ಕೊಪ್ಪಳ : 18 ಕೋಟಿ ನಿಧಿಗಾಗಿ ಬಾಲಕಿ ಬಲಿ ಕೊಟ್ಟರು
ಕೊಪ್ಪಳ, ಫೆ. 18 : ಕೊಪ್ಪಳದಲ್ಲಿ ನಡೆದ 5 ವರ್ಷದ ಬಾಲಕಿ ಕೊಲೆ ಪ್ರಕರಣದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ನಿಧಿಯ ಆಸೆಗಾಗಿ ಬಾಲಕಿಯನ್ನು ಬಲಿ ನೀಡಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮದ ಶರಣಪ್ಪ ಹಾಗೂ ಉಮಾದೇವಿ ದಂಪತಿಯ ಮಗಳಾದ ಗಾಯತ್ರಿ (5) ಜ.26ರ ಸಂಜೆ ಕಾಣೆಯಾಗಿದ್ದಳು. ಫೆ.4ರಂದು ಬಾಲಕಿ ಶವ, ಗ್ರಾಮದ ಅನಿತಾ ಪೂಜಾರ್ ಅವರ ಮನೆಯ ಶೌಚಾಲಯದಲ್ಲಿ ಪತ್ತೆಯಾಗಿತ್ತು.

ಗಾಯತ್ರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ ಬಂಟನಾಳ, ಶಿವಪ್ಪ ಡೊಳ್ಳಿನ್, ವೀರೇಶ ಉಪ್ಪಾರ, ಹನುಮಂತ ವಡ್ಡರಕಲ್, ಶಂಕ್ರಪ್ಪ, ಲಕ್ಷ್ಮಣಗೌಡ ಪಾಟೀಲ್, ಯೋಗಪ್ಪ ಪೂಜಾರ್, ಹನುಮಂತ ಹಟ್ಟಿ ಹಾಗೂ ಮಹೇಂದ್ರ ರೆಡ್ಡಿ ಅವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ.ರಾಜಾ ಪಿ. ತಿಳಿಸಿದ್ದಾರೆ. [ಕೊಪ್ಪಳ : ಅಪರ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಸಲ್ಲಿಸಿ]
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ನಾಲ್ವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರಿಂದ ಬಾಲಕಿ ಅಪಹರಣಕ್ಕೆ ಬಳಸಿದ್ದ ಕಾರು, ಆರೋಪಿಗಳ ಬೈಕ್ ಮತ್ತು ಪೂಜಾ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. [ಕೊಪ್ಪಳ : ಸುಟ್ಟ ಗಾಯವಾಗಿದ್ದ ಶಿವಾನಂದ ಶ್ರೀ ಇನ್ನಿಲ್ಲ]
ನಿಧಿಯ ಆಸೆಗಾಗಿ ಬಲಿ : ಹೊಸಳ್ಳಿಯಲ್ಲಿ ಚಿಕ್ಕ ಹೋಟೆಲ್ ನಡೆಸುತ್ತಿರುವ ಶರಣಪ್ಪ ಹಾಗೂ ಉಮಾದೇವಿ ದಂಪತಿಯ ಮಗಳಾದ ಗಾಯತ್ರಿ ಜ.26ರಂದು ಕಾಣೆಯಾಗಿದ್ದಳು. ಫೆ.4ರಂದು ಆಕೆಯ ಶವ ಅದೇ ಗ್ರಾಮದ ಅನಿತಾ ಪೂಜಾರ್ ಅವರ ಮನೆಯ ಶೌಚಾಲಯದಲ್ಲಿ ಪತ್ತೆಯಾಗಿತ್ತು.
ಗ್ರಾಮದ ಶಾಂತಿಲಾಲ್ ಎನ್ನುವವರ ಜಮೀನಿನಲ್ಲಿ 18 ಕೋಟಿ ಮೌಲ್ಯದ ನಿಧಿ ಇದೆ. ಇದನ್ನು ಹೊರತೆಗೆಯಲು ಪೂಜೆ ಮಾಡಬೇಕು, ಬಾಲಕಿಯೊಬ್ಬಳನ್ನು ಬಲಿ ನೀಡಬೇಕು ಎಂದು ಕೇರಳ ಮೂಲದ ಜ್ಯೋತಿಷಿ ಹೇಳಿದ್ದ ಮಾತನ್ನು ನಂಬಿದ ಆರೋಪಿಗಳು ಗಾಯತ್ರಿಯನ್ನು ಅಪಹರಿಸಿದ್ದರು.
ಮನೆಯ ಬಳಿ ಆಟವಾಡುತ್ತಿದ್ದ ಗಾಯತ್ರಿಯನ್ನು ಅಪಹರಿಸಿದ್ದ ಬಂಧಿತ ಆರೋಪಿ ಮಹೇಂದ್ರ ರೆಡ್ಡಿ, ತನ್ನ ಕೋಣೆಯಲ್ಲಿ ಆಕೆಯನ್ನು ಕೂಡಿ ಹಾಕಿದ್ದ. ಜಮೀನಿನಲ್ಲಿ ಫೆ.3ರಂದು ಜಮೀನಿನಲ್ಲಿ ಹೋಮ, ಪೂಜೆ ಮಾಡಿ ಬಾಲಕಿ ರಕ್ತವನ್ನು ತೆಗೆದಿದ್ದರು.
ಊಟ, ನೀರು ಇಲ್ಲದೇ ಬಳಲಿದ್ದ ಬಾಲಕಿ ರಕ್ತ ತೆಗೆದ ನಂತರ ಮೃತಪಟ್ಟಿದ್ದಳು. ಕೊಲೆ ಆರೋಪವನ್ನು ಗ್ರಾಮದ ಅನಿತಾ ಅವರ ಮೇಲೆ ಹೊರಿಸಲು ಮುಂದಾದ ಆರೋಪಿಗಳು ಅವರು ಹೊಸದಾಗಿ ನಿರ್ಮಿಸುತ್ತಿದ್ದ ಮನೆಯ ಶೌಚಾಲಯದಲ್ಲಿ ಶವವನ್ನು ಎಸೆದು ಹೋಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ 9 ಜನರನ್ನು ಬಂಧಿಸಲಾಗಿದ್ದು ವಿಚಾರಣೆ ಮುಂದುವರೆದಿದೆ. ಬಾಲಕಿ ಬಲಿ ನೀಡಬೇಕು ಎಂದು ಹೇಳಿದ ಕೇರಳ ಮೂಲದ ಜ್ಯೋತಿಷಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.












Click it and Unblock the Notifications