Siddaramaiah: ಸಿಎಂ ಸ್ಥಾನದಿಂದ ಕೆಳಗಿಳಿಯುವ ಮಾತೇ ಇಲ್ಲ- ಸಿದ್ದರಾಮಯ್ಯ ಸ್ಪಷ್ಟನೆ
ಬೆಂಗಳೂರು ಸೆಪ್ಟೆಂಬರ್ 24: ಯಾವುದೇ ಕಾರಣಕ್ಕೂ ಖುರ್ಚಿಯಿಂದ ಇಳಿಯುವುದು, ಸ್ಥಾನ ಬಿಟ್ಟುಕೊಡುವುದು ಮಾತೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇಂದಿನ ಹೈಕೋರ್ಟ್ ತೀರ್ಪಿನ ವಿರುದ್ಧ ಮುಂದಿನ ಕಾನೂನು ಹೋರಾಟ ಮಾಡುತ್ತೇನೆ. ಆದರೆ ಸಿಎಂ ಖುರ್ಚಿ ಬಿಟ್ಟುಕೊಡುವ ಮಾತೇ ಇಲ್ಲ ಎಂದು ಸಿದ್ದರಾಮಯ್ಯ ನೇರವಾಗಿ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಇದು ಪ್ರಾಥಮಿಕ ತನಿಖೆಯ ಹಂತ. ಈ ತನಿಖೆಗೆ ನಾನು ಅಂಜುವುದಿಲ್ಲ, ಹೆದರುವುದಿಲ್ಲ, ಹಿಂದೆ ಸರಿಯುವುದಿಲ್ಲ. ತನಿಖೆಯನ್ನು ನಾನು ಎದುರಿಸುತ್ತೇನೆ' ಎಂದು ಖಡಾಖಂಡಿತವಾಗಿ ಹೇಳಿದರು.

'ಬಿಜೆಪಿ ಹಿಂದಿನ ಬಾಗಿಲಿನಿಂದಲೇ ಅಧಿಕಾರಕ್ಕೆ ಬಂದಿದೆ. ಅದಕ್ಕೆ ಮುಂದಿನ ಬಾಗಿಲಿನಿಂದ ಅಧಿಕಾರಕ್ಕೆ ಬಂದು ಗೊತ್ತೇ ಇಲ್ಲ. ಆಪರೇಷನ್ ಕಮಲ ಮಾಡಿಯೇ ಅಧಿಕಾರಕ್ಕೆ ಬಿಜೆಪಿ ಬಂದಿದೆ. ಬಿಜೆಪಿ ಶಾಸಕರನ್ನು ಕೊಂಡುಕೊಳ್ಳುವ ಕೆಲಸ ಮಾಡಿ ಅಧಿಕಾರಕ್ಕೆ ಬಂದಿರುವುದೇ ಹೆಚ್ಚು. ಜನರಿಂದ ಮತಗಳಿಸಿ ಅಧಿಕಾರಕ್ಕೆ ಬಂದಿರುವುದು ಕಡಿಮೆ. ಹಿಂದಿನ ಚುನಾವಣೆಯಲ್ಲಿ ನಮ್ಮ ಶಾಸಕರನ್ನು ಕೊಂಡುಕೊಳ್ಳುವ ಕೆಲಸ ಮಾಡಿತು. ಆದರೆ ನಮ್ಮ ಶಾಸಕರು ಹೋಗಲಿಲ್ಲ. ಇದರಿಂದ ಇಂತಹ ಸುಳ್ಳು ಆರೋಪ ಮಾಡಿಕೊಂಡು ಸಮಸ್ಯೆ ಸೃಷ್ಟಿ ಮಾಡುತ್ತಿದೆ. ರಾಜ್ಯಪಾಲರನ್ನು ಕೊಂಡುಕೊಳ್ಳಬಹುದು, ಬೇರೆ ಯಾರನ್ನೇ ಕೊಂಡುಕೊಳ್ಳಬಹುದು ಆದರೆ ನಮ್ಮನ್ನು ಮಾತ್ರ ಏನೂ ಮಾಡಿಕೊಳ್ಳಲು ಆಗುವುದಿಲ್ಲ' ಎಂದು ವಿಶ್ವಾಸದಿಂದ ಸಿದ್ದರಾಮಯ್ಯ ಹೇಳಿದರು.
