ಮೈಲಾರ ಲಿಂಗೇಶ್ವರ ಜಾತ್ರೆ 2026: ಫೆಬ್ರವರಿ 4ಕ್ಕೆ ಕಾರ್ಣಿಕೋತ್ಸವ, ರಾಜಕಾರಣದ ದಿಕ್ಸೂಚಿ ಆಗುತ್ತಾ ಗೊರವಯ್ಯನ ಭವಿಷ್ಯವಾಣಿ!
ಹೂವಿನ ಹಡಗಲಿ: ಜನವರಿ ತಿಂಗಳು ಬಂತೆಂದರೆ ಉತ್ತರ ಕರ್ನಾಟಕದ ಅನೇಕ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ವಿಜೃಂಭಣೆಯ ಜಾತ್ರೆಗಳು ನಡೆಯುತ್ತವೆ. ಈಗಾಗಲೇ ಹಾವೇರಿ, ಕೊಪ್ಪಳದ ವಿಶೇಷ ಜಾತ್ರೆಗಳು ಜರುಗಿವೆ. ಪ್ರತಿ ವರ್ಷ ಭಾರತ ಹುಣ್ಣಿಮೆ ವೇಳೆ ಆರಂಭವಾಗುವ ರಾಜ್ಯದ ಸುಪ್ರಸಿದ್ಧ ಜಾತ್ರೆ ವಿಜಯನಗರ ಜಿಲ್ಲೆ, ಹೂವಿನ ಹಡಗಲಿ ತಾಲೂಕಿನ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿ ಜಾತ್ರೆಗೆ ದಿನಗಣನೆ ಶುರುವಾಗಿದೆ. ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೆಈ ಬಾರಿಯ ಪ್ರಮುಖ ಮೈಲಾರ ಕಾರ್ಣಿಕೋತ್ಸವ ಏನಾಗಲಿದೆ? ಎಂಬುದರ ಮೇಲೆ ಜನರ ಚಿತ್ತ ನೆಟ್ಟಿದೆ.
2026ರ ಫೆಬ್ರವರಿ 1ರಂದು ರವಿವಾರ ಭಾರತ ಹುಣ್ಣಿಮೆ ಇದ್ದು, ಅಂದಿನಿಂದ ಫೆಬ್ರವರಿ 5ರವರೆಗೆ ಜಾತ್ರೆ, ಆಚರಣೆ, ಫೂಜಾ ಕೈಂಕರ್ಯಗಳು ಜರುಗಲಿವೆ. ಫೆಬ್ರವರಿ 04ರಂದು ಸಂಜೆ ಗೊರವಯ್ಯನಿಂದ ಡಂಕಣಮರಡಿಯಲ್ಲಿ ಮೈಲಾರ ಕಾರ್ಣಿಕೋತ್ಸವ ಜರುಗಲಿದೆ. ಈ ಜಾತ್ರೆಯು ರಂಗು ಒಟ್ಟು 11 ದಿನ ಇರುತ್ತದೆ. ಜನವರಿ 26ರಿಂದಲೇ ಜನರು ಸುಕ್ಷೇತ್ರ ಮೈಲಾರದತ್ತ ತೆರಳುತ್ತಾರೆ. ಕರ್ನಾಟಕದ ಅನೇಕ ಜಿಲ್ಲೆಗಳ ಜನರು, ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ಬೇರೆ ಬೇರೆ ಭಾಗದ ಕೋಟ್ಯಾಂತರ ಜನರು ಜಾತ್ರೆಗೆ ಆಗಮಿಸುತ್ತಾರೆ.

