ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಸಭೆ ಮಾಹಿತಿ ಜನರ ಕೈಗೆ, ಸುತ್ತೋಲೆ
ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳು ಶಾಸನಬದ್ಧ ಸಭೆಗಳನ್ನು ನಿಯಮಿತ ಕಾಲದಲ್ಲಿ ನಡೆಸಿ ನಡವಳಿಗಳನ್ನು ಜನರಿಗೆ ತಲುಪುವಂತೆ ಪ್ರಕಟಿಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.
ಬೆಂಗಳೂರು, ಮಾರ್ಚ್ 07; ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ. ಇದರ ಅನ್ವಯ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳು ಶಾಸನಬದ್ಧ ಸಭೆಗಳನ್ನು ನಿಯಮಿತ ಕಾಲದಲ್ಲಿ ನಡೆಸಿ ನಡವಳಿಗಳನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಬೇಕು ಎಂದು ಸೂಚನೆ ನೀಡಲಾಗಿದೆ. ಸರ್ಕಾರದ ಕಾರ್ಯದರ್ಶಿ ವಿ. ರಶ್ಮಿ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ.
ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳು ಶಾಸನಬದ್ಧ ಸಭೆಗಳನ್ನು ನಿಯಮಿತ ಕಾಲದಲ್ಲಿ ನಡೆಸಿ ನಡವಳಿಗಳನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸುವ ಬಗ್ಗೆ ಸುತ್ತೋಲೆಯಲ್ಲಿ ಮಾಹಿತಿ ನೀಡಲಾಗಿದೆ. ಯಾವ ರೀತಿ ಮಾಹಿತಿ ನೀಡಬೇಕು ಎಂದು ಸಹ ಸುತ್ತೋಲೆಯಲ್ಲಿ ವಿವರಗಳನ್ನು ನೀಡಲಾಗಿದೆ. ಅಲ್ಲದೇ ಸ್ಥಾಯಿ ಸಮಿತಿಗಳನ್ನು ರಚನೆ ಮಾಡದ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿಯಲ್ಲಿ ಕೂಡಲೇ ಸ್ಥಾಯಿ ಸಮಿತಿಯನ್ನು ರಚನೆ ಮಾಡಬೇಕು ಎಂದು ತಿಳಿಸಲಾಗಿದೆ.

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 52ರಲ್ಲಿ ಗ್ರಾಮ ಪಂಚಾಯಿತಿಯ ಕಾರ್ಯಕಲಾಪವನ್ನು ನಡೆಸುವುದಕ್ಕಾಗಿ, ಗ್ರಾಮ ಪಂಚಾಯಿತಿಯ ಕಛೇರಿಯಲ್ಲಿ ಕನಿಷ್ಟ ಪಕ್ಷ 1 ತಿಂಗಳಿಗೊಮ್ಮೆ ಮತ್ತು ಅಧ್ಯಕ್ಷನು ನಿರ್ಧರಿಸಬಹುದಾದಂಥ ಕಾಲದಲ್ಲಿ ಸಭೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಸದರಿ ಅಧಿನಿಯಮದ ಪ್ರಕರಣ 61ರಲ್ಲಿ ಸ್ಥಾಯಿ ಸಮಿತಿ ಸಭೆ ಮತ್ತು ಪ್ರಕರಣ 61-ಎ ರಲ್ಲಿ ಇತರೆ ಸಮಿತಿ ಸಭೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಸಕಾಲದಲ್ಲಿ ಈ ಸಭೆಗಳು ಆಗುತ್ತಿಲ್ಲ. ಅಲ್ಲದೆ ಕೆಲವು ಕಡೆ ಸಭೆಗಳು ನಡೆದರೂ ನಡವಳಿಗಳು ಕೂಡಲೇ ತಯಾರು ಆಗುತ್ತಿಲ್ಲ ಎಂದು ಸುತ್ತೋಲೆ ಹೇಳಿದೆ.