DR C.N Manjunath: ರಾಮನಗರದ ಮಹತ್ವ ತಿಳಿಸಿ ಸಿಎಂಗೆ ಪತ್ರ ಬರೆದ ಸಂಸದ ಡಾ.ಮಂಜುನಾಥ್

ಬೆಂಗಳೂರು, ಜುಲೈ 13: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್​ ಸೇರಿದಂತೆ ಕಾಂಗ್ರೆಸ್​ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ನಾಯಕರ ಈ ಬೇಡಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಬಿಜೆಪಿ ನಾಯಕರು ಕೂಡ ರಾಮನಗರ ಜಿಲ್ಲೆಯ ಹೆಸರು ಬದಲಾಯಿಸದಂತೆ ಆಗ್ರಹಿಸಿದ್ದರು. ಇದೀಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ನೂತನ ಬಿಜೆಪಿ ಸಂಸದ ಡಾ. ಸಿಎನ್​ ಮಂಜುನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ರಾಮನಗರ ಹೆಸರಿನ ಮಹತ್ವ ತಿಳಿಸುವ ಮೂಲಕ ಹೆಸರು ಬದಲಾಯಿಸದಂತೆ ಮನವಿ ಮಾಡಿದ್ದಾರೆ.

MP Dr Manjunath Wrote A Letter To CM Siddaramaiah About The Importance Of Ramanagara

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯೆ ಸಮಂಜಸವಾಗಿರುವುದಿಲ್ಲ. ರಾಮನಗರಕ್ಕೆ ಭಾವನಾತ್ಮಕ, ಧಾರ್ಮಿಕ, ಐತಿಹಾಸಿಕ ಹಾಗೂ ಪೌರಾಣಿಕ ಇತಿಹಾಸವಿದೆ. ಕ್ಲೋಸ್‌ಪೇಟೆಗೆ ರಾಮನಗರವೆಂದು ಮರುನಾಮಕರಣ ಮಾಡಿದವರು ರಾಜ್ಯದ ಹೆಸರಾಂತ ಮಾಜಿ ಮುಖ್ಯಮಂತ್ರಿಯವರಾದ ದಿವಂಗತ ಕೆಂಗಲ್ ಹನುಮಂತಯ್ಯನವರು.

ಧಾರ್ಮಿಕ ಗುರುಗಳಾದ ಆದಿ ಚುಂಚನಗಿರಿಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಜೀಯವರು ಹಾಗೂ ನಡೆದಾಡುವ ದೇವರೆಂದೇ ಪ್ರಸಿದ್ದಿಯಾದ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜೀಯವರು ರಾಮನಗರ ಜಿಲ್ಲೆಯವರು. ಬೆಂಗಳೂರು ನಿರ್ಮಾತೃಗಳಾದ ನಾಡಪ್ರಭು ಶ್ರೀ ಕೆಂಪೆಗೌಡರು ಸಹ ಈ ಜಿಲ್ಲೆಗೆ ಸೇರಿದವರು. ರಾಮನಗರ ಜಿಲ್ಲೆಯು ರಾಜ್ಯಕ್ಕೆ ಐದು ಬಾರಿ ಮುಖ್ಯಮಂತ್ರಿ ಪದವಿಯನ್ನು ನೀಡಿದೆಯಲ್ಲದೆ ರಾಮನಗರದಿಂದ ಗೆದ್ದು ಮುಖ್ಯಮಂತ್ರಿಯವರಾಗಿದ್ದ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡರವರು ಈ ದೇಶದ ಪ್ರಧಾನಿಯಾಗಿದ್ದರು.

ರಾಮನಗರ ಕಣ್ವ ಮಹರ್ಷಿಯ ನಾಡು. ರಾಮಾಯಣದಲ್ಲಿನ ಶ್ರೀ ರಾಮಚಂದ್ರರು ರಾಮಗಿರಿಯಲ್ಲಿ ತಂಗಿರುವ ಇತಿಹಾಸವಿದೆ. ಈಗಾಗಲೇ ರಾಮನಗರವು ರೇಷ್ಮೆ ನಾಡೆಂದೇ ಪ್ರಸಿದ್ದಿಯಾಗಿದೆ. ಇದರ ಜೊತೆಗೆ ರಾಮನಗರದ ಹೆಸರು ಹೇಳುತ್ತಿದಂತೆ ಜಾನಪದ ಲೋಕ, ಚನ್ನಪಟ್ಟಣದ ಗೊಂಬೆಗಳು, ಅರ್ಕಾವತಿ, ಕಾವೇರಿ, ಶಿಂಷಾ, ಕಣ್ವ ನದಿಗಳು, ಮಂಚನಬೆಲೆ, ಬೈರಮಂಗಲ, ಹಾರೋಬೆಲೆ, ಕಣ್ವ ಮತ್ತು ಇಗ್ಗಲೂರು ಜಲಾಶಯಗಳು, ರಾಮಗಿರಿ, ಕೃಷ್ಣಗಿರಿ, ರೇವಣ್ಣಸಿದ್ದೇಶ್ವರ ಬೆಟ್ಟ, ಯತಿರಾಜಗಿರಿ, ಸೋಮಗಿರಿ, ಸಿಡಿಲಕಲ್ಲು ಮತ್ತು ಜಲಸಿದ್ದೇಶ್ವರ ಬೆಟ್ಟ, ಕಬ್ಬಾಳುದುರ್ಗ, ಸಾವನದುರ್ಗ, ಮೇಕೆದಾಟು ಮುಂತಾದವುಗಳು ನೆನಪಿಗೆ ಬರುತ್ತವೆ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಗೆ ರಾಮನಗರ ಎಂಬ ಹೆಸರೇ ರಕ್ಷಾಕವಚದಂತಿದೆ.