'ಏಳು ಕೋಟಿ...ಏಳು ಕೋಟಿಗೋ...': ಶ್ರದ್ಧಾ ಭಕ್ತಿಯ ಜಾತ್ರೆ
ಕಾರ್ಣಿಕೋತ್ಸವ ಪ್ರಯುಕ್ತ ಫೆಬ್ರವರಿ 04ರಂದೇ ಹೆಚ್ಚಿನ ಪ್ರಮಾಣದ ಜನರು ಸೇರುತ್ತಾರೆ. ಈ ಜಾತ್ರೆ ಹಾಗೂ ಕಾರ್ಣಿಕವು ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳಲ್ಲು ಪ್ರಸಿದ್ಧ ಪಡೆದಿದೆ. ಚಕ್ಕಡಿ, ಬಂಡಿ, ನಾನಾ ವಾಹನಗಳ ಮೂಲಕ ಇಲ್ಲಿ ಬಂದು ದೇವರ ಪೂಜೆ ಮಾಡಿ ಪುನೀತರಾಗುತ್ತಾರೆ. ಭಕ್ತರು ಕುಟುಂಬ ಸಮೇತರಾಗಿ ಬಂದು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಡೋಣಿ ತುಂಬಿಸಿ, ಮೈಲಾರ ಲಿಂಗೇಶ್ವರನಿಗೆ ನೈವೇಧ್ಯ ಅರ್ಪಿಸುತ್ತಾರೆ. ಗೊರವರು ಮೈಲಾರ ದೇವರ ಆರಾಧಕರಾಗಿದ್ದು, ಭಂಡಾರ ತ್ರಿಶೂಲ, ಡಮರುಗಳ ಹಿಡಿದು ಹೆಜ್ಜೆ ಹಾಕಿ, ಶಿವನ ಸ್ತೋತ್ರ ಹೇಳುತ್ತಾರೆ. ಅತ್ಯಂತ ವಿಧಿ ವಿಧಾನಗಳಿಂದ, ಶ್ರದ್ಧಾ ಭಕ್ತಿಯಿಂದ ದೇವರನ್ನು ನೆನೆಯಲಾಗುತ್ತದೆ. ಇದು ಪ್ರತಿ ವರ್ಷ ನಡೆಯುವ ಪ್ರಕ್ರಿಯೆ ಆಗಿದೆ. ಜಾತ್ರೆ ತುಂಬೆಲ್ಲ 'ಏಳು ಕೋಟಿ...ಏಳು ಕೋಟಿಗೋ...' ಎಂದು ಭಕ್ತರ ಉದ್ಘಾರ ಮೊಳಗುತ್ತಲೇ ಇರುತ್ತದೆ.
ಸುಕ್ಷೇತ್ರ ಮೈಲಾರ ಕಾರ್ಣಿಕೋತ್ಸವ ಏಕೆ ವಿಶೇಷ?
ರಾಜ್ಯದ ಬೇರೆ ಬೇರೆ ಮೈಲಾರ ದೇವರ ಕ್ಷೇತ್ರಗಳಲ್ಲೂ ಕಾರ್ಣಿಕ ನಡೆಯುತ್ತದೆ. ಆದರೆ ಹೂವಿನ ಹಡಗಲಿಯ ಶ್ರೀ ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ ಗೊರವಯ್ಯ ನುಡಿಯುವ ಕಾರ್ಣಿಕವು ರಾಜ್ಯದ ರಾಜಕೀಯ, ಅನ್ನದಾನ, ಜನ ಸಾಮಾನ್ಯರು, ಆರೋಗ್ಯದ ಮೇಲೆ ಕೇಂದ್ರೀಕೃತವಾಗಿರುತ್ತದೆ ಎಂದು ನಂಬಲಾಗಿದೆ. ಇದು ಒಂದು ವರ್ಷದ ಏರುಪೇರು, ಅಭಿವೃದ್ಧಿ ಸೂಚಕ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಕಾರ್ಣಿಕವನ್ನು ಕೋಟ್ಯಾಂತರ ಜನರು ನಂಬುತ್ತಾರೆ.
ರಾಜ್ಯದಲ್ಲಿ 2025ರಲ್ಲಿ ವಾಡಿಕೆಯಷ್ಟು ಮಳೆ ಆಗಿದೆ. ಹಿಂಗಾರು, ಮುಂಗಾರು ಬೆಳೆಯು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿವೆ. ಮುಂದಿನ ಒಂದು ವರ್ಷ ಹೇಗಿರುತ್ತದೆ ಎಂಬುದನ್ನು ಭಕ್ತರು ಈ ಕಾರ್ಣಿಕದಿಂದ ಕಂಡುಕೊಳ್ಳುತ್ತಾರೆ. ಜೊತೆಗೆ ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಗೊಂದಲ, ಚರ್ಚೆಗಳು ನಡೆಯುತ್ತಿವೆ. ಇಲ್ಲಿನ ಕಾರ್ಣಿಕವು ಸಹ ರಾಜಕೀಯ ಏರಿಳಿತವನ್ನು ಸೂಚಿಸುತ್ತದೆ ಎಂದು ಭಕ್ತರು ಲೆಕ್ಕಾಚಾರ ಹಾಕುತ್ತಾರೆ. ಅದೆಷ್ಟೋ ಗಣ್ಯರು ಸಹ ಈ ಕಾರ್ಣಿಕವನ್ನು ನಂಬುವುದು ಉಂಟು.
