Yatnal: ಉತ್ತರ ಕರ್ನಾಟಕಕ್ಕೆ ಡಕೋಟಾ ಬಸ್ ಕೊಟ್ಟಿದ್ದೀರಿ: ಸರ್ಕಾರಕ್ಕೆ ಹೊಸ ಬೇಡಿಕೆ ಇಟ್ಟ ಯತ್ನಾಳ್
ಇತ್ತೀಚೆಗೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಅಗ್ನಿ ಅವಘಡಕ್ಕೆ ತುತ್ತಾಗಿತ್ತು. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಸಜೀವದಹನವಾಗಿದ್ದರು. ಈ ಘಟನೆಯಿಂದ ಬಸ್ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ರಾಜ್ಯ ಸರ್ಕಾರಕ್ಕೆ ವಿಶೇಷ ಬೇಡಿಕೆ ಇಟ್ಟಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಸಂಚರಿಸುತ್ತಿರುವ ಬಸ್‌ಗಳ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಯತ್ನಾಳ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಗೆ ಸರ್ಕಾರ ನೀಡಿರುವ ಬಸ್ ಕಳಪೆ ಗುಣಮಟ್ಟದ್ದಾಗಿದ್ದು, ಇದರಿಂದ ಸದರಿ ನಿಗಮದ ಬಸ್‌ಗಳ ದುರಸ್ತಿ ಹಾಗೂ ಇಂಧನ ವೆಚ್ಚ ಹೆಚ್ಚುತ್ತಿದೆ ಎಂದು ಯತ್ನಾಳ್ ಆರೋಪ ಮಾಡಿದ್ದಾರೆ. ಇದಲ್ಲದೆ, ಪ್ರಯಾಣಿಕರ ಸುರಕ್ಷತೆಗೂ ಮಾರಕವಾಗಿದೆ. ಉತ್ತರ ಕರ್ನಾಟಕಕ್ಕೆ ಡಕೋಟಾ ಬಸ್‌ಗಳನ್ನು ನೀಡುವ ಮೂಲಕ ಮಲತಾಯಿ ಧೋರಣೆ ತೋರುತ್ತಿರುವ ಸರ್ಕಾರ, ಪ್ರಯಾಣಿಕರ ಜೀವಕ್ಕೂ ಕುತ್ತು ತರುತ್ತಿದೆ ಎಂದು ಆರೋಪಿಸಿದ್ದಾರೆ.

ಕರ್ನೂಲ್ ಬಸ್ ಬೆಂಕಿ ಅವಘಡದಲ್ಲಿ 20 ಜನರು ಸಾವನ್ನಪ್ಪಿದ ನಂತರ, ರಾಜ್ಯದಲ್ಲಿನ ಬಸ್‌ಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ನಾನು ಒತ್ತಾಯಿಸುತ್ತೇನೆ. ಉತ್ತರ ಕರ್ನಾಟಕಕ್ಕೆ ಹಂಚಿಕೆಯಾದ ಸರ್ಕಾರಿ ಬಸ್‌ಗಳು ಶಿಥಿಲಾವಸ್ಥೆಯಲ್ಲಿವೆ ಮತ್ತು ಅಂತಹ ಬಸ್‌ಗಳಿಗೆ ತುರ್ತು ಫಿಟ್‌ನೆಸ್ ಮತ್ತು ಸುರಕ್ಷತಾ ಪರಿಶೀಲನೆ ನಡೆಸಬೇಕಾಗಿದೆ. ಕಾಂಗ್ರೆಸ್ ಸರ್ಕಾರವು ಕಳಪೆ ಗುಣಮಟ್ಟದ ವಾಹನಗಳನ್ನು ನೀಡುವ ಮಾಡುವ ಮೂಲಕ ಉತ್ತರ ಕರ್ನಾಟಕಕ್ಕೆ ಧೋರಣೆ ತೋರುತ್ತಿದೆ. ಇದರೊಂದಿಗೆ ಪ್ರಯಾಣಿಕರ ಜೀವಕ್ಕೂ ಅಪಾಯವನ್ನುಂಟುಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಎರಡು ಎಮರ್ಜೆನ್ಸಿ ಕಿಟಕಿ ಇರಲಿ
ಸ್ಟಾಂಡರ್ಡ್ ಸ್ಕ್ರ್ಯಾಪ್ ಮೈಲೇಜ್ ಮೀರಿರುವ ಬಸ್‌ಗಳನ್ನ ಕೂಡಲೇ ಹಿಂಪಡೆದು, ನಮ್ಮ ವಾಯುವ್ಯ ಸಾರಿಗೆಗೆ ಹೊಸ ಬಸ್‌ಗಳನ್ನು ನೀಡಬೇಕೆಂದು ಮಾನ್ಯ ಸಚಿವರಲ್ಲಿ ಈ ಭಾಗದ ಪ್ರಯಾಣಿಕರ ಪರವಾಗಿ ಆಗ್ರಹಿಸುತ್ತೇನೆ. ಅಲ್ಲದೆ, ಖಾಸಗಿ ಅಥವಾ ಸರ್ಕಾರಿ ಬಸ್‌ಗಳಲ್ಲಿ ಅಗ್ನಿ ನಂದಿಸುವ ಉಪಕರಣಗಳು ಹಾಗೂ ಕನಿಷ್ಠ ಎರಡು ತುರ್ತು ನಿರ್ಗಮನ ಕಿಟಕಿಗಳಿರಬೇಕೆಂಬ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಬೇಕೆಂದು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕೇಳಿಕೊಳ್ಳುತ್ತೇನೆ ಎಂದು ಒತ್ತಾಯಿಸಿದ್ದಾರೆ. ಸುರಕ್ಷತಾ ಕ್ರಮಗಳನ್ನು, ನಿಯಮಾವಳಿಗಳನ್ನು ಗಾಳಿಗೆ ತೂರುವ ಬಸ್‌ಗಳ ಲೈಸೆನ್ಸ್ ಅನ್ನು ಯಾವುದೇ ನೋಟೀಸು ನೀಡದೆ ಹಿಂಪಡೆಯಬೇಕು ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಲಾಲ್ ನಿಷೇಧಿಸಿ
ಹಲಾಲ್ ಪ್ರಮಾಣ ಪತ್ರ ಹೊಂದಿರುವ ಸಂಸ್ಥೆಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ರದ್ದುಗೊಳಿಸಬೇಕು ಎಂದು ಶಾಸಕ ಯತ್ನಾಳ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಹಲಾಲ್ ಉತ್ಪನ್ನಗಳನ್ನು ನಿಷೇದಧಿಸಲಾಗಿದೆ. ಇದೇ ರೀತಿ ದೇಶದಾದ್ಯಂತ ಹಲಾಲ್ ಉತ್ಪನ್ನಗಳು ಹಾಗೂ ಅದನ್ನು ಪ್ರಮಾಣೀಕರಿಸುವ ಸಂಸ್ಥೆಗಳು ನಿಷೇಧವಾಗಬೇಕೆಂದು ಎಂದು ಆಗ್ರಹಿಸಿದ್ದಾರೆ.












Click it and Unblock the Notifications