ಯಡಿಯೂರಪ್ಪ-ವಿಜಯೇಂದ್ರ ವಿರುದ್ಧ ಮಾತನಾಡಿದರೆ ಸಹಿಸಲ್ಲ: ರೇಣುಕಾಚಾರ್ಯ ಖಡಕ್ ಎಚ್ಚರಿಕೆ
ದಾವಣಗೆರೆ, ನವೆಂಬರ್ 26: ಕರ್ನಾಟಕ ಬಿಜೆಪಿ ಪಾಳಯದಲ್ಲಿ ಹಿರಿಯ ನಾಯಕರೇ ಸ್ವಪಕ್ಷದವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಂಡಾಯ ಸಾರಿರುವ ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಕೆಲವರ ವಿರುದ್ಧ, ಅದರಲ್ಲೂ ಬಿಎಸ್‌ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ವಿರುದ್ಧ ಮಾತನಾಡಿದರೆ ಸಹಿಸುವುದಿಲ್ಲ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿ. ಎಸ್. ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ಅವರ ಬಗ್ಗೆ ಕೀಳಾಗಿ ಮಾತನಾಡಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ಯಾರೇ ವಿರುದ್ಧ ಮಾತನಾಡಿದರೆ ಸುಮ್ಮನಿರಲ್ಲ ಎಂದು ಹೇಳಿದ್ದಾರೆ.

ಪಕ್ಷದ ಹಿರಿಯ ನಾಯಕರು, ಶಾಸಕರು ಸೇರಿದಂತೆ ಎಲ್ಲರೂ ಜೊತೆಯಲ್ಲಿದ್ದೇವೆ. ದೆಹಲಿಗೆ ಹೋಗಿ ಮಾಜಿ ಸಚಿವ ವಿ. ಸೋಮಣ್ಣ ಸೇರಿದಂತೆ ಕೆಲವರು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಬಗ್ಗೆ ಚಾಡಿ ಬೇಕಾದರೂ ಹೇಳಲಿ. ನಾವು ಎಲ್ಲರೂ ಸಿದ್ಧರಿದ್ದೇವೆ. ಆದರೆ ಈ ಇಬ್ಬರು ನಾಯಕರ ಬಗ್ಗೆ ಕೀಳಾಗಿ ಮಾತನಾಡಿದ ಸಹಿಸುವುದಿಲ್ಲ. ಖಂಡಿಸುತ್ತೇವೆ, ವಿರೋಧಿಸುತ್ತೇವೆ ಎಂದು ರೇಣುಕಾಚಾರ್ಯ ಎಚ್ಚರಿಸಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿದರೆ ಸರಿ ಇರಲ್ಲ
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ಬಗ್ಗೆ ಕೇವಲವಾಗಿ ಯಾರೂ ಮಾತನಾಡಬಾರದು. ಮಾಜಿ ಸಚಿವ ವಿ.ಸೋಮಣ್ಣ ಹಿರಿಯರು. ಅವರ ಬಗ್ಗೆ ಗೌರವವಿದೆ. ಮಾಧ್ಯಮಗಳ ಮುಂದೆ ಮಾತನಾಡಿದರೆ ನಾವು ವಿರೋಧಿಸುತ್ತೇವೆ ಎಂದು ಪುನರುಚ್ಚರಿಸಿದರು.
ಬಿ.ವೈ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಯಡಿಯೂರಪ್ಪ ಅವರು ಅಲ್ಲ. ಪಕ್ಷದ ಹೈಕಮಾಂಡ್. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ ಕಾರಣಕ್ಕೆ ಮತ್ತೆ ಪಕ್ಷ ಸಂಘಟನೆಗೆ ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಯಡಿಯೂರಪ್ಪರಿಂದ ಬಿಜೆಪಿ ಅಧಿಕಾರಕ್ಕೆ
ಆರು ತಿಂಗಳ ಕಾಲ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿರಲಿಲ್ಲ. ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪರ ಪ್ರಭಾವ ಮನವರಿಕೆಯಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಯಡಿಯೂರಪ್ಪ ಅವರಿಂದ ಎಂದು ತಿಳಿಸಿದರು.