2025ರ ಹೂವಿನ ಹಡಗಲಿ ಮೈಲಾರ ಕಾರ್ಣಿಕದ ಸಮಯ
ಫೆಬ್ರವರಿ 4ರಂದು ಸಂಜೆ 5.30ಕ್ಕೆ ಕಾರ್ಣಿಕೋತ್ಸವ ಮೈಲಾರದ ಡೆಂಕನಮರಡಿಯಲ್ಲಿ ಗೊರವಯ್ಯ 18 ಅಡಿ ಎತ್ತರದ ಬಿಲ್ಲನೇರಿ ಭವಿಷ್ಯ ನುಡಿಯುತ್ತಾರೆ. ಕಪ್ಪು ಕಂಬಳಿ, ಡಮರುಗ, ಮತ್ತು ತ್ರಿಶೂಲ ಧರಿಸಿರುವ ಇವರು ಈ 'ಕಾರ್ಣಿಕ' (ದೈವವಾಣಿ) ನುಡಿಯವು ಮುನ್ನಾ ಕೆಲವು ದಿನ ಉಪವಾಸ ವ್ರತ ಆಚರಿಸುತ್ತಿರುತ್ತಾರೆ. ಇದು ಸಹ ಜಾತ್ರೆಯ ಮತ್ತೊಂದು ವಿಶೇಷವಾಗಿದೆ. 2025ರಲ್ಲಿ 'ತುಂಬಿದ ಕೊಡ ತುಳುಕಿತಲೇ ಪರಾಕ್' ಭವಿಷ್ಯವಾಣಿಯನ್ನು ಗೊರವಯ್ಯ ನುಡಿದಿದ್ದರು.
ಜಿಲ್ಲಾಡಳಿತದಿಂದ ಅಗತ್ಯ ವ್ಯವಸ್ಥೆ
ಈ ಬಾರಿಯ ಜಾತ್ರೆಗಾಗಿ ಜಿಲ್ಲಾಡಳಿತವು ಜಾತ್ರಾ ಸ್ಥಳದಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲು, ಭಕ್ತಾಧಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದೆ. ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯ ವ್ಯವಸ್ಥೆ, ಪಿಡಬ್ಲುಡಿ ಹಾಗೂ ಪಿಆರ್ಇ ಇಲಾಖೆಗಳು ರಸ್ತೆ ದುರಸ್ತಿ ಮಾಡುವಂತೆ ಈಗಾಗಲೇ ಕ್ರಮ ಸೂಚನೆ ನೀಡಿದೆ. ಎಲ್ಲಾ ಸಿದ್ಧತೆಗಳು ನಡೆದಿವೆ. ಕೋಟ್ಯಾಂತರ ಜನ ಸೇರುವ ಹಿನ್ನೆಲೆಯಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಆಗದಂತೆ ಹೆಚ್ಚುವರಿ ತಾತ್ಕಾಲಿಕ ಟಾವರ್ ನಿರ್ಮಿಸುವ ಕೆಲಸ ಏರ್‌ಟೆಲ್ ಕಂಪನಿ ಮಾಡುತ್ತಿದೆ. ಯಾವುದೇ ಅಡಚಣೆ ಆಗದಂತೆ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ. ಜಾತ್ರೆ ಪ್ರಯುಕ್ತ ತುಂಗಭದ್ರಾ ನದಿಗೆ ಹೆಚ್ಚಿನ ನೀರು ಹರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.
ತುಂಗಭದ್ರಾ ನದಿಗೆ ನೀರು ಹರಿಸಲು ಸೂಚನೆ
ಕೋಟ್ಯಾಂತರ ಭಕ್ತರು ಆಗಮಿಸುವ ಕಾರಣಕ್ಕೆ ಅವರ ಪುಣ್ಯಸ್ನಾನಕ್ಕೆ, ನೀರಿನ ಲಭ್ಯತೆ ಉದ್ದೇಶದಿಂದ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿಸಲಾಗುತ್ತದೆ. ಜನವರಿ 21ರಿಂದ 31ರವರೆಗೆ ನೀರು ಬಿಡಲಾಗುತ್ತಿದೆ. ಪ್ರತಿ ದಿನ 500 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಬೇಕು, ಜಾನುವಾರುಗಳ ಮೈ ತೊಳೆಯುವಾಗ ಮುನ್ನೆಚ್ಚರಿಕೆ ವಹಿಸುವಂತೆ ಅಗತ್ಯ ಸೂಚನೆಗಳನ್ನು ಕೊಡಲಾಗಿದೆ.












Click it and Unblock the Notifications