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹಂತದಲ್ಲಿ ಮತ್ತು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಹಂತದಲ್ಲಿ ಪ್ರತಿ ತಿಂಗಳು ಗ್ರಾಮ ಪಂಚಾಯಿತಿಗಳು ಶಾಸನಬದ್ಧ ಸಭೆಗಳು ನಡೆದಿವೆಯೇ ಅಥವಾ ಇಲ್ಲವೆ ಎಂದು ಪರಿಶೀಲಿಸಬೇಕು. ಸಕಾಲದಲ್ಲಿ ಸಭೆಗಳು ನಡೆಯದೇ ಇಲ್ಲದಿದ್ದಲ್ಲಿ ಪರಿವೀಕ್ಷಣೆ, ಮೇಲ್ವಿಚಾರಣೆ ಮತ್ತು ಉಸ್ತುವಾರಿ ಕೆಲಸದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ವಿಫಲರಾಗಿರುವುದು ಕಂಡು ಬರುತ್ತದೆ. ಎಲ್ಲಾ ಸಭೆಗಳ ನಡವಳಿಗಳನ್ನು ಕೂಡಲೇ ಪಂಚತಂತ್ರ ತಂತ್ರಾಂಶದಲ್ಲಿ ಕಡ್ಡಾಯವಾಗಿ ಸ್ಕ್ಯಾನ್ ಮಾಡಿ ಲೋಡ್ ಮಾಡಲು ಕ್ರಮ ವಹಿಸುವಂತೆ ತಿಳಿಸಲಾಗಿದೆ. ಕೂಡಲೇ ನಡವಳಿಯನ್ನು ತಯಾರಿಸಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ -55 ರಂತೆ ಗ್ರಾಮ ಪಂಚಾಯಿತಿಯ ಸೂಚನಾ ಫಲಕದಲ್ಲಿ ಪ್ರಕಟಿಸತಕ್ಕದ್ದು ಎಂದು ಸೂಚಿಸಲಾಗಿದೆ.

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 141 ರಲ್ಲಿ ತಾಲ್ಲೂಕು ಪಂಚಾಯಿತಿಯ ಕಾರ್ಯಕಲಾಪದ ನಿರ್ವಹಣೆಗಾಗಿ ಸಭೆಯನ್ನು ಕನಿಷ್ಟ ಪಕ್ಷ ಎರಡು ತಿಂಗಳಲ್ಲಿ ಒಂದು ಬಾರಿ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಸದರಿ ಅಧಿನಿಯಮದ ಪ್ರಕರಣ 149 ರಲ್ಲಿ ಸ್ಥಾಯಿ ಸಮಿತಿ ಸಭೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಸಕಾಲದಲ್ಲಿ ಈ ಸಭೆಗಳು ಆಗುತ್ತಿಲ್ಲ. ಅಲ್ಲದೆ ಕೆಲವು ಕಡೆ ಸಭೆಗಳು ನಡೆದರೂ ನಡವಳಿಗಳು ಕೂಡಲೇ ತಯಾರು ಆಗುತ್ತಿಲ್ಲ. ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹಂತದಲ್ಲಿ ಪ್ರತಿ ತಿಂಗಳು ಅವರ ಮಾಸಿಕ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿಗಳ ಶಾಸನಬದ್ಧ ಸಭೆಗಳು ನಡೆದಿವೆಯೇ ಅಥವಾ ಇಲ್ಲವೆ ಎಂದು ಪರಿಶೀಲಿಸಬೇಕು ಎಂದು ತಿಳಿಸಲಾಗಿದೆ.