ಬೆಂಗಳೂರು ದಕ್ಷಿಣ ಲೋಕ ಸಭಾ ಕ್ಷೇತ್ರ ಪ್ರಸ್ತುತ ಬೆಂಗಳೂರಿನ ಅಡಿಯಲ್ಲಿಯೇ ಇದೆ. ಈಗಾಗಲೇ ಬೆಂಗಳೂರು ದಕ್ಷಿಣ ತಾಲ್ಲೂಕು ಅಸ್ತಿತ್ವದಲ್ಲಿದ್ದು ಬೆಂಗಳೂರು ನಗರ ಜಿಲ್ಲೆಗೆ ಸೇರಿರುತ್ತದೆ. ಹೀಗಿರುವಾಗ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿದರೆ ಹೆಚ್ಚು ಗೊಂದಲ ಸೃಷ್ಟಿಯಾಗುತ್ತದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಕೋಲಾರ ಜಿಲ್ಲೆಗೆ ಬೆಂಗಳೂರು ಪೂರ್ವ ಜಿಲ್ಲೆಯೆಂದು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆಯೆಂದು ಮರುನಾಮಕರಣ ಮಾಡುವ ಪ್ರಸ್ತಾವನೆಗಳು ಬಂದು ಇನ್ನಷ್ಟು ಗೊಂದಲ ಸೃಷ್ಟಿಯಾಗುವುದಲ್ಲದೆ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಸಂಭವವಿರುತ್ತದೆ.

ಕೇವಲ ಬೆಂಗಳೂರು ಎಂಬ ಹೆಸರಿನಿಂದಲೇ ಜಿಲ್ಲೆಯ ಅಭಿವೃದ್ಧಿಯಾಗುವುದಿದ್ದರೆ ರಾಮನಗರವು ಕರ್ನಾಟಕ ಏಕೀಕರಣವಾದಂದಿನಿಂದ 1988 ರ ವರೆಗೆ ಬೆಂಗಳೂರು ಜಿಲ್ಲೆಯಲ್ಲಿ ಹಾಗೂ 1988 ರಿಂದ 2007 ರ ವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂಬ ಹೆಸರಿನ ಜಿಲ್ಲೆಯಲ್ಲಿ ಒಳಗೊಂಡಿತೆಂಬುದನ್ನು ಗಮನಿಸಬೇಕಾಗುತ್ತದೆ. ಈ ಮೇಲಿನ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಹಾಗೂ 2007 ರಲ್ಲಿ ರಾಮನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿಯನ್ನು ಗಮನಿಸಿದಾಗ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರುನಾಮಕರಣ ಮಾಡುವುದು ಸಮಂಜಸವಲ್ಲ.

ಅಭಿವೃದ್ಧಿಯ ದೃಷ್ಟಿಯಿಂದಲೇ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರುನಾಮಕರಣ ಮಾಡುವ ಬದಲು ರಾಮನಗರವನ್ನೇ ಬ್ರಾಂಡ್ ರಾಮನಗರವನ್ನಾಗಿ ಮಾಡಿ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬಹುದಾಗಿದೆ. ರಾಮನಗರಕ್ಕೆ ತನ್ನದೆ ಇತಿಹಾಸವಿರುವುದರಿಂದ ಜಿಲ್ಲೆಗೆ ಮರುನಾಮಕರಣ ಮಾಡುವುದು ಸರಿಯಾದ ಕ್ರಮವಲ್ಲ.

ಅಲ್ಲದೇ ಈಗಾಗಲೇ ಬೆಂಗಳೂರು ಮಹಾನಗರವು ಬಹಳಷ್ಟು ವಿಸ್ತಾರವಾಗಿ ಬೆಳೆದಿದ್ದು ಇಲ್ಲಿ ವಾಸಿಸುತ್ತಿರುವ ನಾಗರಿಕರಿಗೆ ಸೂಕ್ತ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದೇ ದುಸ್ತರವಾಗಿದೆ. ಈ ಪರಿಸ್ಥಿತಿಯಲ್ಲಿ ಸುಂದರವಾಗಿ ಬೆಳೆಯುತ್ತಿರುವ ರಾಮನಗರವನ್ನು ನಗರ ಪ್ರದೇಶಕ್ಕೆ ಸೇರ್ಪಡೆ ಮಾಡುವ ನಿರ್ಧಾರ ಅವೈಜ್ಞಾನಿಕವಾಗಿದೆ. ರಾಮನಗರ ಜಿಲ್ಲೆಯು ರೈತರ ಜಿಲ್ಲೆಯಾಗಿ ಉಳಿಯಬೇಕೆ ಹೊರತು ರಿಯಲ್ ಎಸ್ಟೇಟ್ ಬಿಲ್ಕರ್‌ಗಳ ತಾಣವಾಗಬಾರದು. ರೈತರ ಬಾಳು ಹಸನಾಗಬೇಕಾದರೆ ಭೂಮಿಯ ಬೆಲೆ ಅಧಿಕವಾಗುವುದಕ್ಕಿಂತ ರೈತರು ಬೆಳೆದ ಬೆಳೆಯ ಬೆಲೆಯು ಅಧಿಕವಾಗಬೇಕು. ದಯವಿಟ್ಟು ಸನ್ಮಾನ್ಯ ಮುಖ್ಯಮಂತ್ರಿಯವರು ಈ ಪ್ರಸ್ತಾವನೆಯನ್ನು ತಿರಸ್ಕರಿಸಬೇಕು ಎಂದು ಸಂಸದ ಡಾ. ಸಿಎನ್​ ಮಂಜುನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+