ಹಣಕಾಸು ದುರ್ಬಳಕೆ; 80 ವರ್ಷದ ವೃದ್ಧನಿಗೆ ಒಂದು ದಿನದ ಶಿಕ್ಷೆ!
ಬೆಂಗಳೂರು, ಏಪ್ರಿಲ್ 25; ವಯೋವೃದ್ಧರು ಎಂಬ ಕಾರಣಕ್ಕೆ ಮಾನವೀಯತೆ ಆಧಾರದಲ್ಲಿ ಕರ್ನಾಟಕ ಹೈಕೋರ್ಟ್ ಒಂದು ವರ್ಷದ ಜೈಲು ಶಿಕ್ಷೆಯನ್ನು ಕೇವಲ ಒಂದೇ ದಿನಕ್ಕೆ ಇಳಿಕೆ ಮಾಡಿದೆ. ಇದರಿಂದಾಗಿ ಆ ಹಿರಿಯ ಜೀವ ಈ ಇಳಿ ವಯಸ್ಸಿನಲ್ಲಿ ಕಾರಾಗೃಹದ ಮೆಟ್ಟಿಲು ಏರುವ ಬದಲು ಕೋರ್ಟ್ ಮೆಟ್ಟಿಲೇರಿ ಅಲ್ಲೇ ಬೆಳಗ್ಗೆಯಿಂದ ಸಂಜೆವರೆಗೆ ಸಮಯ ಕಳೆಯುವ ಮೂಲಕ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಸರ್ಕಾರಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಹಣಕಾಸು ದುರ್ಬಳಕೆ ಮಾಡಿದ್ದ ಆರೋಪದಲ್ಲಿ ಒಂದು ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮೈಸೂರು ಜಿಲ್ಲೆ ಕೆ. ಆರ್. ನಗರದ ಹನುಮಂತರಾವ್‌ಗೆ ಅಧೀನ ನ್ಯಾಯಾಲಯ ನೀಡಿದ್ದ ಒಂದು ವರ್ಷದ ಜೈಲು ಶಿಕ್ಷೆಯನ್ನು ಒಂದು ದಿನಕ್ಕೆ (ನ್ಯಾಯಾಲಯದ ಕಲಾಪ ಮುಗಿಯುವವರೆಗೆ ಮಾತ್ರ) ಇಳಿಕೆ ಮಾಡಿ ಹೈಕೋರ್ಟ್ ಆದೇಶ ನೀಡಿದೆ.

ಮೈಸೂರು ಜಿಲ್ಲೆ ಕೆ. ಆರ್. ನಗರದ ಹನುಮಂತರಾವ್ ಎಂಬುವವರು ವಿಚಾರಣಾ ನ್ಯಾಯಾಯ ವಿಧಿಸಿದ್ದ ಒಂದು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ, ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿದೆ.
ಅಲ್ಲದೇ, ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಎರಡು ಆರೋಪಗಳಿಗೆ ತಲಾ 10 ಸಾವಿರ ರೂ. ಗಳಂತೆ ದಂಡ ಪಾವತಿಸುವಂತೆ ಆದೇಶಿಸಿದೆ. ಆದರೆ, ಅರ್ಜಿದಾರರಿಗೆ 80 ವರ್ಷ ವಯಸ್ಸಾಗಿದ್ದು, ದುರ್ಬಳಕೆ ಮಾಡಿಕೊಂಡಿರುವ ಮೊತ್ತವನ್ನು ಈಗಾಗಲೇ ಸರ್ಕಾರ ಹಿಂಪಡೆದಿದೆ. ಹೀಗಾಗಿ ದಂಡ ವಿಧಿಸಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ; ಅರ್ಜಿದಾರ ಹನುಮಂತ ರಾವ್ ವಿರುದ್ಧ 1981ರ ನವೆಂಬರ್ 21 ರಿಂದ 1987ರ ಜನವರಿ 5ರ ವರೆಗಿನ ಅವಧಿಯಲ್ಲಿ ವಿಧವಾ ವೇತನ ಮಂಜೂರು ಮಾಡುವಲ್ಲಿ 54,199 ರೂ. ಅವ್ಯವಹಾರ ವೆಸಗಿದ ಆರೋಪ ಎದುರಾಗಿತ್ತು. ಈ ಸಂಬಂಧ ನಡೆದ ಲೆಕ್ಕಪರಿಶೋಧನೆ ವೇಳೆ ಅರ್ಜಿದಾರರು ತಪ್ಪೆಸಗಿರುವುದು ಕಂಡು ಬಂದಿರುತ್ತದೆ. ಇದಕ್ಕಾಗಿ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಿ ದುರ್ಬಳಕೆ ಮಾಡಿಕೊಂಡಿರುವ ಹಣವನ್ನು 1987ರ ಜನವರಿ 31ರ ಅಂತ್ಯದ ವೇಳೆಗೆ ಹಿಂದಿರುಗಿಸುವಂತೆ ಸೂಚನೆ ನೀಡಿರುತ್ತಾರೆ. ಅಲ್ಲದೆ, ಈ ಮೊತ್ತವನ್ನು ಅರ್ಜಿದಾರರ ವೇತನದಿಂದ ಹಿಂಪಡೆದು ಕೊಂಡಿರುತ್ತಾರೆ.

ಈ ನಡುವೆ ಮಂಡ್ಯ ಜಿಲ್ಲಾ ಖಜಾನೆ ಅಧಿಕಾರಿಯಾಗಿದ್ದ ಸಿ. ಎಸ್. ಮುತ್ತಣ್ಣ ಎಂಬುವರು ಭಾರತೀಯ ದಂಡ ಸಂಹಿತೆ 409 (ಸರ್ಕಾರಿ ನೌಕರನ ಮೇಲಿನ ನಂಬಿಕೆ ಉಲ್ಲಂಘನೆ), 477 ಎ(ಸುಳ್ಳು ಲೆಕ್ಕ ಬರೆಯುವುದು) ಅಡಿಯಲ್ಲಿ ಅಪರಾಧಗಳ ಅಡಿ ಕೃಷ್ಣರಾಜಪೇಟೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ವಿಚಾರಣಾ ವೇಳೆ ಹಾಜರಾಗಿದ್ದ ಅರ್ಜಿದಾರರ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೆ ನೀಡಿದ್ದರು. ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ್ದ ಕೃಷ್ಣರಾಜಪೇಟೆಯ ಜೆಎಂಎಫ್‌ಸಿ ನ್ಯಾಯಾಲಯ ಎರಡೂ ಸೆಕ್ಷನಗಳಲ್ಲಿ ಒಂದು ವರ್ಷ ಶಿಕ್ಷೆ ಮತ್ತು 3 ಸಾವಿರ ರೂ.ಗಳ ಡಂಡ ವಿಧಿಸಿ 2009ರ ಏಪ್ರಿಲ್ 8ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಮಂಡ್ಯದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಂಜುನಾಥ್ ರಾವ್ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದರು.












Click it and Unblock the Notifications