ಬ್ರೇಕಿಂಗ್ ನ್ಯೂಸ್; ಜೂನ್ 1ರಿಂದ ಬಾಗಿಲು ತೆರೆಯಲಿವೆ ದೇವಾಲಯ
ಬೆಂಗಳೂರು, ಮೇ 26 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ದೇವಾಲಯಗಳನ್ನು ಮುಚ್ಚಲಾಗಿತ್ತು. ಜೂನ್ 1ರಿಂದ ಕರ್ನಾಟಕದಲ್ಲಿ ದೇವಾಲಯಗಳು ಬಾಗಿಲು ತೆರೆಯಲಿವೆ.
ಮಂಗಳವಾರ ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಈ ಕುರಿತು ಮಾಹಿತಿ ನೀಡಿದರು. " ಕರ್ನಾಟಕ ಸರ್ಕಾರ ಜೂನ್ 1ರಿಂದ ದೇವಾಲಯದ ಬಾಗಿಲು ತೆರೆಯಲು ತೀರ್ಮಾನಿಸಿದೆ" ಎಂದು ಹೇಳಿದರು.
"ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತದೆ. ಅದನ್ನು ಕಡ್ಡಾಯವಾಗಿ ಪಾಲಿಸಬೇಕು. ಮೇ 31ರಂದು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ದೇವಾಲಯಗಳಿಗೆ ಸೂಚನೆ ನೀಡಲಾಗಿದೆ" ಎಂದು ಸಚಿವರು ವಿವರಿಸಿದರು.

ರಾಜ್ಯದ ಆಯ್ದ ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಆನ್‌ಲೈನ್ ಸೇವೆಗಳ ಬುಕ್ಕಿಂಗ್ ಬುಧವಾರದಿಂದ ಆರಂಭವಾಗಲಿದೆ. ಆನ್ ಲೈನ್ ದರ್ಶನ ವ್ಯವಸ್ಥೆಯೂ ಆರಂಭವಾಗಲಿದೆಯೇ? ಎಂದು ಕಾದು ನೋಡಬೇಕು.
ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ರಾಜ್ಯದಲ್ಲಿ ದೇವಾಲಯ, ಚರ್ಚ್, ಮಸೀದಿಗಳನ್ನು ಮುಚ್ಚಲಾಗಿದೆ. ಯುಗಾದಿ, ರಾಮನವಮಿ ಸೇರಿದಂತೆ ಯಾವ ಹಬ್ಬಕ್ಕೂ ದೇವಾಲಯಗಳಿಗೆ ಭಕ್ತರ ಪ್ರವೇಶ ಇರಲಿಲ್ಲ.
ಗುಡ್ ಫ್ರೈಡೇ, ರಂಜಾನ್ ಸಂದರ್ಭದಲ್ಲಿಯೂ ಚರ್ಚ್, ಮಸೀದಿಗೆ ಜನರು ಭೇಟಿ ನೀಡದಂತೆ ನಿರ್ಬಂಧ ಹೇರಲಾಗಿತ್ತು. ಈಗ ದೇವಾಲಯ ಬಾಗಿಲು ತೆರೆಯುವ ಕುರಿತು ಘೋಷಣೆ ಮಾಡಲಾಗಿದೆ. ಆದರೆ, ಚರ್ಚ್ ಮತ್ತು ಮಸೀದಿ ಬಾಗಿಲು ತೆರೆಯಲು ಅವಕಾಶ ನೀಡಲಾಗುತ್ತದೆಯೇ? ಎಂಬುದನ್ನು ಸ್ಪಷ್ಟಪಡಿಸಿಲ್ಲ.












Click it and Unblock the Notifications