MLA Missing; ಸರಣಿ ಟ್ವೀಟ್ ಮೂಲಕ ಸಿಎಂ, ಬಿಜೆಪಿಗೆ ತಿವಿದ ಕಾಂಗ್ರೆಸ್
ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಎಲ್ಲಿ, ಕರ್ನಾಟಕ ಕಾಂಗ್ರೆಸ್ ಈ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಬೆಂಗಳೂರು, ಮಾರ್ಚ್ 06; ಕರ್ನಾಟಕದಲ್ಲಿ ಚುನಾವಣಾ ಸಮಯದಲ್ಲಿ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದಿದ್ದು ಪ್ರತಿಪಕ್ಷ ಕಾಂಗ್ರೆಸ್‌ಗೆ ಒಳ್ಳೆಯ ಅಸ್ತ್ರ ಸಿಕ್ಕಂತೆ ಆಗಿದೆ. 40 ಪರ್ಸೆಂಟ್ ಕಮೀಷನ್ ಸರ್ಕಾರ ಎಂದು ಬಿಜೆಪಿ ಸರ್ಕಾರ ಟೀಕಿಸುತ್ತಿದ್ದ ಕಾಂಗ್ರೆಸ್ ಈಗ ತನ್ನ ವಾಗ್ದಾಳಿ ಮುಂದುವರೆಸಿದೆ. ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಕಾರಣದಿಂದಾಗಿ ಪಕ್ಷಕ್ಕೆ ಮುಜುಗುರು ತಂದಿಟ್ಟಿದ್ದಾರೆ.
ಲಂಚ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಸೋಮವಾರ ಅವರು ಕರ್ನಾಟಕ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಹಾಕಿದ್ದಾರೆ. ಈ ಅರ್ಜಿಯ ವಿಚಾರಣೆ ಮಾರ್ಚ್ 7ರ ಮಂಗಳವಾರ ನಡೆಯಲಿದೆ. ಲೋಕಾಯುಕ್ತ ಪೊಲೀಸರು ಶಾಸಕರಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ಕರ್ನಾಟಕ ಕಾಂಗ್ರೆಸ್ #MLAmissing ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. 'ನಮ್ಮ ಪೊಲೀಸರಿಗೆ ಎಂತೆಂತಹ ನಿಗೂಢ ಪ್ರಕರಣಗಳನ್ನೇ ಬೇಧಿಸಿದ, ಎಂತೆಂತಹ ಕ್ರಿಮಿನಲ್‌ಗಳನ್ನೇ ಹುಡುಕಿ ತಂದ ಇತಿಹಾಸವಿದೆ.
ಹೀಗಿರುವಾಗ ಒಬ್ಬ ಭ್ರಷ್ಟಾಚಾರದ ಆರೋಪಿ ಶಾಸಕರನ್ನು ಪತ್ತೆ ಹಚ್ಚಲಾಗುತ್ತಿಲ್ಲ ಎಂದರೆ ಏನರ್ಥ ಬಸವರಾಜ ಬೊಮ್ಮಾಯಿ ಅವರೇ?, ಭ್ರಷ್ಟಾಚಾರ ಹಾಗೂ ಭ್ರಷ್ಟರನ್ನು ರಕ್ಷಿವುದೇ ನಿಮ್ಮ ಏಕೈಕ ಗುರಿಯೇ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
'PSI ಹಗರಣದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧನಕ್ಕೆ 25 ದಿನಗಳು ಬೇಕಾಯ್ತು. ಬಿಜೆಪಿ ನಾಯಕ ಸ್ಯಾಂಟ್ರೋ ರವಿಯ ಬಂಧನಕ್ಕೆ 10ಕ್ಕೂ ಹೆಚ್ಚು ದಿನ ಬೇಕಾಯ್ತು. ಒಂದು ವಾರ ಕಳೆದರೂ KSDL ಹಗರಣದ ಶಾಸಕ ಮಾಡಾಳ್ ವೀರೂಪಾಕ್ಷಪ್ಪರನ್ನು ಬಂಧಿಸಲಾಗಿಲ್ಲ. ಇದೆಲ್ಲವೂ ಬಸವರಾಜ ಬೊಮ್ಮಾಯಿ ಅವರ ಭ್ರಷ್ಟಾಚಾರದ ಪೋಷಣೆಯ ಫಲವಲ್ಲವೇ?' ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್‌ನಲ್ಲಿ ಮುಖ್ಯಮಂತ್ರಿಗಳನ್ನು ಕೇಳಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧವೂ ಕಾಂಗ್ರೆಸ್ ಟೀಕೆ ಮಾಡಿದೆ. 