Karnataka Rain: ರಾಜ್ಯದ ಈ 18 ಜಿಲ್ಲೆಗಳಿಗೆ ಭಾರೀ ಮಳೆ, 05 ದಿನದ ಹವಾಮಾನ ವರದಿ
ಬೆಂಗಳೂರು, ಸೆಪ್ಟಂಬರ್ 28: ಬದಲಾದ ಹವಾಮಾನ ವೈಪರಿತ್ಯದಿಂದಾಗಿ ಕರ್ನಾಟಕದಲ್ಲಿ ಮತ್ತೆ ಮಳೆ ಸಕ್ರಿಯವಾಗಿದೆ. ರಾಜ್ಯದ ಕರಾವಳಿಗೆ ಮತ್ತು ವರುಣಾಘಾತ ಎದುರಾಗಲಿದೆ. ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಲಿದೆ. ಒಟ್ಟಾರೆ ಇಂದಿನಿಂದ ಐದು ದಿನಗಳಲ್ಲಿ 18 ಜಿಲ್ಲೆಗಳಿಗೆ ಭಾರಿ ಮಳೆ ಆಗಲಿದೆ.
ಹಲವು ದಿವಸಗಳ ಹಿಂದೆ ಉತ್ತಮ ಮಳೆ ಕಂಡು ಬಂದಿತ್ತಾದರೂ ಸಹಿತ ಅದು ಬಹಳ ದಿನ ಮುಂದುವರಿಯದೇ ಮರೆ ಆಯಿತು. ಕರಾವಳಿಗೂ ಮಳೆ ಕಡಿಮೆ ಆಗಿ ಕಲ್ಯಾಣ ಕರ್ನಾಟಕ ಭಾಗದತ್ತ ಹೆಚ್ಚು ಮಳೆ ಸುರಿಯಿತು. ನಂತರ ಕಳೆದ ವಾರ ಎಲ್ಲ ಭಾಗದಲ್ಲೂ ಮಳೆ ಕ್ಷೀಣಿಸುತ್ತಾ ಬಂದು ಮತ್ತೆ ಶುಷ್ಕ ವಾತಾವರಣ ಸೃಷ್ಟಿಯಾಗಿತ್ತು.

ಇದೀಗ ಹವಾಮಾನದಲ್ಲಿ ಏರುಪೇರು ರೈತರಿಗೆ ವರದಾನವಾಗಿದೆ. ಕಾರಣ ಐದು ದಿನ ಅರ್ಧ ರಾಜ್ಯಕ್ಕೆ ಧಾರಾಕಾರ ಮಳೆ ನಿರೀಕ್ಷೆ ಇದೆ. ಹೀಗಾಗಿ 18 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಕೊಡಲಾಗಿದೆ.
ಕರಾವಳಿಗೆ ವರುಣಾಘಾತ
ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ನಿರಂತರವಾಗಿ ಐದು ದಿನ 'ಯೆಲ್ಲೋ ಅಲರ್ಟ್' ಪಡೆದಿವೆ. ಇಲ್ಲಿ ನಿರಂತರವಾಗಿ ಬಿಟ್ಟು ಬಿಡದೇ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಅದೇ ರೀತಿ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ಬಾಗಲಕೋಟೆ, ಹಾವೇರಿ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಒಂದು ದಿನ ಬಿಟ್ಟು ಒಂದು ಸಾಧಾರಣದಿಂದ ಜೋರು ಮಳೆ ಆಗಲಿದೆ. ಹೀಗಾಗಿ ಇವುಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.

ಇಲ್ಲಿ ಸಾಧಾರಣವಾಗಿ ಮಳೆ ಸಂಭವ
ಉಳಿದ ಜಿಲ್ಲೆಗಳಲ್ಲಿ ತುಂತುರುವಿನಿಂದ ಸಾಧಾರಣವಾಗಿ ಕೆಲವೊಮ್ಮೆ ಜೋರಾರಿ ಮಳೆ ಆಗಲಿದೆ. ಈ ತಿಂಗಳಾಂತ್ಯಕ್ಕೆ ಮುಂಗಾರು ಮಳೆ ಸುರಿಸುವ ಮೋಡಗಳು ದುರ್ಬಲಗೊಳ್ಳುವ ಸಾಧ್ಯತೆಗಳು ಇವೆ. ಇದೇ ವೇಳೆ ಹಿಂಗಾರು ಮಳೆ ಸುರಿಸುವ ಮಾರುತಗಳು ಸಕ್ರಿಯಗೊಳ್ಳಲಿವೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆಯಿಂದ ಅಧಿಕೃತ ಮಾಹಿತಿ ಹೊರ ಬರಬೇಕಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಬೆಳಗಾವಿ, ರಾಯಚೂರು, ಧಾರವಾಡ, ವಿಜಯಪುರ, ಉತ್ತರ ಕನ್ನಡ, ಉಡುಪಿ, ಕೋಲಾರ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ ಹಲವೆಡೆ ವ್ಯಾಪಕ ಮಳೆ ದಾಖಲಾಗಿದೆ. ಇದರಿಂದ ವಾತಾವರಣದಲ್ಲಿ ತಾಪಮಾನ ಪ್ರಮಾಣ ಇಳಿಕೆ ಆಗಿದ್ದು, ತಂಪು ವಾತಾವರಣ ಕಂಡು ಬರುತ್ತಿದೆ.












Click it and Unblock the Notifications