ಮುಂಗಾರು ಮಳೆ; ಪ್ರವಾಹ ನಿರ್ವಹಣೆಗೆ ಜಿಲ್ಲಾಡಳಿತಗಳಿಗೆ ಖಡಕ್ ಸೂಚನೆ
ಬೆಂಗಳೂರು, ಜೂನ್ 16: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೈಋತ್ಯ ಮುಂಗಾರು ಮಳೆ 2024 ಆರಂಭವಾಗಿದೆ. ಅಬ್ಬರದಿಂದ ಮುಂಗಾರು ಮಳೆ ಆರಂಭಗೊಳ್ಳದಿದ್ದರೂ ಸಹ ಮುಂದಿನ ದಿನಗಳಲ್ಲಿ ಮಳೆ ಜೋರಾಗಿ ಸುರಿಯುವ ಮುನ್ಸೂಚನೆ ಸಿಕ್ಕಿದೆ.
ಮಳೆ, ಪ್ರವಾಹ, ಭೂ ಕುಸಿತ ಮುಂತಾದವುಗಳು ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಆದ್ದರಿಂದ ಸಂಭವನೀಯ ಪ್ರವಾಹ ನಿರ್ವಹಣೆಗೆ ಎಲ್ಲ ಜಿಲ್ಲಾಡಳಿತಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ನದಿಯ ಒಳಹರಿವು ಹಾಗೂ ಮಳೆಯ ಪ್ರಮಾಣದ ಮೇಲೆ ನಿರಂತರ ನಿಗಾ ವಹಿಸುವ ಮೂಲಕ ಜನ ಹಾಗೂ ಜಾನುವಾರುಗಳ ಜೀವಹಾನಿ ತಡೆಯಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಖಡಕ್ ಸೂಚನೆ ನೀಡಿದರು.

ಸಂಭವನೀಯ ಪ್ರವಾಹ ನಿರ್ವಹಣೆ, ನೈರುತ್ಯ ಮುಂಗಾರು ಸಿದ್ಧತೆ ಕುರಿತು ಅವರು ಬೆಳಗಾವಿ ವಿಭಾಗದ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನಾಹುತ ಸಂಭವಿಸಿದಾಗ ರಕ್ಷಣಾ ತಂಡಗಳು ಯಾವ ರೀತಿ ಕಾರ್ಯಾಚರಣೆ ಕೈಗೊಳ್ಳಬೇಕು? ಎಂಬುದರ ಕುರಿತು ಕಂದಾಯ, ಪೊಲೀಸ್, ಅಗ್ನಿಶಾಮಕ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಮುಂಚಿತವಾಗಿಯೇ ಸಮನ್ವಯತೆ ಸಾಧಿಸಬೇಕು ಎಂದು ಹೇಳಿದರು.
ಜಿಲ್ಲಾಡಳಿತಗಳಿಗೆ ನಿರ್ದೇಶನಗಳು: "ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೇ ಪ್ರವಾಹಬಾಧಿತಗೊಳ್ಳಲಿರುವ ತಾಲ್ಲೂಕುಗಳ ಮಟ್ಟದಲ್ಲೂ ಇಂತಹ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಪ್ರವಾಹ ಮಾತ್ರವಲ್ಲದೇ ಮನೆಕುಸಿತ ಮತ್ತಿತರ ತುರ್ತು ಸಂದರ್ಭಗಳಲ್ಲಿ ತುರ್ತು ಕ್ರಮಕ್ಕೆ ರಕ್ಷಣಾ ವ್ಯವಸ್ಥೆ ಮತ್ತು ತಂಡಗಳು ಸಜ್ಜಾಗಿರಬೇಕು" ಎಂದು ಕೃಷ್ಣ ಭೈರೇಗೌಡ ತಿಳಿಸಿದರು.