'ಒಬ್ಬ ಶಾಸಕರು ಪೊಲೀಸರ ಕೈಗೆ ಸಿಗಲಿಲ್ಲವೆಂದರೆ ಇದು ಗೃಹ ಇಲಾಖೆಯ ಕುಚೋದ್ಯವಲ್ಲವೇ? ಆರಗ ಜ್ಞಾನೇಂದ್ರ ಅವರೇ, ನಿಮ್ಮ ಸಹೋದ್ಯೋಗಿ, ನಿಮ್ಮ ಶಾಸಕರು ಎಲ್ಲಿದ್ದಾರೆಂದು ನಿಮಗೇ ತಿಳಿದಿಲ್ಲವೇ?. ಶಾಸಕರು ಪೊಲೀಸರ ಕೈಗೆ ಸಿಗುತ್ತಿಲ್ಲ ಎನ್ನುವುದನ್ನು ಜನ ನಂಬಬೇಕೆ? ಇದು ಅಸಾಮರ್ಥ್ಯವೋ, ಭ್ರಷ್ಟಾಚಾರದ ರಕ್ಷಣೆಯೋ
ಬಸವರಾಜ ಬೊಮ್ಮಾಯಿ ಅವರೇ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಭಾನುವಾರವೂ ಕಾಂಗ್ರೆಸ್ ಇದೇ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ವಾಗ್ದಾಳಿ ಮಾಡಿತ್ತು, 'ಒಬ್ಬ ಶಾಸಕರನ್ನು ಬಂಧಿಸಲು ಮೂರ್ನಾಲ್ಕು ದಿನದಿಂದ ಶೋಧ ನಡೆಸಬೇಕೆ? ಇದನ್ನು ಜನ ನಂಬಬೇಕೆ?. ಹಂಪಿಯಲ್ಲಿ ರೀಲ್ಸ್ ಮಾಡಿದವರನ್ನೆಲ್ಲ ಹುಡುಕಿ ಬಂಧಿಸುವ ಪೊಲೀಸರಿಗೆ ಜನಪ್ರತಿನಿಧಿಯೊಬ್ಬರು ಕೈಗೆ ಸಿಗುವುದಿಲ್ಲವೇ? ಬಸವರಾಜ ಬೊಮ್ಮಾಯಿ ಅವರೇ, ನೀವು ಮತ್ತು ನಿಮ್ಮ 40% ಪಟಾಲಂ ಯಾರ #KiviMeleHoova ಇಡಲು ಹೊರಟಿದ್ದೀರಿ?' ಎಂದು ಕಾಂಗ್ರೆಸ್ ಕೇಳಿತ್ತು.
ಜಾಮೀನು ಪಡೆಯಲು ಪ್ರಯತ್ನ; ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನಿಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಕಳೆದ ಐದು ದಿನಗಳಿಂದ ತಲೆಮರೆಸಿಕೊಂಡಿದ್ದಾರೆ. ಸೋಮವಾರ ವಕೀಲರ ಮೂಲಕ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ನ್ಯಾಯಮೂರ್ತಿಗಳ ಮುಂದೆ ಮನವಿ ಮಾಡಿದ್ದಾರೆ. ಅರ್ಜಿ ಸ್ವೀಕಾರ ಮಾಡಿದ ನ್ಯಾಯಮೂರ್ತಿ ಕೆ. ನಟರಾಜನ್ ಮಾರ್ಚ್ 7 ಮಂಗಳವಾರ ಅರ್ಜಿ ವಿಚಾರಣೆ ಮಾಡುವುದಾಗಿ ದಿನಾಂಕ ನಿಗದಿ ಮಾಡಿದರು.
ಇಂದು ಲೋಕಾಯುಕ್ತ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಮಾಡಾಳ್ ವಿರೂಪಾಕ್ಷಪ್ಪಗೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ವಿಚಾರಣೆಗೆ ಗೈರಾದರು. ಮತ್ತೊಂದು ಕಡೆ ನ್ಯಾಯಾಂಗ ಬಂಧನದಲ್ಲಿರುವ ಮಾಡಾಳ್ ಪ್ರಶಾಂತ್‌ರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಲೋಕಾಯುಕ್ತ ಪೊಲೀಸರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಸಹ ಕೋರ್ಟ್ ಮಂಗಳವಾರಕ್ಕೆ ಮುಂದೂಡಿದೆ.












Click it and Unblock the Notifications