ಶಾಸಕ ವಿನಯ್ ಕುಲಕರ್ಣಿ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ ದೋಷ
ಬೆಂಗಳೂರು, ಫೆಬ್ರವರಿ 13: ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ಆರೋಪಿಗಳ ವಿರುದ್ಧ ಆರೋಪ ನಿಗದಿಪಡಿಸುವಲ್ಲಿ ಸಾಕಷ್ಟು ದೋಷಗಳಿವೆ ಎಂದು ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದಿಸಿದ್ದಾರೆ.
ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣೆ ರದ್ದು ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಸೋಮವಾರ ವಿಚಾರಣೆ ನಡೆಸಿದರು.

ವಿನಯ್ ಕುಲಕರ್ಣಿ ಪರ ಹಿರಿಯ ವಕೀಲರು ವಾದ ಮಂಡಿಸಿ, ಪ್ರಾಸಿಕ್ಯೂಷನ್ ಸಂಗ್ರಹಿಸಿರುವ ಸಾಕ್ಷ್ಯಗಳಲ್ಲಿ ಭಾರತೀಯ ದಂಡ ಸಂಹಿತೆ ಕಲಂ 201ರ ಅನುಸಾರ ಕೊಲೆಗೆ ಬಳಸಲಾಗಿದೆ ಎಂಬ ಆಯುಧವನ್ನೇ ವಶಪಡಿಸಿಕೊಂಡಿಲ್ಲ.
ಅಪರಾಧ ನಡೆದಿದ್ದ ಸ್ಥಳದಲ್ಲಿ ರಕ್ತದ ಕಲೆ, ಚಪ್ಪಲಿ, ಮೆಣಸಿನ ಪುಡಿ, ಚಾಪೆ, ಒಂದು ಸ್ಯಾಮ್‌ಸಂಗ್ ಫೋನ್ ಅನ್ನು ಮಹಜರು ಮಾಡಲಾಗಿದೆಯೇ ಹೊರತಾಗಿ ಬೇರಾವುದೇ ಸಾಕ್ಷ್ಯಗಳಿಲ್ಲ. ಆರೋಪ ಸರಿಯಲ್ಲ ಎಂದರು. ಅಲ್ಲದೇ ಅರ್ಜಿದಾರರ ಪರ ವಕೀಲರು ತಮ್ಮ ವಾದ ಮುಂದುವರಿಸಲು ಮತ್ತಷ್ಟು ಸಮಯ ಕೋರಿದ ಕಾರಣ ಎಂದು ವಿಚಾರಣೆಯನ್ನು ಇದೇ ಫೆಬ್ರವರಿ 19ಕ್ಕೆ ಮುಂದೂಡಲಾಯಿತು.
ನ್ಯಾಯಪೀಠ, ಅಪರಾಧಿಕ ಪ್ರಕರಣಗಳಲ್ಲಿ ಸಾಂದರ್ಭಿಕ ಪುರಾವೆಗಳಿಂದಲೂ ಕೇಸನ್ನು ತೀರ್ಮಾನಿಸಬಹುದಲ್ಲವೇ?, ಜನಪ್ರತಿನಿಧಿಗಳ ವಿರುದ್ಧದ ಅಪರಾಧಿಕ ಪ್ರಕರಣಗಳು ಗಂಭೀರ ಎಂಬ ಕಾರಣಕ್ಕಾಗಿಯೇ, ಸುಪ್ರೀಂಕೋರ್ಟ್, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವನ್ನು ನಿಯೋಜಿಸಿದೆ ಎಂದು ಹೇಳಿತು.
ಪ್ರಕರಣದ ಹಿನ್ನೆಲೆ: ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್ 15ರಂದು ಯೋಗೀಶ್ ಗೌಡ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಸಿಸಿಎಚ್-82ರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಟ್ಟು 21 ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಪಡಿಸಿ 2024ರ ಜನವರಿ 29ರಿಂದ ಫೆಬ್ರವರಿ 1ರವರೆಗೆ ನಿಯಮಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಆದೇಶಿಸಿತ್ತು.
ಈ ಪ್ರಕರಣದ ಆರೋಪಿಯಾಗಿರುವ ವಿನಯ್ ಕುಲಕರ್ಣಿಯನ್ನು ಸಿಬಿಐ ಬಂಧಿಸಿತ್ತು. ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. 2023ರ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದಾರೆ.
ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರು ಮಾಡುವಾಗ ಸುಪ್ರೀಂಕೋರ್ಟ್ ಧಾರವಾಡಕ್ಕೆ ಭೇಟಿ ನೀಡುವಂತಿಲ್ಲ ಎಂದು ಷರತ್ತು ಹಾಕಿದೆ. ಚುನಾವಣೆ ಸಮಯದಲ್ಲಿಯೂ ಸಹ ಅವರು ಧಾರವಾಡಕ್ಕೆ ಭೇಟಿ ನೀಡಿಲ್ಲ.











Click it and Unblock the Notifications