ದಕ್ಷಿಣ ಕನ್ನಡದಲ್ಲಿ ನಿಲ್ಲದ ನೈತಿಕ ಪೊಲೀಸ್‌ಗಿರಿ, ಸರ್ಕಾರದ್ದು ಬರಿ ಭರವಸೆಯಷ್ಟೆಯೇ?
ಮಂಗಳೂರು, ನವೆಂಬರ್ 28: ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿಯ ಘಟನೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ನೈತಿಕ ಪೊಲೀಸ್‌ಗಿರಿಯನ್ನು ಹತ್ತಿಕ್ಕಲಾಗುವುದು ಎಂದು ಹೇಳಿದ್ದರೂ ಮತ್ತೆ ಮತ್ತೆ ಘಟನೆಗಳು ನಡೆದು ಸಾಮಾಜಿಕ ಸಾಮರಸ್ಯ ಹಾಳಾಗುತ್ತಲೇ ಇದೆ. ಆದರೆ ಸರ್ಕಾರ ಭರವಸೆ ಬರೀ ಭರವಸೆಯಾಗಿಯೇ ಉಳಿದಿದೆ.
ಮಂಗಳೂರಿನಲ್ಲಿ ಅನ್ಯ ಸಮುದಾಯದ ವ್ಯಕ್ತಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದ ಇಬ್ಬರನ್ನು ನೈತಿಕ ಪೊಲೀಸ್‌ಗಿರಿ ಪ್ರಕರಣದಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಮಂಗಳೂರು ನಿವಾಸಿಗಳಾದ ಅಕ್ಷಯ್ ರಾವ್ ಮತ್ತು ಶಿಬಿನ್ ಪಡಿಕ್ಕಲ್ ಎಂದು ಗುರುತಿಸಲಾಗಿದೆ. ಘಟನೆ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮತ್ತಷ್ಟು ತನಿಖೆ ನಡೆಯುತ್ತಿದೆ.

ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮತ್ತು ಪುರುಷ ಘಟನೆಯ ಸಮಯದಲ್ಲಿ ಒಟ್ಟಿಗೆ ಮನೆಗೆ ಹೋಗುತ್ತಿದ್ದರು. ಆಗ ಆರೋಪಿಗಳಾದ ಅಕ್ಷಯ್ ರಾವ್ ಮತ್ತು ಶಿಬಿನ್ ಪಡಿಕ್ಕಲ್ ಮಹಿಳೆ ಹಾಗೂ ಪುರುಷನನ್ನು ತಡೆದು ವಿಚಾರಣೆಗೊಳಪಡಿಸಿದ್ದರು. ಆರೋಪಿಗಳು ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಹೋಗಿ ಮಾರ್ಗನ್ಸ್ ಗೇಟ್ ರಸ್ತೆಯ ಬಳಿ ತಡೆದು ಮಹಿಳೆಯನ್ನು ಬೇರೆ ಸಮುದಾಯದ ವ್ಯಕ್ತಿಯೊಂದಿಗೆ ಇರುವುದನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಘಟನೆಯ ನಂತರ ಸಮುದಾಯದ ಪುರುಷರು ಸ್ಥಳದಲ್ಲಿ ಜಮಾಯಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಹಿಂದೂ ಯುವತಿಯನ್ನು ತನ್ನ ವಾಹನದಲ್ಲಿ ಕರೆದೊಯ್ದ ಆರೋಪದ ಮೇಲೆ ಬಲಪಂಥೀಯ ಕಾರ್ಯಕರ್ತರು ಮುಸ್ಲಿಂ ಆಟೋ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿತ್ತು.

ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿಯನ್ನು ತಡೆಗಟ್ಟಲು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರಸ್ತಾಪಿಸಿದ್ದ ಕೋಮುವಾದಿ ವಿರೋಧಿ ಘಟಕ ಕಾರ್ಯಾರಂಭ ಮಾಡಿದೆ ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಗುರುವಾರ ತಿಳಿಸಿದ್ದರು. ಜೂನ್ 13 ರಂದು ಆಯುಕ್ತರಿಂದ ಅಧಿಕೃತ ಆದೇಶ ಹೊರಡಿಸಿದಾಗ ವಿಶೇಷ ವಿಭಾಗವು ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಹೀಗೆ ಕಾನೂನಿನ ಅಧಿಕಾರ ಇದ್ದರೂ ಅಧಿಕಾರಿಗಳು ಮಾತ್ರ ಸುಮ್ಮನಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ತರಲು ಸಂಘಪರಿವಾರ ಸೇರಿದಂತೆ ಹಲವು ಕೋಮುವಾದಿ ಶಕ್ತಿಗಳು ಉದ್ದೇಶಪೂರ್ವಕವಾಗಿ ಷಡ್ಯಂತ್ರ ನಡೆಸುತ್ತಿವೆ. ಇಂತಹ ಕೃತ್ಯಗಳಲ್ಲಿ ತೊಡಗಿರುವವರನ್ನು ಗಡಿಪಾರು ಮಾಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದರು.
ಕರಾವಳಿ ಭಾಗದಲ್ಲಿ ನಡೆಯುವ ನೈತಿಕ ಪೊಲೀಸ್‌ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದರು. ಕೋಮುಸೂಕ್ಷ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಪದೇ ಪದೇ ಧಕ್ಕೆಯಾಗುತ್ತಲೇ ಇದೆ. ಆದರೆ ಪೊಲೀಸ್ ಇಲಾಖೆ ಕ್ರಮ ಜರುಗಿಸುವಲ್ಲಿ ವಿಫಲವಾದಂತಿದೆ.












Click it and Unblock the Notifications