ಸರ್ಕಾರ ಬೀಳಿಸಲು ಪ್ಲ್ಯಾನ್ ಆಗಿದೆ, ಏನೇ ಮನಸ್ತಾಪ ಇದ್ರೂ ಒಗ್ಗಟ್ಟಾಗಿರಿ: ಖರ್ಗೆ ಹೀಗಂದಿದ್ದೇಕೆ?
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಕಿತ್ತಾಟ ಸೇರಿದಂತೆ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಲೇ ಇವೆ. ಸಿಎಂ ಬದಲಾವಣೆ ಚರ್ಚೆಯ ನಡುವೆ ಸರ್ಕಾರವೇ ಬದಲಾಗುವ ವಿಚಾರ ಕೂಡ ಮುನ್ನೆಲೆಗೆ ಬಂದಿದೆ. ಈ ಮಾತನ್ನು ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರೇ ಹೇಳಿರುವುದು ಅಚ್ಚರಿ ಮೂಡಿಸಿದೆ. ಹೌದು, ಕಾರ್ಯಕ್ರಮದ ವೇದಿಕೆಯಲ್ಲಿ ಈ ಬಗ್ಗೆ ಮಾತನಾಡಿರುವ ಮಲ್ಲಿಕಾರ್ಜುನ್ ಖರ್ಗೆ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳುವ ಬಗ್ಗೆ ಮಾತನಾಡಿದರು.
ಇಂದು ಕಲಬುರಗಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ಮಲ್ಲಿಕಾರ್ಜುನ್ ಖರ್ಗೆ ಅವರು ವೇದಿಕೆಯಲ್ಲೇ ಇದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬುದ್ಧಿಮಾತು ಕೂಡ ಹೇಳಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸ್ಫೋಟಕ ವಿಚಾರಗಳನ್ನು ಹೇಳಿದ್ದು, ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಬೀಳಿಸಲು ಪ್ಲ್ಯಾನ್ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ನಿಮ್ಮ ಸರ್ಕಾರವನ್ನು ಬೀಳಿಸುತ್ತಾರೆ. ನಿಮ್ಮ ನಡುವೆ ಏನೇ ಮನಸ್ತಾಪ ಇದ್ದರೂ ಒಗ್ಗಟ್ಟಾಗಿರಿ, ಹುಷಾರಾಗಿರಿ ಎಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಎಚ್ಚರಿಕೆ ನೀಡಿದರು.

ಕಲಬುರಗಿಯಲ್ಲಿ ಕೌಶಲ್ಯಾಭಿವೃದ್ದಿ ಇಲಾಖೆ ಮತ್ತು ಸ್ಥಳೀಯ ಆಡಳಿತದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿದರು. ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ಸಚಿವನಾಗಿದ್ದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಜರ್ಮನ್ ಸಹಯೋಗದಲ್ಲಿ ತೆರೆಯಲು ಹಿಂದಿನ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರೊಂದಿಗೆ ಚರ್ಚೆ ನಡೆಸಿದ್ದೆ. ಅದಕ್ಕೆ ಅಂದು ಅವರು ಸಹಕಾರ ನೀಡಿದ್ದರಿಂದ ಒಂದು ಕೇಂದ್ರವನ್ನು ಬೆಂಗಳೂರಿನಲ್ಲಿ ಮತ್ತೊಂದು ಕಲಬುರಗಿಯಲ್ಲಿ ಸ್ಥಾಪಿಸಲಾಗಿತ್ತು ಎಂದರು.
ಈ ಕೌಶಲ್ಯಾಭಿವೃದ್ಧಿ ಕೇಂದ್ರವು ಯುವಜನರ ಪಾಲಿಗೆ ಬೆಳಕಾಗಿದೆ. ಇಲ್ಲಿ ತರಬೇತಿ ಪಡೆದು ಸಾವಿರಾರು ಜನರು ಇಂದು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಈ ಬೃಹತ್ ಉದ್ಯೋಗ ಮೇಳದಲ್ಲಿ 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ಸಾವಿರಾರು ಯುವ ಜನತೆಗೆ ಉದ್ಯೋಗ ನೀಡುವ ಯೋಜನೆಯಾಗಿದೆ. ಇದು ಕಲ್ಯಾಣ ಕರ್ನಾಟಕ ಭಾಗದ ಯುವಸಮೂಹಕ್ಕೆ ಇದೊಂದು ಸುವರ್ಣಾವಕಾಶವಾಗಿದೆ ಎಂದು ಶ್ಲಾಘಿಸಿದರು.

ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿಯವರು ಕಲ್ಯಾಣ ಕರ್ನಾಟಕಕ್ಕೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ, ಮಾಡುವುದೂ ಇಲ್ಲ. ಏಕೆಂದರೆ ನಾನು 1 ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕಳೆದ 10 ವರ್ಷಗಳಿಂದ ಮಾಡಲು ಸಾಧ್ಯವಾಗಿಲ್ಲ. ಜಿಲ್ಲೆಯ ಕಡೇಚೂರಿನಲ್ಲಿ ರೈಲು ಬೋಗಿ ಕಾರ್ಖಾನೆ ನಿರ್ಮಾಣಕ್ಕಾಗಿ ಉಚಿತವಾಗಿ ಜಾಗ, ನೀರು, ವಿದ್ಯುತ್ ನೀಡಿದರೂ ಮೋದಿ ಸರ್ಕಾರ ಅನುದಾನ ಬಿಡುಗಡೆ ಮಾಡದೆ ನಿರ್ಲಕ್ಷಿಸುತ್ತಿದೆ ಎಂದು ದೂರಿದರು.
ಕಲಬುರಗಿಯಿಂದ ದೇಶದ ವಿವಿಧ ಭಾಗಗಳಿಗೆ 27ಕ್ಕೂ ಹೆಚ್ಚು ರೈಲುಗಳನ್ನು ತಂದಿದ್ದೇವೆ. ಆದರೆ ಕಲಬುರಗಿಯಿಂದ ಬೆಂಗಳೂರಿಗೆ ಹೆಚ್ಚುವರಿ ರೈಲುಗಳನ್ನು ಬಿಡಿ ಎಂದು ಮನವಿ ಮಾಡಿದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಕಲಬುರಗಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಶ್ರೀನಿವಾಸ ಸರಡಗಿ ಗ್ರಾಮದ ಜನರು ಮುಕ್ತ ಮನಸ್ಸಿನಿಂದ ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟಿದ್ದಾರೆ. ಈಗ ನೋಡಿದರೆ ಇಲ್ಲಿಗೆ ವಿಮಾನಗಳೇ ಬರುತ್ತಿಲ್ಲ. ಕಲಬುರಗಿಗೆ ನಿರಂತರ ವಿಮಾನ ಸೇವೆ ಆರಂಭಿಸಲು ಮೋದಿ ಸರ್ಕಾರ ಯಾವುದೇ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಆದರೆ ಕೇಂದ್ರ ಸರ್ಕಾರಕ್ಕೆ ಆಸಕ್ತಿ ಇರುವುದು ವಿಪಕ್ಷ ನಾಯಕರ ಮೇಲೆ ಐಟಿ, ಇಡಿ ದಾಳಿಗಳನ್ನು ಮಾಡಿಸುವುದರಲ್ಲಿ ಮಾತ್ರ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಕಣ್ಣಿಗೆ ನಮ್ಮ ಕೆಲಸ ಕಾಣ್ತಿಲ್ಲ
ನಮ್ಮ ಪ್ರಣಾಳಿಕೆಯಲ್ಲಿ, ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳೆಲ್ಲ ಜಾರಿ ಆಗುತ್ತಿರುವುದು ಜನರ ಕಣ್ಣಿಗೆ ಕಾಣುತ್ತಿದೆ, ಬಿಜೆಪಿ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ. ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು, ಟ್ರಾಮಾ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ ಇರಲೇಬೇಕು ಎನ್ನುವುದು ನಮ್ಮ ಸರ್ಕಾರದ ಗುರಿ. ಬಡವರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಎನ್ನುವ ಉದ್ದೇಶದಿಂದ ಈ ಘೋಷಣೆ ಮಾಡಿದ್ದು ಒಂದೊಂದೇ ಜಿಲ್ಲೆಯಲ್ಲಿ ಇವೆಲ್ಲವೂ ನೆರವೇರುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಅಭಿವೃದ್ಧಿಗೆ ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಬಿಜೆಪಿಯವರು ಕಲಬುರಗಿಗೆ ಬಂದು ಕಣ್ಣು ತೆರೆದು ನೋಡಿದರೆ ಅಭಿವೃದ್ಧಿಯ ಮಹಾಪೂರವೇ ಕಾಣಿಸುತ್ತೆ. ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಿಯಾಂಕ್ ಖರ್ಗೆ ಅವರು ಮತ್ತು ಶರಣ ಪ್ರಕಾಶ್ ಪಾಟೀಲ್ ಅವರು ಯಾವ ಮಟ್ಟದ ಅಭಿವೃದ್ಧಿ ಮಾಡುತ್ತಿದ್ದಾರೆ ಎನ್ನುವುದನ್ನು ಇಲ್ಲಿಗೆ ಬಂದು ನೋಡಲಿ. ಸರ್ಕಾರ ಘೋಷಿಸಿದ್ದ, ಬಜೆಟ್‌ನಲ್ಲಿ ತಿಳಿಸಿದ್ದ ಎಲ್ಲವೂ ಈ ಜಿಲ್ಲೆಯಲ್ಲಿ ಒಂದೊಂದಾಗಿ ಜಾರಿಯಾಗುತ್ತಿವೆ ಎಂದು ತಿರುಗೇಟು ನೀಡಿದರು.
ಕಲಬುರ್ಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ 216.53 ಕೋಟಿ ರೂಪಾಯಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ 6.20 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಾಕಿಥೆರಪಿ ವಿಕೀರಣ ಚಿಕಿತ್ಸೆ ಘಟಕ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು. ಅಭಿವೃದ್ಧಿಗೆ ನಮ್ಮ ಸರ್ಕಾರದಲ್ಲಿ ಹಣಕ್ಕೆ ಕೊರತೆ ಇಲ್ಲ. ಎಲ್ಲ ವರ್ಗದ ಜನರಿಗೆ, ಅವಕಾಶಗಳಿಂದ ವಂಚಿತರಾದ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ನೀವೇ ಬೇರೆಯವರಿಗೆ ಉದ್ಯೋಗ ಕೊಡಿ: ಡಿಕೆಶಿ
ಜೀವನ ನಡೆಯಲು ಉದ್ಯೋಗ ಬೇಕು ನಿಜ. ಆದರೆ ಉದ್ಯೋಗ ಮಾಡುವುದಕ್ಕಿಂತ ನೀವೇ ಹತ್ತಾರು ಜನರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯುವತ್ತ ಗಮನಹರಿಸಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಉದ್ಯೋಗ ಸಿಗಲಿಲ್ಲ ಎಂದು ಯಾವತ್ತೂ ಎದೆಗುಂದಬಾರದು. ಜೀವನದಲ್ಲಿ ಒಂದಲ್ಲಾ ಒಂದು ಅವಕಾಶ ಸಿಕ್ಕೇ ಸಿಗುತ್ತೆ. ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಳ್ಳಬೇಕು. ಕೌಶಲ್ಯ ಆಧಾರಿತ ಉದ್ಯೋಗ ಮಾಡಿದರೆ ಉತ್ತಮ ಜೀವನ ಸಾಗಿಸಬಹುದು. ಯಾವುದೇ ಕೆಲಸ ಮಾಡಿದರೂ ನಮಗೆ ಆತ್ಮಗೌರವ ಇರಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿವಿಮಾತು ಹೇಳಿದರು.
ನಮ್ಮ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳ ಜತೆಗೆ ಎಲ್ಲ ವರ್ಗದ ರಕ್ಷಣೆ ಮಾಡಲು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗಗಳಿಗೆ ರಕ್ಷಣೆ ಸಿಗುತ್ತೆ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ, ನಮ್ಮ ಸರ್ಕಾರದ ಮೇಲೆ ನಿಮ್ಮ ಆಶೀರ್ವಾದವಿರಲಿ, ಕಲ್ಯಾಣ ಕರ್ನಾಟಕದ ಜನರಿಗೆ ನನ್ನ ಕೋಟಿ ನಮನ ಎಂದು ಕೊಂಡಾಡಿದರು.












Click it and Unblock the Notifications