"ಪ್ರವಾಹ ನಿರ್ವಹಣೆ ಕುರಿತು ಜಿಲ್ಲಾ, ತಾಲ್ಲೂಕು ಹಾಗೂ ಪ್ರವಾಹದಿಂದ ಬಾಧಿತಗೊಳ್ಳಲಿರುವ ಗ್ರಾಮಗಳ ಮಟ್ಟದಲ್ಲಿ ಅಣುಕು ಕಾರ್ಯಾಚರಣೆ ನಡೆಸಬೇಕು. ಆಗಾಗ ಸಭೆ ನಡೆಸುವ ಮೂಲಕ ತಂಡಗಳನ್ನು ಸದಾ ಜಾಗೃತವಾಗಿಡಬೇಕು. ಜಿಲ್ಲಾ ಹಂತದಲ್ಲಿರುವ ಸಮಿತಿಗಳನ್ನು ಪ್ರಬಾಹಬಾಧಿತಗೊಳ್ಳಲಿರುವ ತಾಲ್ಲೂಕು ಮತ್ತು ಪಂಚಾಯಿತಿ ಮಟ್ಟಕ್ಕೂ ವಿಸ್ತರಿಸಬೇಕು" ಎಂದು ಸಚಿವರು ಸೂಚನೆ ನೀಡಿದರು.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, "ಕೊಯ್ನಾದಿಂದ ಬಿಡುಗಡೆ ಮಾಡಲಾದ 3.44 ಲಕ್ಷ ಕ್ಯೂಸೆಕ್ ನೀರು ಹಾಗೂ ಮಳೆಯಿಂದ ಹಿಂದೆ ಪ್ರವಾಹ ಉಂಟಾಗಿತ್ತು. ಆದ್ದರಿಂದ ನೀರು ಬಿಡುಗಡೆ ಕುರಿತು ಮಹಾರಾಷ್ಟ್ತದ ಜತೆ ಸಮನ್ವಯ ಸಾಧಿಸಿಕೊಂಡು ಉಭಯ ರಾಜ್ಯಗಳ ಉನ್ನತಮಟ್ಟದ ಸಮಿತಿ ರಚಿಸಿಕೊಂಡು ಜಲಾಶಯಗಳ ನೀರಿನ ಮಟ್ಟ ನಿರ್ವಹಣೆ ಮಾಡುವುದರಿಂದ ಪ್ರವಾಹ ಪರಿಸ್ಥಿತಿ ತಡೆಗಟ್ಟಬಹುದು" ಎಂದು ತಿಳಿಸಿದರು.
ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, "ಧಾರವಾಡ ಜಿಲ್ಲೆಯಲ್ಲಿ ಬೆಣ್ಣಿಹಳ್ಳ ಹಾಗೂ ತುಪ್ಪರಿ ಹಳ್ಳದ ವ್ಯಾಪ್ತಿಯಲ್ಲಿ ಮಾತ್ರ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಪ್ರವಾಹದಿಂದ ಬಾಧಿತಗೊಳ್ಳಲಿರುವ ಪ್ರದೇಶ ಹಾಗೂ ಜನಸಂಖ್ಯೆಯನ್ನು ಈಗಾಗಲೇ ಸಮೀಕ್ಷೆ ಮೂಲಕ ಗುರುತಿಸಲಾಗಿದೆ. ಗರಿಷ್ಠ ಪ್ರವಾಹ ಉಂಟಾದರೆ 85 ಸಾವಿರ ಹೆಕ್ಟೇರ್ ಕೃಷಿ ಜಮೀನಿನಲ್ಲಿ ನೀರು ನಿಲ್ಲಬಹುದು. ಈ ಎಲ್ಲ ಸಾಧ್ಯತೆಗಳನ್ನು ಗಮನಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ವಿವರಣೆ ನೀಡಿದರು.
"ಧಾರವಾಡ ಜಿಲ್ಲೆಯ ಎರಡು ಪ್ರಮುಖ ಹಳ್ಳಗಳಾದ ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳ ಹರಿಯುವ ಮಾರ್ಗದ ಗ್ರಾಮಗಳಲ್ಲಿ ಪ್ರವಾಹದ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಮತ್ತು ಪ್ರವಾಹ ಉಂಟಾದಲ್ಲಿ ಜನ, ಜಾನುವಾರು ರಕ್ಷಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದರು.
"ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಳವಾಗುವ ಸಾಧ್ಯತೆ ಇದೆ. ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳ ಪ್ರವಾಹ ಉಂಟುಮಾಡಬಹುದು. ತಹಶೀಲ್ದಾರ್ ಗ್ರಾಮಗಳಿಗೆ ಭೇಟಿ ನೀಡಿ, ಪ್ರವಾಹದಿಂದ ಹಾನಿ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ" ಎಂದು ಹೇಳಿದರು.
ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ, ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹಾಗೂ ಹಾವೇರಿ ಜಿಲ್ಲಾಧಿಕಾರಿಗಳು ಸಂಭವನೀಯ ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆಯಲ್ಲಿ ಸಚಿವರಿಗೆ ವಿವರಿಸಿದರು.












Click it and Unblock the Notifications