Karnataka Shakti Scheme: 146 ಕೋಟಿ ದಾಟಿದ ಮಹಿಳೆಯರ ಉಚಿತ ಪ್ರಯಾಣ
ಬೆಂಗಳೂರು, ಫೆಬ್ರವರಿ 06: ಶಕ್ತಿ ಯೋಜನೆಯಡಿ 146 ಕೋಟಿ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿನಿಯರು ಉಚಿತವಾಗಿ ಪ್ರಯಾಣ ಮಾಡಿದ್ದು, ಮಹಿಳಾ ಸಬಲೀಕರಣಕ್ಕೆ ಶಕ್ತಿ ಯೋಜನೆ ಪೂರಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಕ್ತಿ ಯೋಜನೆಯ ಯಶಸ್ಸಿನ ಬಗ್ಗೆ ವಿವರಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈ ವರ್ಷ ಒಂದು ಸಾವಿರ ಬಸ್ಸುಗಳನ್ನು ಸೇರ್ಪಡೆ ಮಾಡುತ್ತಿದ್ದು, ಈಗ ನೂರು ಬಸ್ಸುಗಳ ಬಿಡುಗಡೆಯಾಗಿದೆ. ರಾಜ್ಯದ ಜನರಿಗೆ 4 ಕಾರ್ಪೋರೇಷನ್‍ಗಳು ಬಸ್ಸುಗಳ ಸೇವೆಯನ್ನು ಒದಗಿಸುತ್ತಿದೆ ಎಂದರು.

ನಾಲ್ಕು ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಕೂಡ ಕೆಲವು 3,800 ಬಸ್ಸುಗಳನ್ನು ಸ್ಥಗಿತಗೊಳಿಸಲಾಗಿತ್ತು. ನಾವು ಅಧಿಕಾರಕ್ಕೆ ಬಂದ ನಂತರ ಸಂಸ್ಥೆಗೆ 5,800 ಬಸ್ಸುಗಳನ್ನು ಸೇರ್ಪಡೆ ಮಾಡುತ್ತಿದ್ದೇವೆ. ಈ ರಾಜ್ಯದ ಜನರಿಗೆ ಸುರಕ್ಷಿತ ಮತ್ತು ಸರಾಗ ಪ್ರಯಾಣ ಮಾಡಲು ಅಗತ್ಯ ಅನುಕೂಲಗಳನ್ನು ಮಾಡಿಕೊಡಲಿದೆ ಎಂದರು.
ಕೆಎಸ್‌ಆರ್ಟಿಸಿ ಸಿಬ್ಬಂದಿಗೆ ವಿಮಾ ಸೌಲಭ್ಯ
ಕೆಎಸ್‌ಆರ್ಟಿಸಿ ಸಿಬ್ಬಂದಿಗಳಿಗೆ ವಿಮಾ ಸೌಲಭ್ಯವನ್ನು 1 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಕರ್ತವ್ಯದ ವೇಳೆ ಮೃತಪಡುವ ಸಿಬ್ಬಂದಿಗಳಿಗೆ ಪರಿಹಾರ ಮೊತ್ತವನ್ನು 3 ಲಕ್ಷ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಚುನಾವಣಾ ಪೂರ್ವದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕ.ರ.ಸಾ.ಸಂ ಮತ್ತು ಇತರೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸುತ್ತೇವೆ ಎಂದು ಹೇಳಿದ್ದೆವು. ಬೆಲೆಯೇರಿಕೆ, ಹಣದುಬ್ಬರು, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವ ಪರಿಸ್ಥಿತಿಯಲ್ಲಿ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಿದ್ದೇವೆ ಎಂದರು.
100 ಅಶ್ವಮೇಧ ಬಸ್‌ಗಳಿಗೆ ಸಿಎಂ ಸಿದ್ದರಾಮಯ್ಯ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ಹೊಸ ವಿನ್ಯಾಸದ 100 ಅಶ್ವಮೇಧ ಬಸ್‌ಗಳಿಗೆ ಸಿಎಂ ಸಿದ್ದರಾಮಯ್ಯ ನಿನ್ನೆ ಚಾಲನೆ ನೀಡಿದ್ದಾರೆ. ಹೊಸ ವಿನ್ಯಾಸದ ಹೊಸ ಬ್ರಾಂಡ್‌ನ ಕೆಎಸ್‌ಆರ್‌ಟಿ ಈ ಬಸ್‌ಗಳಲ್ಲಿಯೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಈ ಬಸ್‌ಗಳ ಮುಂದಿನ ಮತ್ತು ಹಿಂದಿನ ಗಾಜುಗಳು ವಿಶಾಲವಾಗಿದೆ. ಕಿಟಕಿ ಪ್ರೇಮ್ ಹಾಗೂ ಗಾಜು ದೊಡ್ಡಾಗಿದ್ದು, ಟಿಂಟೆಡ್ ಗಾಜುಗಳನ್ನು ಹೊಂದಿವೆ. ಹಾಗೂ ಈ ಬಸ್‌ನಲ್ಲಿ ಸ್ಥಳ ಟ್ರ್ಯಾಕರ್, ಪ್ಯಾನಿಕ್ ಬಟನ್ ಹಾಗೂ ಬಸ್ ಒಳಗಿನ ಮುಂಭಾಗದಲ್ಲಿ ಎಲ್‌ಇಡಿ ಮಾರ್ಗ ಫಲಕಗಳಿರಲಿದ್ದು, ಲಗೇಜ್ ಕ್ಯಾರಿಯರ್‌ಗಳನ್ನು ವಿನೂತನವಾಗಿ ವಿನ್ಯಾಸ ಮಾಡಲಾಗಿದೆ.












Click it and Unblock the Notifications