣದಲ್ಲಿ ಜಂಬೂಸವಾರಿ ಹಾಗೂ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಕಾರ್ಯಕ್ರಮವನ್ನ ಮುಂಭಾಗದ ಆಸನಗಳಲ್ಲಿ ಕುಳಿತು ವೀಕ್ಷಿಸಬಹುದು. ಇದರ ಜೊತೆಗೆ, ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಾದ ಚಾಮುಂಡಿ ಬೆಟ್ಟ, ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಮೈಸೂರು ಅರಮನೆಗೆ ವಿಐಪಿ ಪ್ರವೇಶಾವಕಾಶ ಇರಲಿದೆ.
ಹಾಗೆಯೇ, ಒಂದು ದಿನದ ಡ್ರೋನ್ ಶೋ ವೀಕ್ಷಣೆಗೆ ಉಚಿತ ಪ್ರವೇಶವಿರುತ್ತದೆ. ಇದರಿಂದ ಪ್ರವಾಸಿಗರು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವ ಕಿರಿಕಿರಿ ತಪ್ಪುತ್ತದೆ.
ಕಟ್ಟುನಿಟ್ಟಿನ ಕ್ರಮಗಳು
ಮೈಸೂರು ಜಿಲ್ಲಾಡಳಿತ ಸ್ಪಷ್ಟಪಡಿಸಿರುವಂತೆ, ಒಂದು ಗೋಲ್ಡ್ ಕಾರ್ಡ್ ಅಥವಾ ಒಂದು ಟಿಕೆಟ್ ಬಳಸಿ ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತದೆ. ಕಳೆದ ವರ್ಷ ಗೋಲ್ಡ್ ಕಾರ್ಡ್ ಇದ್ದವರಿಗೂ ಸೀಟು ಸಿಗದೆ ಗೊಂದಲ ಉಂಟಾಗಿದ್ದನ್ನ ಅರಿತಿರುವ ಅಧಿಕಾರಿಗಳು, ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಟಿಕೆಟ್‌ಗಳು ಹಾಗೂ ಪಾಸ್‌ಗಳಲ್ಲಿ ಸೀಟು ಸಂಖ್ಯೆಯನ್ನ ಮುದ್ರಿಸಲಾಗಿದ್ದು, ಪ್ರೇಕ್ಷಕರು ತಮಗೆ ನಿಗದಿಪಡಿಸಿದ ಆಸನಗಳಲ್ಲಿಯೇ ಕುಳಿತುಕೊಳ್ಳಬೇಕು.
ಅನಧಿಕೃತ ವ್ಯಕ್ತಿಗಳು ಆಸನ ಆಕ್ರಮಿಸಿಕೊಳ್ಳುವುದನ್ನ ಇದು ತಪ್ಪಿಸಲಿದೆ. ಸಾರ್ವಜನಿಕರು ಮತ್ತು ಪ್ರವಾಸಿಗರು ದಲ್ಲಾಳಿಗಳ ಅಥವಾ ವಂಚಕರ ಬಲೆಗೆ ಬೀಳದೆ ಕೇವಲ ಅಧಿಕೃತ ಜಾಲತಾಣದಲ್ಲೇ ಟಿಕೆಟ್ ಖರೀದಿಸಲು ಸೂಚಿಸಲಾಗಿದೆ.


Click it and Unblock the Notifications
