ಕರ್ನಾಟಕದ 2 ವಿಮಾನ ನಿಲ್ದಾಣ, ಈ ರೈಲ್ವೆ ಯೋಜನೆಗೆ ಕೋಟಿ ಕೋಟಿ ಹಣ ಬಿಡುಗಡೆ
ಬೆಂಗಳೂರು, ಮಾರ್ಚ್ 04: ಕರ್ನಾಟಕ ರಾಜ್ಯ ಸರ್ಕಾರ ಕಳೆದ ತಿಂಗಳಷ್ಟೇ ಬಜೆಟ್ ಮಂಡನೆ ಮಾಡಿದೆ. ಇದರ ಬೆನ್ನಲ್ಲೆ ರಾಜ್ಯದ ಎರಡು ಪ್ರಮುಖ ವಿಮಾನ ನಿಲ್ದಾಣ ಮತ್ತು ರೈಲ್ವೆ ಯೋಜನೆಗಳಿಗೆ ಕೋಟಿ ಕೋಟಿ ಅನದಾನ ಬಿಡುಗಡೆ ಮಾಡಿದ್ದರ ಕುರಿತು ಸರ್ಕಾರ ಲೆಕ್ಕ ಕೊಟ್ಟಿದೆ.
ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿರುವ ತುಮಕೂರು- ದಾವಣಗೆರೆ ಮತ್ತು ಗದಗ- ವಾಡಿ ರೈಲ್ವೆ ಯೋಜನೆಗಳಿಗೆ ಕ್ರಮವಾಗಿ ₹50 ಕೋಟಿ ಮತ್ತು ₹43.32 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಯೋಜನೆ ಒಟ್ಟು ₹93.32 ಕೋಟಿಯನ್ನು ಈ ಎರಡೂ ಯೋಜನೆಗಳಿಗೆ ಒದಗಿಸಿದಂತಾಗಿದೆ ಎಂದು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಸೋಮವಾರ ಮಾಹಿತಿ ನೀಡಿದ್ದಾರೆ.

ರನ್ ವೇ ವಿಸ್ತರಣೆ- ಉನ್ನತೀಕರಣಕ್ಕೆ ಹಣ ಬಳಕೆ
ಮೈಸೂರು ಮತ್ತು ರಾಯಚೂರು ವಿಮಾನ ನಿಲ್ದಾಣಗಳ ಕಾಮಗಾರಿಗಳಿಗೆ ಒಟ್ಟಾಗಿ ₹57.63 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪೈಕಿ ₹14.62 ಕೋಟಿ ಮೊತ್ತವು ರಾಯಚೂರು ವಿಮಾನ ನಿಲ್ದಾಣದ ಕೆಲಸಗಳಿಗೆ ವಿನಿಯೋಗವಾಗಲಿದೆ. ಮೈಸೂರಿನಲ್ಲಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ಈ ಹಣ ಬಳಸಲಾಗುವುದು ಎಂದು ಅವರು ಹೇಳಿದರು.
ರಾಜಧಾನಿಯ ಪಕ್ಕದಲ್ಲಿರುವ ತುಮಕೂರನ್ನು ಮಧ್ಯ ಕರ್ನಾಟಕದೊಂದಿಗೆ ಬೆಸೆಯಲಿರುವ ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಇದರಿಂದಾಗಿ ಉತ್ತರ ಕರ್ನಾಟಕದ ಭಾಗಗಳಿಗೆ ತ್ವರಿತ ರೈಲು ಸಂಚಾರ ಸಾಧ್ಯವಾಗಲಿದೆ.
ರೈಲು ಯೋಜನೆ: ಆರ್ಥಿಕ ಚಟುವಟಿಕೆ ಹೆಚ್ಚಳ
ಹಾಗೆಯೇ ಗದಗ-ವಾಡಿ ರೈಲು ಮಾರ್ಗದ ಅಭಿವೃದ್ಧಿಯಿಂದ ಹುಬ್ಬಳ್ಳಿಯನ್ನು ಒಳಗೊಂಡು ಕಿತ್ತೂರು ಕರ್ನಾಟಕ ಮತ್ತು ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವು ನಗರಗಳಿಗೆ ಸುಲಭವಾಗಿ ತಲುಪಬಹುದಾಗಿದೆ. ಇದರಿಂದ ಆ ಜಿಲ್ಲೆಗಳಲ್ಲಿ ಮೂಲಸೌಕರ್ಯ ವೃದ್ಧಿ ಸೇರಿದಂತೆ ಆರ್ಥಿಕ ಚಟುವಟಿಕೆಗಳಿಗೆ ಇಂಬು ದೊರೆಯಲಿದೆ ಎಂದು ಅವರು ವಿವರಿಸಿದರು.

