ಕುಮಾರಸ್ವಾಮಿ ಸರ್ಕಾರಕ್ಕೆ ಸೋಮವಾರ ಕಡೆ ದಿನ : ಯಡಿಯೂರಪ್ಪ
ಬೆಂಗಳೂರು, ಜುಲೈ 19 : "ಕರ್ನಾಟಕ ಸರ್ಕಾರಕ್ಕೆ ಸೋಮವಾರ ಕಡೆ ದಿನ. ಬಹುಮತ ಕಳೆದುಕೊಂಡಿರುವ ಸರ್ಕಾರ ಅಂತು ಪತನವಾಗಲಿದೆ" ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶುಕ್ರವಾರ ಸ್ಪೀಕರ್ ರಮೇಶ್ ಕುಮಾರ್ ವಿಶ್ವಾಸಮತಯಾಚನೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ ಬಳಿಕ ಮಾತನಾಡಿದ ಯಡಿಯೂರಪ್ಪ, "ಸಿಎಂ ಕುಮಾರಸ್ವಾಮಿ ಸರ್ಕಾರಕ್ಕೆ ಬಹುಮತ ಇಲ್ಲ ಅಂತ ಗೊತ್ತಾದ ಮೇಲೆ ರಾಜ್ಯಪಾಲರು ಮೂರು ಭಾರಿ ಪತ್ರ ಬರೆದು ಬಹುಮತ ಸಾಬೀತು ಮಾಡಲು ಕೇಳಿದ್ದಾರೆ" ಎಂದರು.
"ವಿಧಾನಸಭೆಯ ಸ್ಪೀಕರ್ ವಿನಾಕಾರಣ ಸಮಯ ವ್ಯರ್ಥ ಮಾಡಿ ಕಾಲಹರಣ ಮಾಡಿದ್ದಾರೆ.
ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಮಾಡಿದ್ದೇವೆ. ಸೋಮವಾರ ಈ ಬಗ್ಗೆ ಮಂಗಳ ಹಾಡುವುದಾಗಿ ಹೇಳಿದ್ದಾರೆ" ಎಂದು ತಿಳಿಸಿದರು.

"ಸರ್ಕಾರಕ್ಕೆ ಬಹುಮತ ಇಲ್ಲದೇ ಇದ್ದರೂ ಬೇರೆಯವರಿಗೆ ಬಹುಮತ ಸಾಬೀತು ಪಡಿಸಲು ಬಿಡುತ್ತಿಲ್ಲ.
ದೇಶಕ್ಕೆ ಸುದ್ದಿ ತಿಳಿಯಲಿ ಅಂತ ಅಹೋರಾತ್ರಿ ಧರಣಿ ನಡೆಸಿದೆವು. ಸೋಮವಾರ ಸರ್ಕಾರ ಪತನವಾಗುವುದು ಖಚಿತ" ಎಂದು ಹೇಳಿದರು.
ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ ಆಗಿದ್ದರಿಂದ ಬಿಜೆಪಿ ಶಾಸಕರು ವಿಧಾನಸೌಧದಿಂದ ರಮಾಡಾ ಹೋಟೆಲ್‌ಗೆ ವಾಪಸ್ ತೆರಳಿದರು. ಸೋಮವಾರದ ತನಕ ರೆಸಾರ್ಟ್‌ನಲ್ಲಿಯೇ ಶಾಸಕರು ವಾಸ್ತವ್ಯ ಹೂಡಲಿದ್ದಾರೆ.












Click it and Unblock the Notifications