ಸಕಾಲದಲ್ಲಿ ಸಭೆಗಳು ನಡೆಯದೆ ಇಲ್ಲದಿದ್ದಲ್ಲಿ ಪರಿವೀಕ್ಷಣೆ, ಮೇಲ್ವಿಚಾರಣೆ ಮತ್ತು ಉಸ್ತುವಾರಿ ಕೆಲಸದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಫಲರಾಗಿರುವುದು ಕಂಡು ಬರುತ್ತದೆ. ಎಲ್ಲಾ ಸಭೆಗಳ ನಡವಳಿಗಳನ್ನು ಕೂಡಲೇ ಕಡ್ಡಾಯವಾಗಿ ಸ್ಕ್ಯಾನ್ ಮಾಡಿ ಪಂಚತಂತ್ರ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಲು ಕ್ರಮ ವಹಿಸುವಂತೆ ತಿಳಿಸಲಾಗಿದೆ. ಇದಲ್ಲದೆ ಕೂಡಲೇ ನಡವಳಿಯನ್ನು ತಯಾರಿಸಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 141 ರಂತೆ ತಾಲ್ಲೂಕು ಪಂಚಾಯಿತಿಯ ಸೂಚನಾ ಫಲಕದಲ್ಲಿ ಪ್ರಕಟಿಸತಕ್ಕದ್ದು. ಕೆಲವು ತಾಲ್ಲೂಕು ಪಂಚಾಯಿತಿಗಳು ಇದುವರೆವಿಗೂ ಸ್ಥಾಯಿ ಸಮಿತಿಗಳನ್ನು ರಚಿಸದಿರುವುದು ಕಂಡು ಬಂದಿರುತ್ತದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡಲೇ ಸ್ಥಾಯಿ ಸಮಿತಿಗಳನ್ನು ರಚಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 180 ರಲ್ಲಿ ಜಿಲ್ಲಾ ಪಂಚಾಯಿತಿಯ ಕಾರ್ಯಕಲಾಪದ ನಿರ್ವಹಣೆಗಾಗಿ ಸಭೆಯನ್ನು ಕನಿಷ್ಟ ಪಕ್ಷ ಎರಡು ತಿಂಗಳಲ್ಲಿ ಒಂದು ಬಾರಿ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಸದರಿ ಅಧಿನಿಯಮದ ಪ್ರಕರಣ 186 ರಲ್ಲಿ ಸ್ಥಾಯಿ ಸಮಿತಿ ಸಭೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಸಕಾಲದಲ್ಲಿ ಈ ಸಭೆಗಳು ಆಗುತ್ತಿಲ್ಲ. ಕೆಲವು ಕಡೆ ಸಭೆಗಳು ನಡೆದರೂ ನಡವಳಿಗಳು ಕೂಡಲೇ ತಯಾರು ಆಗುತ್ತಿಲ್ಲ. ಸಭೆಗಳ ನಡವಳಿಗಳನ್ನು ಕೂಡಲೇ ಜಿಲ್ಲಾ ಪಂಚಾಯಿತಿ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಲು ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ. ನಡವಳಿಯನ್ನು ತಯಾರಿಸಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 180 ರಂತೆ ಜಿಲ್ಲಾ ಪಂಚಾಯಿತಿಯ ಸೂಚನಾ ಫಲಕದಲ್ಲಿ ಪ್ರಕಟಿಸತಕ್ಕದ್ದು. ಸ್ಥಾಯಿ ಸಮಿತಿಗಳನ್ನು ರಚಿಸದ ಜಿಲ್ಲಾ ಪಂಚಾಯಿತಿಗಳಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡಲೇ ಸ್ಥಾಯಿ ಸಮಿತಿಗಳನ್ನು ರಚಿಸತಕ್ಕದ್ದು ಎಂದು ಸೂಚಿಸಲಾಗಿದೆ.
ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯತ್‌ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪಂಚತಂತ್ರದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ಪಾಕ್ಷಿಕವಾಗಿ ನಡೆಸುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಪಂಚತಂತ್ರ ತಂತ್ರಾಂಶದ ಮಾಹಿತಿಯನ್ನಾಧರಿಸಿಯೇ ಎಲ್ಲಾ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ತಿಳಿಸಲಾಗಿದೆ. ಎಲ್ಲಾ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ಮಾಸಿಕ ಜರುಗಿಸುವ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಿರುವ ಮಾಹಿತಿಯ ಆಧಾರದ ಮೇಲೆ ಪರಿಶೀಲನೆ ನಡೆಸುವಂತೆ ಸುತ್ತೋಲೆಯಲ್ಲಿ ಸೂಚನೆ ಕೊಡಲಾಗಿದೆ.












Click it and Unblock the Notifications