ರೈಲ್ವೆ ಯೋಜನೆಗಳು ಮೂಲತಃ ಕೇಂದ್ರ ಸರಕಾರಕ್ಕೆ ಸೇರಿದ್ದರೂ ಕೆಲವು ಯೋಜನೆಗಳಿಗೆ ತಗುಲುವ ಒಟ್ಟು ವೆಚ್ಚದಲ್ಲಿ ಶೇಕಡ 50ರಷ್ಟನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಭೂಸ್ವಾಧೀನ ಪ್ರಕ್ರಿಯೆಯು ಮೇಲ್ಕಂಡ ಎರಡೂ ಯೋಜನೆಗಳ ವ್ಯಾಪ್ತಿಯಲ್ಲಿ ಅಂತಿಮ ಹಂತದಲ್ಲಿದೆ. ಇದು ಮುಗಿದ ಕೂಡಲೇ ಯೋಜನೆಯ ಕಾಮಗಾರಿಗಳು ಕ್ಷಿಪ್ರ ಗತಿಯಲ್ಲಿ ನಡೆಯಲಿವೆ ಎಂದರು.
ಕೃಷಿ ಕೈಗಾರಿಕೆ ಹೆಚ್ಚಳ
ಕರ್ನಾಟಕದ ಎಲ್ಲ ಭಾಗಗಳಲ್ಲೂ ಉದ್ದಿಮೆಗಳು ನೆಲೆಯೂರುತ್ತಿದೆ. ಕೃಷಿ ಆಧಾರಿತ ಕೈಗಾರಿಕೆಗಳು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಾರುಕಟ್ಟೆ ವಿಸ್ತರಣೆ, ಸುಲಭ ಸಾಗಾಟ, ಸುಗಮ ಮತ್ತು ತ್ವರಿತ ಪ್ರಯಾಣ ಇವುಗಳನ್ನು ಪರಿಗಣಿಸಿ, ಎಲ್ಲಾ ಕಡೆಗಳಲ್ಲೂ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮೈಸೂರು ಮತ್ತು ರಾಯಚೂರು ವಿಮಾನ ನಿಲ್ದಾಣ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಸುಸಜ್ಜಿತ ವಿಮಾನ ನಿಲ್ದಾಣ ಇರಬೇಕೆನ್ನುವುದು ಸರ್ಕಾರ ಆಶಯವಾಗಿದೆ ಎಂದು ಸಚಿವರು ತಿಳಿಸಿದರು.
ಈ ಮೂಲಕ ಕಾಂಗ್ರೆಸ್ ಸರ್ಕಾರಿ ರಾಜ್ಯದಲ್ಲಿ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರ ಭಾಗವಾಗಿಯೇ ರೈಲ್ವೆ ಯೋಜನೆ ಮತ್ತು ಎರಡು ವಿಮಾನ ನಿಲ್ದಾಣಗಳಿಗೆ ಕೋಟಿ ಕೋಟಿ ಹಣ ಬಿಡುಗಡೆ ಮಾಡಿದೆ.












Click it and Unblock the Notifications