ವಿಧಾನಸಭಾ ಚುನಾವಣೆ: ಮತ್ತಷ್ಟು ಜೆಡಿಎಸ್ ನಾಯಕರು ಪಕ್ಷ ತೊರೆಯಲಿದ್ದಾರೆ ಎಂದು ಭವಿಷ್ಯ ನುಡಿದ ಎಚ್‌ಡಿಕೆ
"ಈಗಾಗಲೇ ಕೆಲವು ನಾಯಕರು ಕಳೆದ ಎರಡು ವರ್ಷಗಳಿಂದ ಜೆಡಿಎಸ್‌ನಿಂದ ಎರಡು ಕಾಲುಗಳನ್ನು ಹೊರಗಿಟ್ಟಿದ್ದರು, ಆದರೆ ಮೇಲ್ನೋಟಕ್ಕೆ ಪಕ್ಷದಲ್ಲಿದ್ದರು"
ಬೆಂಗಳೂರು, ಮಾರ್ಚ್ 03: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಜೆಡಿಎಸ್‌ನ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಕಾಂಗ್ರೆಸ್‌ನತ್ತ ತಮ್ಮ ಮುಂದಿನ ನಡೆ ಎಂದು ಘೋಷಿಸಿದ್ದಾರೆ. ಮಾರ್ಚ್ ಐದರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗುತ್ತಾರೆ. ಇದರ ಬೆನ್ನಲ್ಲೆ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮತ್ತೊಂದು ಬಾಂಬ್ ಹಾಕಿದ್ದಾರೆ.
ಇನ್ನೂ ಹೆಚ್ಚಿನ ಜೆಡಿಎಸ್ ನಾಯಕರು ಮತ್ತು ಶಾಸಕರು ಪಕ್ಷವನ್ನು ತೊರೆಯುವ ಸಾಧ್ಯತೆಯಿದೆ ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇದೇ ವೇಳೆ ಕರ್ನಾಟಕ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಚುನಾವಣಾ ಆಯೋಗವು ಈ ತಿಂಗಳ ಕೊನೆಯಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಂದಾಜಿಸಿದ್ದಾರೆ.

''ಜೆಡಿಎಸ್ ಐಸಿಯುನಲ್ಲಿದೆ, ಶಕ್ತಿ ಇಲ್ಲ, ಕಷ್ಟಪಟ್ಟು 10 ರಿಂದ 15 ಸೀಟು ಗೆಲ್ಲಬಹುದು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಹಲವರು ಜೆಡಿಎಸ್ ತೊರೆದು ಶಾಕ್ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೆಲವು ನಾಯಕರು ಕಳೆದ ಎರಡು ವರ್ಷಗಳಿಂದ ಜೆಡಿಎಸ್‌ನಿಂದ ಎರಡು ಕಾಲುಗಳನ್ನು ಹೊರಗಿಟ್ಟಿದ್ದರು, ಆದರೆ ಮೇಲ್ನೋಟಕ್ಕೆ ಪಕ್ಷದಲ್ಲಿದ್ದರು. ಅವರಲ್ಲಿ ಇನ್ನೆರಡು ದಿನಗಳಲ್ಲಿ ಇಬ್ಬರು - ಮೂರು ನಾಯಕರು ಪಕ್ಷ ತೊರೆದು ಬೇರೆ ಕಡೆ ಹೊರಬರಬಹುದು" ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷ ಬಿಟ್ಟು ಹೋಗುವವರ ವಿಷಯಗಳಿಗೆ ಆದ್ಯತೆ ನೀಡದೆ, 224 ಸ್ಥಾನಗಳಲ್ಲಿ 123 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವ ಗುರಿಯೊಂದಿಗೆ ಪಕ್ಷವನ್ನು ಬಲಪಡಿಸುವತ್ತ ಗಮನಹರಿಸುತ್ತಿದ್ದೇನೆ. ಚುನಾವಣಾ ದಿನಾಂಕಗಳನ್ನು ಘೋಷಿಸಲು ಸಮಯ ಹತ್ತಿರದಲ್ಲಿದೆ. ಮಾರ್ಚ್ 20 ರಿಂದ 30 ರ ನಡುವೆ ಯಾವುದೇ ದಿನದಂದು ಚುನಾವಣಾ ಆಯುಕ್ತರು ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ಇದೇ ವೇಳೆ ಇಂದು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಲಿಂಗೇಗೌಡ, "ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುವುದಾಗಿ ಘೋಷಿಸಿದ್ದಾರೆ. ನನ್ನ ಕ್ಷೇತ್ರದ ನಾಯಕರು ಮತ್ತು ಹಿತೈಷಿಗಳ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದ್ದೆ, ಅದರಂತೆ ನಿನ್ನೆ ರಾತ್ರಿ ಸುಮಾರು ಮೂರು ಸಾವಿರ ಜನರನ್ನು ಭೇಟಿ ಮಾಡಿ ಕ್ಷೇತ್ರ ಮತ್ತು ಜೆಡಿಎಸ್‌ನಲ್ಲಿನ ಬೆಳವಣಿಗೆಗಳನ್ನು ನೋಡಿ ನಾನು ಕಾಂಗ್ರೆಸ್ ಸೇರುವುದು ಒಳ್ಳೆಯದು ಎಂದು ತಿಳಿಸಿದ್ದಾರೆ ಹಾಗಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ" ಎಂದಿದ್ದಾರೆ.

ಅವಧಿ ಮುಗಿಯುವವರೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿರುವ ಶಿವಲೀಂಗೇಗೌಡ, "ಈ ಅವಧಿ ಮುಗಿದ ನಂತರ ನನ್ನ ಮುಂದಿನ ನಡೆ ಕಾಂಗ್ರೆಸ್ ಕಡೆ, ನಮ್ಮ ನಾಯಕರ ಅಭಿಪ್ರಾಯವೂ ಇದೇ ಆಗಿದೆ. ಕಾಂಗ್ರೆಸ್ ನಾಯಕರ ಜತೆ ಚರ್ಚಿಸಿದ ನಂತರ ಸೇರ್ಪಡೆ ದಿನಾಂಕ ಇತರ ವಿಷಯಗಳ ಬಗ್ಗೆ ನಿರ್ಧರಿಸುತ್ತೇನೆ" ಎಂದಿದ್ದಾರೆ. ಮಾರ್ಚ್ 5 ರಂದು ಅರಸೀಕೆರೆ ತಾಲೂಕಿನ ಗುತ್ತಿನಗೆರೆ ಗ್ರಾಮದಲ್ಲಿ ಆಯೋಜನೆಗೊಂಡಿರುವ ಸಂಗೊಳ್ಳಿರಾಯಣ್ಣ ಪ್ರತಿಮೆ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಇದೇ ಕಾರ್ಯಕ್ರಮದಲ್ಲಿ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದೆ.
ಅರಕಲಗೂಡಿನ ಮತ್ತೋರ್ವ ಅತೃಪ್ತ ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಖಂಡಿತವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಆದರೆ ಅವರು ಯಾವ ಪಕ್ಷಕ್ಕೆ ಸೇರಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಇಂತಹ ಸಂಧರ್ಭದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆ ಜೆಡಿಎಸ್ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಹೊರಹಾಕಿದೆ.












Click it and Unblock the Notifications