ಮುಡಾ ಹಗರಣ: ನನ್ನ ಪತ್ನಿಯ ವೈಯಕ್ತಿಕ ನಿರ್ಧಾರವನ್ನ ಗೌರವಿಸುತ್ತೇನೆ ಎಂದ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 01: ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಮುಡಾ ನೀಡಿರುವ 14 ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡು, ನನಗೂ ಆಶ್ಚರ್ಯ ಉಂಟು ಮಾಡಿದ್ದಾರೆ. ಹೀಗಿದ್ದರೂ ನಿವೇಶನಗಳನ್ನು ಹಿಂದಿರುಗಿಸಿದ ನನ್ನ ಪತ್ನಿಯ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನನ್ನ ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಎಂದೂ ಕೂಡಾ ಮಧ್ಯೆಪ್ರವೇಶಿಸದೆ ಕುಟುಂಬಕ್ಕಷ್ಟೆ ಸೀಮಿತವಾಗಿದ್ದ ನನ್ನ ಪತ್ನಿ ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿರುವುದಕ್ಕೆ ನನಗೆ ವಿಷಾದ ಇದೆ ಎಂದು ಹೇಳಿದರು.

ಪಾದಯಾತ್ರೆಗೆ ಸಿಕ್ಕಿದ ಮೊದಲ ಜಯ: ಗೋವಿಂದ ಕಾರಜೋಳ
ಮುಡಾ ಹಗರಣವನ್ನು ಕೈಗೆತ್ತಿಕೊಂಡು ನಮ್ಮ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳಿದ ಪಾದಯಾತ್ರೆಗೆ ಸಿಕ್ಕಿದ ಮೊದಲ ಜಯ ಇದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಅಭಿಪ್ರಾಯಪಟ್ಟರು.
ಸಿದ್ದರಾಮಯ್ಯನವರು 40 ವರ್ಷಗಳ ರಾಜಕಾರಣದಲ್ಲಿ ನಾನೊಬ್ಬ ಪ್ರಾಮಾಣಿಕ, ನನಗೆ ಯಾವುದೇ ಕಪ್ಪು ಚುಕ್ಕಿ ಇಲ್ಲ ಎಂದು ಅವರಷ್ಟಕ್ಕೇ ಅವರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಪಾರದರ್ಶಕ ಆಡಳಿತ ಮಾಡಿದ್ದಾಗಿ ಹೇಳಿಕೊಳ್ಳುತ್ತಿದ್ದರು ಎಂದು ಟೀಕಿಸಿದರು.
ಪಾರದರ್ಶಕಕ್ಕಿಂತ ಪ್ರಾಮಾಣಿಕ ಆಡಳಿತ ಬಹಳ ಮುಖ್ಯ. ಪ್ರಾಮಾಣಿಕ ಆಡಳಿತದ ವಿಚಾರದಲ್ಲಿ ಸಿದ್ದರಾಮಯ್ಯನವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು. 120 ವರ್ಷಗಳ ಹಳೆಯದಾದ ಕಾಂಗ್ರೆಸ್ ಪಾರ್ಟಿಯ ಮಾನ, ಮರ್ಯಾದೆ ಹಾದಿಬೀದಿಯಲ್ಲಿ ಹರಾಜಾಗುತ್ತಿದೆ. ಅದಕ್ಕೆ ಸಿದ್ದರಾಮಯ್ಯನವರು ಕಾರಣ ಎಂದು ಆಕ್ಷೇಪಿಸಿದರು.
ಸಿದ್ದರಾಮಯ್ಯನವರು ಪ್ರಾಮಾಣಿಕರಾಗಿದ್ದರೆ ರಾಜೀನಾಮೆ ಕೊಟ್ಟು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕಾಗಿತ್ತು. ಅವರು ಅಧಿಕಾರಕ್ಕೆ ಅಂಟಿಕೊಂಡು ಭಂಡತನ ಪ್ರದರ್ಶನ ಮಾಡಿದ್ದಾರೆ ಎಂದು ಟೀಕಿಸಿದರು. ಸ್ವಾತಂತ್ರ್ಯ ಬಂದ ಬಳಿಕ 75 ವರ್ಷಗಳ ದೇಶದ ಇತಿಹಾಸದಲ್ಲಿ ಈ ರೀತಿ ಗೌರವಾನ್ವಿತ ರಾಜ್ಯಪಾಲರ ಮೇಲೆ ಆಪಾದನೆ ಮಾಡಿದ ಯಾವ ಮುಖ್ಯಮಂತ್ರಿಯೂ ಇಲ್ಲ ಎಂದು ಹೇಳಿದರು.











Click it and Unblock the Notifications