ಇತ್ತ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ರಾಜ್ಯದೆಲ್ಲೆಡೆ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ನಗರ ಬಿಜೆಪಿಯಿಂದ ಪ್ರತಿಭಟನೆ
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್ ಅಸ್ತು ಹಿನ್ನಲೆ ಶಿವಮೊಗ್ಗದಲ್ಲಿ ನಗರ ಬಿಜೆಪಿಯಿಂದ ಪ್ರತಿಭಟನೆ ನಡೆದಿದೆ. ಕೂಡಲೇ ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಶಿವಮೊಗ್ಗದ ಗೋಪಿ ವೃತ್ತದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿ ಕಾರ್ಯಕರ್ಯರು ಆಕ್ರೋಶ ವ್ಯಕ್ತಪಡಿಸಿದರು. ಕೋರ್ಟ್ ಆದೇಶ ಪಾಲಿಸಿ ಸಿಎಂ ರಾಜೀನಾಮೆ ನೀಡುವಂತೆ ಒತ್ತಾಯ ಹೇರಲಾಗಿದೆ. ಪ್ರತಿಭಟನೆಯಲ್ಲಿ ಎಂಎಲ್ಸಿ ಡಿ.ಎಸ್ ಅರುಣ್, ಡಾ.ಧನಂಜಯ ಸರ್ಜಿ ಹಾಗೂ ಬಿಜೆಪಿ ನಗರಾಧ್ಯಕ್ಷ ಜಗದೀಶ್ ಸೇರಿದಂತೆ ಕೆಲ ಮುಖಂಡರು ಭಾಗಿಯಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ದದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಕಳೆದ ಎರಡ್ಮೂರು ತಿಂಗಳಿಂದ ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಟ ಮಾಡಿಕೊಂಡು ಬರ್ತಿದ್ದೇವೆ. ಎಸ್ಐಟಿ ತನಿಖೆ ಮಾಡಿಸುವ ಮೂಲಕ ತಮ್ಮ ಶಾಸಕರಿಗೆ ಕ್ಲಿನ್ ಚಿಟ್ ಕೊಡಿಸುತ್ತಾ ಬಂದಿದ್ದಾರೆ. ಕರ್ನಾಟಕದ ಮಣ್ಣಿನ ಸಂಸ್ಕೃತಿ ಇದೆ ಆಪಾಧನೆ ಬಂದಾಗ ರಾಜೀನಾಮೆ ಕೊಡಬೇಕು. ರಾಜ್ಯಪಾಲರ ಘಣತೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ಕಾಂಗ್ರೇಸ್ ಹಗರಣಗಳ ಸಾಧನೆಯಲ್ಲೇ ಬಂದಿರೋದು. ಅಪ್ಪಿ ತಪ್ಪಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಮುಡಾ ಹಗರಣದಲ್ಲಿ ಕೇವಲ ರಾಜೀನಾಮೆ ನಿಡೋದಲ್ಲ. ಮುಡಾ ಹಗರಣದ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಮುಂಡುತನದ ರಾಜಕಾರಣವನ್ನು ಸಿಎಂ ಮಾಡಬಾರದು. ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ಕಾನೂನು ಅದನ್ನು ಗೌರವಿಸಬೇಕು. ಈಗಲೂ ರಾಜ್ಯಪಾಲರ ಬಗ್ಗೆ ಮಾತನಾಡುತ್ತಿದ್ದಾರೆ. ರಾಜೀನಾಮೆ ನೀಡುವ ವರೆಗೆ ನಮ್ಮ ಹೋರಾಟ ನಡೆಯುತ್ತೆ. ತನಿಖೆ ಆಗೋವರೆಗೆ ಆ ಸ್ಥಾನದಲ್ಲಿ ಕೂರುವ ಯೋಗ್ಯತೆ ನಿಮಗಿಲ್ಲ. ರಾಜೀನಾಮೆ ಕೊಟ್ಟು ಪಕ್ಷದ ಹಾಗೂ ನಿಮ್ಮ ಗೌರವ ಕಾಪಾಡಿಕೊಳ್ಳಬೇಕು. ಆರೋಪ ಮುಕ್ತರಾಗುವರೆಗೆ ರಾಜೀನಾಮೆ ನೀಡಲಿ. ಆರೋಪ ಮುಕ್ತರಾದ ನಂತರ ಅವರೇ ಬೇಕಾದರೆ ಸಿಎಂ ಆಗಲಿ ನಮಗೆ ಸಂಬಂಧ ಇಲ್ಲ ಎಂದರು.
ಹಾಸನದಲ್ಲೂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ
ಹಾಸನದಲ್ಲೂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಗೋ ಬ್ಯಾಕ್ ಸಿದ್ದರಾಮಯ್ಯ ಎಂದು ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ನಡೆಸಿದ್ದಾರೆ.
ರೇಸ್‌ಕೋರ್ಸ್ ನಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ
ಇನ್ನೂ ಬೆಂಗಳೂರಿನ ರೇಸ್‌ಕೋರ್ಸ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಬಿಜೆಪಿಗೆ ಠಕ್ಕರ್ ಕೊಡಲು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಶುರು ಮಾಡಿದ್ದಾರೆ. ಬಿಜೆಪಿಗೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿ ಕಾರಿದೆ.












Click it and Unblock the Notifications