ಬಿಜೆಪಿಯಲ್ಲಿ ಹತ್ತಿಕೊಂಡ ಬಂಡಾಯದ ಬೆಂಕಿ, ರಾಜ್ಯಾದ್ಯಂತ ನಾಯಕರು, ಕಾರ್ಯಕರ್ತರ ಆಕ್ರೋಶ
ಬೆಂಗಳೂರು, ಏಪ್ರಿಲ್ 12: ಬಿಜೆಪಿ ಕರ್ನಾಟಕ ವಿಧಾನಸಭೆ ಚುನಾವಣೆಗೆ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಹಾಲಿ ಶಾಸಕರಿಗೆ ಹಲವರಿಗೆ ಟಿಕೆಟ್ ನೀಡದೆ ಪಕ್ಷದಲ್ಲಿ ಬಂಡಾಯದ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಶಾಸಕರ ಪರ ಬೆಂಬಲಿಗರು, ಕಾರ್ಯಕರ್ತರು ಬಿಜೆಪಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಟಿಕೆಟ್ ನಿರಾಕರಿಸಿರುವುದನ್ನು ಖಂಡಿಸಿ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ಅನಿಲ್ ಬೆನಕೆ ಬೆಂಬಲಿಗರು ಮಂಗಳವಾರ ತಡರಾತ್ರಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ ಉತ್ತರ ಕ್ಷೇತ್ರದಿಂದ ಲಿಂಗಾಯತ ಡಾ.ರವಿ ಪಾಟೀಲ್ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಕಣಕ್ಕಿಳಿಸಿರುವುದು ಮರಾಠಾ ಸಮುದಾಯಕ್ಕೆ ಸೇರಿದ ಬೆನಕೆ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಶಾಸಕ ಅನಿಲ ಬೆನಕೆ ಬೆಂಬಲಿಗರು ಚನ್ನಮ್ಮ ವೃತ್ತದಲ್ಲಿ ಜಮಾಯಿಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಅನ್ಯಾಯ ಮಾಡಿದ್ದಾರೆ ಎಂದು ಪ್ರತಿಭಟನೆ ನಡೆಸಿದ್ದಾರೆ. ಶಾಸಕ ಬೆನಕೆ ಅವರು ಕ್ಷೇತ್ರದಲ್ಲಿ ಯಾವುದೇ ತಾರತಮ್ಯವಿಲ್ಲದೆ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದು, ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕಿತ್ತು. ಆದರೆ ಈಗ ಪಕ್ಷದೊಂದಿಗೆ ನಿಂತಿರುವ ಮರಾಠ ಸಮುದಾಯಕ್ಕೂ ಬಿಜೆಪಿಯಿಂದ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
ಮುಖ್ಯವಾಗಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಡಿಸಿಎಂ ಆಗಿದ್ದ ಕೆಎಸ್ ಈಶ್ವರಪ್ಪ ಅವರಿಗೆ ಟಿಕೆಟ್ ನೀಡದಿರುವುದರಿಂದ ಶಿವಮೊಗ್ಗ ಜಿಲ್ಲಾದ್ಯಂತ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದ್ದು, ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಮಂಗಳವಾರ ಈಶ್ವರಪ್ಪ ಅವರು ತಾವು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದು, ಸಹಜವಾಗಿ ಕಾರ್ಯಕರ್ತರು ಬೆಂಬಲಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈಶ್ವರಪ್ಪ ಅವರು ತಮ್ಮ ಮಗನಿಗೂ ಟಿಕೆಟ್ ಕೇಳಿದ್ದರು. ಹೀಗಾಗಿ ಅವರಿಗೆ ನಿರಾಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಶಿವಮೊಗ್ಗದ ಟಿಕೆಟ್ ಅನ್ನು ಇನ್ನು ಘೋಷಿಸಲಾಗಿಲ್ಲ.

