CM Fight: ಸತೀಶ್ ಜಾರಕಿಹೊಳಿ ಸಿಎಂ ಆಗೋ ಬಗ್ಗೆ ಪುತ್ರಿ ಪ್ರಿಯಾಂಕ ಅಚ್ಚರಿ ಹೇಳಿಕೆ!
ರಾಜ್ಯ ರಾಜಕಾರಣದಲ್ಲಿ ಸದ್ಯ ಹೊಸ ಸಿಎಂ ಸ್ಥಾನಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಜೋರಾಗಿ ಕೇಳಿಬರುತ್ತಿದೆ. ಹೈಕಮಾಂಡ್, ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್‌ನ ಹಲವು ಸಚಿವರನ್ನು ಸಾಲು ಸಾಲಾಗಿ ಭೇಟಿಯಾಗುತ್ತಿರುವ ಸತೀಶ್ ಜಾರಕಿಹೊಳಿ ಅವರ ಹೆಸರು ಸಿಎಂ ರೇಸ್‌ನಲ್ಲಿ ಮುನ್ನೆಲೆಗೆ ಬಂದಿದೆ.
ಮೊದಲಿಗೆ ದೆಹಲಿಗೆ ತೆರಳಿದ್ದ ಸತೀಶ್ ಜಾರಕಿಹೊಳಿ ಅವರು ಹೈಕಮಾಂಡ್ ಭೇಟಿಯಾಗಿ ಚರ್ಚೆಗೆ ಕಾರಣವಾಗಿದ್ದರು. ಅಲ್ಲಿಂದ ಬಂದ ನಂತರ ಮೊನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಜಾರಕಿಹೊಳಿ ಭೇಟಿಯಾಗುವ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದರು. ಇದಾದ ನಂತರ ಕಾಂಗ್ರೆಸ್‌ನ ಹಲವು ನಾಯಕರನ್ನು ಭೇಟಿಯಾದ ಸತೀಶ್ ಅವರು ಸಿಎಂ ಕುರ್ಚಿಗೆ ಕರ್ಚೀಫ್ ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದೀಗ ಸತೀಶ್ ಅವರ ಪುತ್ರಿ ಹಾಗೂ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕೂಡ ತಂದೆ ಮುಖ್ಯಮಂತ್ರಿ ಆಗುವ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ನಮ್ಮ ತಂದೆಯವರು ಮುಖ್ಯಮಂತ್ರಿ ಆಗಬೇಕು ಎನ್ನುವುದು ಹಲವರ ಕನಸು. ಹಲವು ವರ್ಷಗಳಿಂದ ನಮ್ಮ ತಂದೆ ಸಿಎಂ ಆಗಬೇಕೆಂದು ಅವರ ಅಭಿಮಾನಿಗಳು ಅಭಿಯಾನ ನಡೆಸುತ್ತಲೇ ಇದ್ದಾರೆ ಎಂದು ಬ್ಯಾಟಿಂಗ್ ಬೀಸಿದ್ದಾರೆ.
ನಮ್ಮ ತಂದೆಯವರು ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವ ಬಗ್ಗೆ ವಿಶೇಷ ಅರ್ಥ ಕಲ್ಪಿಸೋ ಅಗತ್ಯವಿಲ್ಲ. ತಂದೆಯವರು ಆಗಾಗ ದೆಹಲಿ ನಾಯಕರನ್ನು ಭೇಟಿಯಾಗುತ್ತಲೇ ಇರುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದೇ ವಿಚಾರವಾಗಿ ನಿನ್ನೆ ಮಾತನಾಡಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರು, ನಾವು ಸಭೆ ಸೇರಿದ ವಿಚಾರವಾಗಿ ಯಾರೂ ಹೆದರಬೇಕಾಗಿಲ್ಲ. ಎಲ್ಲ ಬೆಳವಣಿಗೆಗಳನ್ನು ಹೈಕಮಾಂಡ್ ಗಮನಿಸುತ್ತಲೇ ಇದೆ. ಪ್ರತಿಯೊಬ್ಬರಿಗೂ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ ಎಂದಿದ್ದರು.
ಎಲ್ಲರಿಗೂ ಮೊದಲಿಗೆ ಸಚಿವನಾಗಬೇಕು, ಆಮೇಲೆ ಡಿಸಿಎಂ, ಬಳಿಕ ಸಿಎಂ, ಕೊನೆಗೆ ಕೇಂದ್ರ ಸಚಿವರಾಗಬೇಕು ಅನ್ನೋ ಆಸೆ ಇದ್ದೇ ಇದೆ. ಆದರೆ, ಸದ್ಯಕ್ಕೆ ಸಿಎಂ ರೇಸ್‌ನ ವಾತಾವರಣ ಇಲ್ಲಿಲ್ಲ. ಮುಡಾ ತನಿಖೆ ಪ್ರಗತಿಯಲ್ಲಿದ್ದು, ಸಿಎಂ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಹೇಳಿದ್ದರು.

ಪ್ರತಿ ಬಾರಿ ಹೈಕಮಾಂಡ್ ನಾಯಕರು ಬೆಂಗಳೂರಿಗೆ ಬಂದಾಗ ಏರ್‌ಪೋರ್ಟ್ ರಸ್ತೆಯುದ್ದಕ್ಕೂ ಬ್ಯಾನರ್ ಹಾಕಿಸಿಕೊಂಡು ಸ್ವಾಗತಿಸುವ ತಮ್ಮದೇ ಪಕ್ಷದ ನಾಯಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ನಾವು ದಿನದಲ್ಲಿ ಹೆಚ್ಚು ಸಮಯವನ್ನು ಪಕ್ಷಕ್ಕೇ ನೀಡುತ್ತಿದ್ದು, ಕೆಲವರು ಪಕ್ಷಕ್ಕಾಗಿ ಎಲೆಮರೆಯ ಕಾಯಿಯಂತೆ ದುಡಿಯುತ್ತಿದ್ದಾರೆ ಎಂದು ಸತೀಶ್ ಹೇಳಿದ್ದರು.
ಹಾಗಾಗಿ ಪಕ್ಷದ ವಿಚಾರದಲ್ಲಿ ಕೆಲವರು ಮಾತ್ರ ಗುರುತಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಹೈಲೈಟ್ ಆಗಲ್ಲ. ಆದರೆ, ಕೆಲವರು ಏರ್‌ಪೋರ್ಟ್ ರಸ್ತೆಯುದ್ದಕ್ಕೂ ಬ್ಯಾನರ್, ಪೋಸ್ಟರ್‌ಗಳನ್ನು ಹಾಕಿಸಿಕೊಂಡು ಹೈಲೈಟ್ ಆಗುವವರೂ ಇದ್ದಾರೆ. ಆದರೆ, ಹಳ್ಳಿಗಳಲ್ಲಿ ಸ್ವಂತ ದುಡ್ಡಿನಿಂದ ಪಕ್ಷ ಬೆಳೆಸುವವರು ಕಣ್ಣಿಗೆ ಕಾಣುವುದೇ ಇಲ್ಲ ಎಂದು ಸತೀಶ್ ಜಾರಕಿಹೊಳಿ ಸಿಡಿದಿದ್ದರು.












Click it and Unblock the Notifications