ಆಶಾ ಕಾರ್ಯಕರ್ತೆಯರಿಗೆ ಕೈಗೆ ಮೊಬೈಲ್
ಬೆಂಗಳೂರು, ಜೂ. 20 : ಆರೋಗ್ಯ ಇಲಾಖೆ ಸೇವೆಗಳ ಬಗ್ಗೆ ಅರಿವು ಮೂಡಿಸಿ ಜನರಿಗೆ ಸವಲತ್ತು ತಲುಪಿಸುವ ಕಾರ್ಯ ನಿರ್ವಹಣೆ ಮಾಡುವ ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ಫೋನ್ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಯು.ಟಿ.ಖಾದರ್, ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ 33 ಸಾವಿರ ಆಶಾ ಕಾರ್ಯಕರ್ತೆಯರಿಗೆ ಇನ್ನೊಂದು ತಿಂಗಳಲ್ಲಿ ಸಿಡಿಎಂಎ ತಂತ್ರಜ್ಞಾನದ ಮೊಬೈಲ್ ಫೋನ್ ನೀಡಲಾಗುವುದು ಎಂದು ತಿಳಿಸಿದರು.

ಸರ್ಕಾರ ನೀಡುವ ಈ ಮೊಬೈಲ್ ಸಂದೇಶ ಸ್ವೀಕಾರ ಹಾಗೂ ರವಾನೆ ಮತ್ತು ನಿರ್ದಿಷ್ಟ ಸಂಖ್ಯೆಗಳ ನಡುವೆ ಸಂಭಾಷಣೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದರು. ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಜಾರಿ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ಸಂದೇಶದ ಮೂಲಕ ನಿರ್ದೇಶನ ನೀಡುವುದಕ್ಕೆ ಈ ಫೋನ್ ನೀಡುವ ಯೋಜನೆ ಸಹಾಯಕವಾಗಲಿವೆ ಎಂದು ಸಚಿವರು ಹೇಳಿದರು. [ಎಂಡೋ ಪೀಡಿತರಿಗೆ ಉಚಿತ ಚಿಕಿತ್ಸೆ]
ಗೌರವ ಧನ ಹೆಚ್ಚಳ : ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ 1 ಸಾವಿರ ರೂ. ಗೌರವಧನ ನಿಗದಿಪಡಿಸಿದ್ದು ರಾಜ್ಯ ಸರ್ಕಾರದಿಂದ 1 ಸಾವಿರ ನೀಡಲಾಗುತ್ತಿದೆ. ಇದರ ಜತೆಗೆ ಶಸ್ತ್ರಚಿಕಿತ್ಸೆ ಸೇವೆಗೆ ರೋಗಿಯನ್ನು ದಾಖಲು ಮಾಡಿಸಿದರೆ 100 ರಿಂದ 150 ರೂ.ವರೆಗೆ ಪ್ರೋತ್ಸಾಹ ಧನ ಸಹ ನೀಡಲಾಗುತ್ತಿದೆ. ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
11 ಸಾವಿರ ಹುದ್ದೆ ಭರ್ತಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 2 ಸಾವಿರ ವೈದ್ಯರು, 2 ಸಾವಿರ ನರ್ಸ್ ಗಳು, 3 ಸಾವಿರ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಸೇರಿದಂತೆ 11 ಸಾವಿರ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಎರಡು ಹಂತಗಳಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಯು.ಟಿ.ಖಾದರ್ ಹೇಳಿದರು.












Click it and Unblock the Notifications