ಅಥಣಿ ಕ್ಷೇತ್ರದಲ್ಲಿ ಶಾಸಕರಾಗಿರುವ ಲಕ್ಷಣ ಸವದಿ ಅವರಿಗೂ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ಅವರು ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಅಥಣಿಯಲ್ಲಿ ತಮ್ಮದೇ ಪ್ರಬಲ ಬೆಂಬಲಿಗರ ಪಡೆ ಹೊಂದಿರುವ ಅವರು ಬಿಜೆಪಿಯಿಂದ ಟಿಕೆಟ್ ಕೈತಪ್ಪುತ್ತದೆ ಎಂದು ಭಾವಿಸಿದ್ದಂತಿರಲಿಲ್ಲ, ಈಗ ಟಿಕೆಟ್ ನೀಡದಿರುವುದರಿಂದ ಕಾರ್ಯಕರ್ತರು ಅಕ್ರೋಶಗೊಂಡಿದ್ದಾರೆ. ಇನ್ನು ಕಾಂಗ್ರೆಸ್ ನಾಯಕರು ಕೂಡ ಅವರನ್ನು ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡ ಬಂಡಾಯ ಎದ್ದಿದ್ದಾರೆ, ಸ್ವತಃ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿರುವುದಕ್ಕೆ ಜಗದೀಶ್ ಶೆಟ್ಟರ್ ಅವರು ತಾವು ತಮ್ಮ ಸ್ವತಃ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಬಿಜೆಪಿಯಲ್ಲಿ ತಾವು 30 ವರ್ಷದಿಂದ ರಾಜಕೀಯ ಮಾಡಿಕೊಂಡು ಬರುತ್ತಿದ್ದೇನೆ. ನನಗೆ ಈ ರೀತಿ ಪಕ್ಷ ಕ್ರಮ ಕೈಗೊಳ್ಳುತ್ತದೆ ಎಂದುಕೊಂಡಿರಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪಿರುವುದಕ್ಕೆ ಉಡುಪಿ ಶಾಸಕ ರಘುಪತಿ ಭಟ್ ಕೂಡ ಕಣ್ಣೀರಿಟ್ಟಿದ್ದಾರೆ. ಪಕ್ಷ ನನ್ನನ್ನು ಹೀಗೆ ನಡೆಸಿಕೊಳ್ಳುತ್ತದೆ ಎಂದುಕೊಂಡಿರಲಿಲ್ಲ, ಪಕ್ಷ ನಡೆಸಿಕೊಂಡ ರೀತಿ ಬೇಸರ ತಂದಿದೆ ಎಂದು ಹೇಳಿದ್ದಾರೆ. ಉಡುಪಿಯಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದೇನೆ ಮತ್ತು ಬಿಜೆಪಿಯಿಂದ ಇಲ್ಲಿ ಯಾರು ನಿಂತರೂ ಗೆಲ್ಲಲಿದ್ದಾರೆ ಅಂತಹ ಸ್ಥಿತಿ ನಿರ್ಮಾಣ ಮಾಡಿದ್ದೇನೆ. ಪಕ್ಷಕ್ಕೆ ಈಗ ನನ್ನ ಅವಶ್ಯಕತೆ ಇಲ್ಲ ಎಂಬುದು ತೋರಿಸುತ್ತಿದ್ದಾರೆ. ಅಮಿತ್ ಶಾ ಬೇಡ, ರಾಜ್ಯ ನಾಯಕರು ಅಥವಾ ಜಿಲ್ಲಾಧ್ಯಕ್ಷರು ಕರೆ ಮಾಡದೇ ಇರುವುದು ಬೇಸರ ತಂದಿದೆ ಎಂದು ಹೇಳಿದ್ದಾರೆ. ಪಕ್ಷಾಂತರ ಮಾಡುವುದಿಲ್ಲ. ಸ್ಪರ್ಧೆ ಮಾಡುವ ಬಗ್ಗೆ ಸಭೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿದ್ದ ನೆಹರೂ ಓಲೇಕಾರ್ ಅವರಿಗೂ ಪಕ್ಷ ಟಿಕೆಟ್ ನೀಡಿಲ್ಲ. ಈ ಬಗ್ಗೆ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಓಲೇಕಾರ್ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಶಿಕ್ಷೆ ಪ್ರಕರಣದಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕ ನೆಹರು ಓಲೆಕಾರ್ ಅವರಿಗೆ 2ವರ್ಷ ಜೈಲುಶಿಕ್ಷೆಯನ್ನು ವಿಧಿಸಿ ಬೆಂಗಳೂರಿನ 91 ಸಿಸಿಹೆಚ್ ಕೋರ್ಟ್ ಆದೇಶವನ್ನು ಹೊರಡಿಸಿತ್ತು.
ಇನ್ನು ಬ್ಯಾಟರಾಯನಪುರದಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಕ್ಷೇತ್ರದಲ್ಲಿ ತಮ್ಮೇಶ್‌ಗೌಡ ಅವರಿಗೆ ಟಿಕೆಟ್ ನೀಡಿರುವ ಪಕ್ಷದ ನಡೆಯಿಂದ ರವಿ ಅವರು ಆಕ್ರೋಶಗೊಂಡಿದ್ದಾರೆ. ಪಕ್ಷದ ನಡೆ ಖಂಡಿಸಿ ರವಿ ಬೆಂಬಲಿಗರು ಟೈರ್‌ಗೆ ಬೆಂಕಿ ಹಚ್ಚಿ ಅಸಮಾಧಾನ ವ್ಯಕ್ಯಪಡಿಸಿದ್ದಾರೆ. ಇನ್ನು ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ ಅವರಿಗೆ ಟಿಕೆಟ್ ನೀಡದಿರುವುದರಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ.












Click it and Unblock the Notifications