Murudeshwar Tragedy: ವಿದ್ಯಾರ್ಥಿನಿಯರ ದುರಂತ ಅಂತ್ಯ, ಸರ್ಕಾರದ ಮುಂದಿನ ನಡೆ ಬಿಚ್ಚಿಟ್ಟ ಸಚಿವ
ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರ ಬೀಚ್‌ನಲ್ಲಿ ಕೋಲಾರದಿಂದ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿಯರು ಸಾವನ್ನಪ್ಪಿದ ಘಟನೆ ಸದ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಈ ಬಗ್ಗೆ ಇಂದು ಸದನದಲ್ಲೂ ಚರ್ಚೆಯಾಗಿದೆ. ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಜೀವಹಾನಿಯಾದಲ್ಲಿ ನಾವು ಜವಾಬ್ದಾರರಲ್ಲ ಎಂದು ಕೈಚೆಲ್ಲಲು ನಮ್ಮ ಸರ್ಕಾರ ಸಿದ್ಧವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಅವರು ಕೇಳಿದ ಪ್ರಶ್ನೆಗೆ ಸಚಿವ ಕೃಷ್ಣ ಬೈರೇಗೌಡ ಈ ರೀತಿ ಉತ್ತರಿಸಿದ್ದಾರೆ. ವಿದ್ಯಾರ್ಥಿನಿಯರು ಮೃತಪಟ್ಟಿರುವುದು ವಿಷಾದದ ಸಂಗತಿ. ಹೆಚ್ಚಿನ ಜನ ಪ್ರವಾಸಕ್ಕೆ ಆಗಮಿಸುವ ಸ್ಥಳದಲ್ಲಿ ಮತ್ತಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿತ್ತು. ತಮ್ಮದೇ ಕ್ಷೇತ್ರದ ವಿದ್ಯಾರ್ಥಿನಿಯರ ದುರಂತ ಸಾವಿಗೆ ನ್ಯಾಯಕ್ಕಾಗಿ ಸಮೃದ್ಧಿ ಮಂಜುನಾಥ್ ಆಗ್ರಹಿಸಿದರು.

ಇದಕ್ಕೆ ಉತ್ತರ ನೀಡಿದ ಸಚಿವರು, ಮುಳಬಾಗಿಲು ತಾಲ್ಲೂಕಿನ ಎಂ.ಕೊತ್ತೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರನ್ನು ಶಿಕ್ಷಕರು ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಕ್ಕಳ ಜೊತೆ ಏಳು ಜನ ಶಿಕ್ಷಕರೂ ಪ್ರವಾಸಕ್ಕೆ ತೆರಳಿದ್ದಾರೆ. ಪ್ರವಾಸದ ವೇಳೆ ಮಕ್ಕಳ ರಕ್ಷಣೆ ಶಿಕ್ಷಕರ ಜವಾಬ್ದಾರಿ. ಮಕ್ಕಳು ಸಮುದ್ರದ ಆಳವಾದ ಸ್ಥಳಕ್ಕೆ ಈಜಲು ತೆರಳಿದ್ದಾಗ ಶಿಕ್ಷಕರು ಕೂಡಲೇ ತಡೆಯಬೇಕಿತ್ತು. ಆದರೆ ಅವರು ಆ ಕೆಲಸ ಮಾಡಿಲ್ಲ. ಹೀಗಾಗಿ ಶಿಕ್ಷಕರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದಿದ್ದಾರೆ.
ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಜೀವಹಾನಿ ಆದಲ್ಲಿ, ನಾವು ಜವಾಬ್ದಾರರಲ್ಲ ಎಂದು ಕೈಚೆಲ್ಲಲು ನಮ್ಮ ಸರ್ಕಾರ ತಯಾರಿಲ್ಲ. ಹೀಗಾಗಿ ನಿರ್ಲಕ್ಷ್ಯ ವಹಿಸಿದ್ದ ಶಿಕ್ಷಕರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಹೆಚ್ಚಿನ ಜನ ಪ್ರವಾಸಕ್ಕೆ ಆಗಮಿಸುವ ಸ್ಥಳಕ್ಕೆ ಮತ್ತಷ್ಟು ಮುಂಜಾಗ್ರತಾ ಕ್ರಮ ವಹಿಸಬೇಕು ಎನ್ನುವ ಸಲಹೆಯನ್ನೂ ಸ್ವೀಕರಿಸುತ್ತೇವೆ. ಈ ದುರಂತದ ಬಗ್ಗೆ ಶೀಘ್ರ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಏನಿದು ಪ್ರಕರಣ?: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಮೊರಾರ್ಜಿ ವಸತಿ ಶಾಲಾ ಮಕ್ಕಳನ್ನು ಕಳೆದ ಡಿಸೆಂಬರ್ 10ರಂದು ಶಿಕ್ಷಕರು ಮುರುಡೇಶ್ವರ ಕಡಲ ತೀರಕ್ಕೆ ಪ್ರವಾಸಕ್ಕೆಂದು ಕರೆತಂದಿದ್ದರು. ಆದರೆ, ಸಮುದ್ರದ ಆಳವಾದ ಭಾಗದಲ್ಲಿ ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿನಿಯರು ನೀರುಪಾಲಾಗಿ ನಿಧನರಾಗಿದ್ದರು.

ಈ ಘಟನೆಯಲ್ಲಿ ದೀಕ್ಷಾ, ಲಾವಣ್ಯ, ವಂದನಾ ಹಾಗೂ ಶ್ರಾವಂತಿ ಮೃತಪಟ್ಟಿದ್ದರು. ಈ ವಿದ್ಯಾರ್ಥಿನಿಯರ ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.
ಪ್ರವಾಸದ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು ಹಾಗೂ ಅಪಾಯಕಾರಿ ಸ್ಥಳಗಳಿಗೆ ಭೇಟಿ ನೀಡುವಾಗ ಮಕ್ಕಳ ಮೇಲೆ ನಿಗಾ ಇಡಬೇಕು. ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವು ಸಂಕಟವನ್ನು ನಾನು ಅರ್ಥೈಸಿಕೊಳ್ಳುತ್ತೇನೆ. ಇಂತಹ ಅವಘಡಗಳು ಮತ್ತೆಂದೂ ಸಂಭವಿಸದಿರಲಿ ಎಂದು ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದರು.












Click it and Unblock the Notifications