ಋಣಭಾರ ಕಾಯ್ದೆ ಜಾರಿಗೆ ಫೈನಾನ್ಶಿಯರ್ಸ್ ಸಂಸ್ಥೆ ತೀವ್ರ ವಿರೋಧ
ಬೆಂಗಳೂರು, ಸೆಪ್ಟೆಂಬರ್ 1: ಬಡವರಿಗೆ ಲೇವಾದೇವಿದಾರರಿಂದ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಜಾರಿಗೆ ತರಲು ಹೊರಟಿರುವ ಋಣಭಾರ ಕಾಯ್ದೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಅಖಿಲ ಕರ್ನಾಟಕ ಫೈನಾನ್ಶಿಯರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.
ಅಧಿಕೃತ ಲೇವಾದೇವಿದಾರರು 25 ಸಾವಿರದಷ್ಟಿದ್ದಾರೆ ಅವರೆಲ್ಲರೂ ನ್ಯಾಯಯುತವಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಬ್ಯಾಂಕ್ ಗಳಿಂದ ಸಾಲ ಮಾಡಿ ಬಡವರಿಗೆ ನೀಡಿ ಅಲ್ಪ ಪ್ರಮಾಣದ ಲಾಭ ಪಡೆಯುತ್ತಿದ್ದಾರೆ.
ಬ್ಯಾಂಕ್‌ಗಳಲ್ಲಿ ಸಾಲ ಮನ್ನಾ ಮಾಡಿದಲ್ಲಿ ಸರ್ಕಾರವೇ ಹಣ ತುಂಬಲಿದೆ. ಆದರೆ ಅಸೋಸಿಯೇಷನ್ ಅಡಿ 25ಸಾವಿರಕ್ಕೂ ಹೆಚ್ಚು ಜನ ವ್ಯವಹಾರ ನಡೆಸುತ್ತಿದ್ದು, 25ರಿಂದ 30 ಕೋಟಿ ರೂ.ಗಳ ವ್ಯವಹಾರ ಮಾಡುತ್ತಿದ್ದಾರೆ. ಈ ಮೊತ್ತವನ್ನು ಮನ್ನಾ ಮಾಡಿ ಸರ್ಕಾರ ತುಂಬಲಿದೆಯೇ ಎಂದು ಅಸೀಸಿಯೇಷನ್ ಅಧ್ಯಕ್ಷ ಬಿ.ಟಿ. ರಾಜಶೇಖರ್ ಪ್ರಶ್ನಿಸಿದರು.

ಮೀಟರ್ ಬಡ್ಡಿ ವ್ಯವಹಾರ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾದರೆ ನಮ್ಮ ಸಂಪೂರ್ಣ ಬೆಂಬಲವಿದೆ, ಆದರೆ ನ್ಯಾಯಯುತ ವ್ಯವಹಾರಕ್ಕೆ ತೊಂದರೆ ಮಾಡುತ್ತಿರುವುದು ಸರಿಯಲ್ಲ, ರಾಷ್ಟ್ರಪತಿಗಳು ಈ ಕುರಿತು ಯಾವ ಕ್ರಮಕ್ಕೆ ಮುಂದಾಗುತ್ತಾರೆ ಎಂದು ಕಾದು ನೋಡಬೇಕಿದೆ, ಮುಂದಿನ ಕಾನೂನು ಹೋರಾಟಕ್ಕೆ ಸಿದ್ಧಗೊಳ್ಳುತ್ತಿದ್ದೇನೆ ಎಂದು ತಿಳಿಸಿದರು.












Click it and Unblock the Notifications