ಮುಳಬಾಗಿಲು ಶಾಸಕ ಮಂಜುನಾಥ್ ಗೆ ಜೀವ ಬೆದರಿಕೆ

ಕರ್ನಾಟಕ ದಲಿತ ರಕ್ಷಣಾ ಸಮಿತಿಯ ಲೆಟರ್ ಹೆಡ್ ನಲ್ಲಿ ಬಂದಿರುವ ಬೆದರಿಕೆ ಪತ್ರದಲ್ಲಿ ರಕ್ಷಣಾ ಸಮಿತಿಯ ಕೋಲಾರ ಜಿಲ್ಲಾಧ್ಯಕ್ಷ ಎಂ.ಎಸ್ ನಾರಾಯಣಸ್ವಾಮಿ ಅವರ ಸಹಿ ಇದೆ. ಶುಕ್ರವಾರ ಅಂಚೆ ಮೂಲಕ ಶಾಸಕರ ಕಚೇರಿ ಮತ್ತು ಮುಳಬಾಗಿಲಿನಲ್ಲಿರುವ ಮಂಜುನಾಥ್ ಅವರ ಮನೆಗೆ ಈ ಪತ್ರ ಬಂದಿದೆ.
ಬೆದರಿಕೆ ಪತ್ರದ ಬಗ್ಗೆ ಕೋಲಾರ ಎಸ್ಪಿ ಮತ್ತು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಶಾಸಕ ಮಂಜುನಾಥ್ ದೂರು ನೀಡಿದ್ದು, ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಹಿಂದೆಯೂ ಅನೇಕ ಬೆದರಿಕೆ ಪತ್ರಗಳು ಬಂದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಪತ್ರದಲ್ಲೇನಿದೆ : ಶಾಸಕ ಜಿ.ಮಂಜುನಾಥ್ ಅವರಿಗೆ ಬಂದಿರುವ ಬೆದರಿಕೆ ಪತ್ರದಲ್ಲಿ ನೀವು ಬುಡಕಟ್ಟು ಜನಾಂಗಕ್ಕೆ ಸೇರಿದವರು, ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ. ಆದ್ದರಿಂದ ನೀವು ಒಂದು ತಿಂಗಳಿನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬರೆಯಲಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ, ಒಂದು ವಾರದಲ್ಲಿ ನಿನ್ನ ಹೆಂಡಂತಿ ಮಕ್ಕಳ ಸಮೇತ ನಿನ್ನನ್ನು ಕೊಲೆ ಮಾಡಿಸುತ್ತೇವೆ. ನಮಗೆ ಪೊಲೀಸ್ ಇಲಾಖೆಯ ಬೆಂಬಲವಿದೆ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.
ನನ್ನ ಸಹಿ ಪೋರ್ಜರಿ : ಪತ್ರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ದಲಿತ ರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಎಸ್.ನಾರಾಯಣಸ್ವಾಮಿ, ನಾನು ಸಂವಿಧಾನ ಬದ್ಧವಾಗಿ ಹೋರಾಟ ಮಾಡುತ್ತೇವೆ, ಬೆದರಿಕೆ ಹಾಕುವಂತಹ ಕೆಲಸ ಮಾಡುವುದಿಲ್ಲ ಎಂದ ಹೇಳಿದ್ದಾರೆ.
ನನ್ನ ಸಹಿಯನ್ನು ನಕಲು ಮಾಡಿ ಶಾಸಕರಿಗೆ ಬೆದರಿಕೆ ಪತ್ರ ಕಳುಹಿಸಿಲಾಗಿದೆ. ಪತ್ರದಲ್ಲಿರುವ ಸಹಿ ನನ್ನದಲ್ಲ. ಈ ಕುರಿತು ಸಮಗ್ರವಾದ ವಿಚಾರಣೆ ನಡೆಯಲಿ, ನಂತರ ಸತ್ಯ ಹೊರಬರಲಿದೆ ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.












Click it and Unblock the Notifications