ಹೋರಾಟದ ಮೂಲಕ ಬಿಜೆಪಿ ಕಟ್ಟಿ ಬೆಳೆಸಿರುವ ಯಡಿಯೂರಪ್ಪ ಅವರ ಬಗ್ಗೆ ಮಾತನಾಡಬಾರದು. ವಿ.ಸೋಮಣ್ಣ ಕಾಂಗ್ರೆಸ್ ನಿಂದ ಬಂದಿದ್ದು. ಯಡಿಯೂರಪ್ಪರ ಜೊತೆಗೆ ಅನಂತಕುಮಾರ್, ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್
ಸೇರಿದಂತೆ ಬಹಳಷ್ಟು ಮುಖಂಡರು ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಕಾರ್ಯಕರ್ತರು, ಮುಖಂಡರ ಶ್ರಮ ಇದೆ.
ಮಂತ್ರಿ ಮಾಡಲಿಲ್ಲವೇ?
ಯಡಿಯೂರಪ್ಪರ ಹೋರಾಟ ಯಾರೂ ಮರೆಯಬಾರದು. ಕುಟುಂಬ ರಾಜಕಾರಣ, ಅಡ್ಜಸ್ಟ್ ಮೆಂಟ್ ರಾಜಕಾರಣ ಎನ್ನುವುದು ಸರಿಯಲ್ಲ. ಕಾಂಗ್ರೆಸ್ ನಿಂದ ಬಂದರೂ ಮಂತ್ರಿಯಾಗಿರಲಿಲ್ವಾ. 2008ರ ವಿಧಾನಸಭಾ ಉಪಚುನಾವಣೆಯಲ್ಲಿ ಸೋತಾಗ ನಿಮ್ಮ ಮನೆಗೆ ಬಂದರು. ಎಂಎಲ್ಸಿ ಮಾಡಿ ಸಚಿವರನ್ನಾಗಿ ಮಾಡಲಿಲ್ಲವಾ. ನಮಗೆ ಅನ್ಯಾಯವಾಯ್ತು ಅಂತಾ ನಾವು ಹೋರಾಟ ಮಾಡಬೇಕಾಗಿತ್ತು ಎಂದು ಅವರು ವಿವರಿಸಿದರು.
ಯಡಿಯೂರಪ್ಪರು ಮುಖ್ಯಮಂತ್ರಿಯಾಗಿದ್ದಾಗ ಸೋತವರಿಗೂ ಮನೆಯಿಂದ ಕರೆದುಕೊಂಡು ಬಂದು ಸಚಿವರನ್ನಾಗಿ ಮಾಡಿದರು. ಯಡಿಯೂರಪ್ಪ ಅವರಿಂದಲೇ ಸದಾನಂದಗೌಡ, ಜಗದೀಶ್ ಶೆಟ್ಟರ್ ಸಿಎಂ ಆಗಿದ್ದು. ಯಡಿಯೂರಪ್ಪರ ಬಗ್ಗೆ ಕೀಳು ಮಟ್ಟದ ಭಾಷೆ ಬಳಸುತ್ತಾರೆ. ವಿಜಯೇಂದ್ರ ಅವರು ಪಕ್ಷ ಕಟ್ಟಿಲ್ಲವಾ?. ಇವೆಲ್ಲವನ್ನೂ ಅಳೆದು ತೂಗಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ. ಪಿ. ನಡ್ಡಾ ಸೇರಿದಂತೆ ವರಿಷ್ಠರು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ವಿಜಯೇಂದ್ರ ಅವರಿಗೆ ಸಿಕ್ಕ ರಾಜ್ಯಾಧ್ಯಕ್ಷ ಪಟ್ಟದ ನಿರ್ಧಾರಕ್ಕೆ ಅವರು ಸಮರ್ಥನೆ ಕೊಟ್ಟರು.
ಕೀಳಾಗಿ ನೋಡುವುದು ಸರಿಯಲ್ಲ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿದ್ದೇವೆ, ನೀವು ಸೋತಿದ್ದೀರಾ. ಹಾಗೆಂದ ಮಾತ್ರಕ್ಕೆ ಯಡಿಯೂರಪ್ಪರ ಕೀಳಾಗಿ ಮಾತನಾಡುವುದು ಸರಿಯಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ 105 ಸ್ಥಾನ ಬಿಜೆಪಿ ಪಡೆದಿತ್ತು. ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಒಂದು ಕಾಲು ವರ್ಷ ಅಧಿಕಾರದಲ್ಲಿತ್ತು. ಆಗ ಯಡಿಯೂರಪ್ಪ ಹಾಗೂ ಮೋದಿ ಅವರ ಪ್ರಭಾವದಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂತು ಎಂದರು.
ನಾನು ಸಹ ಮಂತ್ರಿಯಾಗಿದ್ದೆ. ಅಧಿಕಾರ ಅನುಭವಿಸಿದ್ದೇವೆ. ಸಚಿವ ಸ್ಥಾನ ತ್ಯಾಗ ಮಾಡಬೇಕು ಎಂದಾಗ ಯಡಿಯೂರಪ್ಪ ಅವರ ಮಾತು ಕೇಳಿದ್ದೇವೆ. ಸೋತವರನ್ನೂ ಸಚಿವರನ್ನಾಗಿ ಮಾಡಿದವರ ವಿರುದ್ಧ ವಿ. ಸೋಮಣ್ಣ ಮಾತನಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.












Click it and Unblock the Notifications