ಜೆ ಪಿ ನಡ್ಡಾ ಕಾರ್ಯಕ್ರಮಕ್ಕೆ ಸಚಿವ ವಿ ಸೋಮಣ್ಣ ಗೈರು! ಕಾರಣವೇನು?
ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ವಿ. ಸೋಮಣ್ಣ ಜತೆಗೆ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರೂ ಗೈರಾಗಿರುವುದು ಅಚ್ಚರಿ ಮೂಡಿಸಿದೆ
ಚಾಮರಾಜನಗರ ,ಮಾರ್ಚ್ 2: ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎಂದು ಪಣತೊಟ್ಟಿರುವ ಬಿಜೆಪಿ ಭರ್ಜರಿ ಸಿದ್ದತೆಯನ್ನ ಮಾಡಿಕೊಳ್ಳುತ್ತಿದೆ.
ಈಗಾಗಲೇ ಜನ ಸಂಕಲ್ಪ ಯಾತ್ರೆ, ವಿಜಯಸಂಕಲ್ಪ ಯಾತ್ರೆ ಮೂಲಕ ರಾಜ್ಯಾದ್ಯಂತ ಪ್ರವಾಸವನ್ನ ಕೈಗೊಂಡಿರುವ ಬಿಜೆಪಿ ನಾಯಕರು, ಮಾರ್ಚ್ 1 ರಿಂದ ರಾಜ್ಯದ ನಾಲ್ಕು ಭಾಗದಲ್ಲಿ ಯಾತ್ರೆಯನ್ನ ಆರಂಭಿಸಿದ್ದಾರೆ. ಈ ನಡುವೆ ಚಾಮರಾಜನಗರದಲ್ಲಿ ನಿನ್ನೆ ನಡೆದ ( ಮಾರ್ಚ್ 1) ವಿಜಯಸಂಕಲ್ಪ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಚಾಲನೆ ನೀಡಿದ್ದಾರೆ. ಆದರೆ ಇಲ್ಲಿ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿಯಾಗಿರುವ ವಿ.ಸೋಮಣ್ಣ ಅವರು ಈ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಮರಾಜನಗರಕ್ಕೆ ಆಗಮಿಸಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು ವಿಜಯಸಂಕಲ್ಪ ಕಾರ್ಯಕ್ರಮದಿಂದ ದೂರ ಉಳಿದದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.
ಈಗಾಗಲೇ ಯಾತ್ರೆಗಾಗಿ ರಚಿಸಲಾಗಿರುವ ತಂಡದಲ್ಲಿ ಸಚಿವ ವಿ.ಸೋಮಣ್ಣ ಅವರಿದ್ದರೂ ನಿನ್ನೆ ನಡೆದ ಕಾರ್ಯಕ್ರಮಕ್ಕೆ ಗೈರಾಗಿರುವುದು ಹಲವು ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಟ್ಟಿದೆ. ಒಂದು ಕಡೆ ಜಿಲ್ಲಾ ಉಸ್ತುವಾರಿಯಾಗಿರುವ ಸೋಮಣ್ಣ ಅವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನ ಮಾಡಿದ್ದು, ಅಲ್ಲಿ ಸಚಿವ ವಿ.ಸೋಮಣ್ಣ ಅವರಿಗೆ ತಮ್ಮದೇ ಆದ ಹಿಡಿತವನ್ನ ಹೊಂದಿದ್ದಾರೆ.
ಇನ್ನೂ ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ವಿವಿಧ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿಯೂ ತಮ್ಮನ್ನ ಗಣನೆಗೆ ತೆಗೆದುಕೊಂಡಿಲ್ಲ ಎಂಬ ಅಸಮಾಧಾನ ವಿ ಸೋಮಣ್ಣ ಅವರಿಗಿದೆ. ಇತ್ತ ಈ ಬಾರಿ ಚುನಾರಾಜಗರದಲ್ಲಿ ಪ್ರಬಲ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಕೆಆರ್ ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ ಅವರನ್ನು ಕ್ಷೇತ್ರಕ್ಕೆ ಕಳುಹಿಸಿ ಪ್ರಚಾರವನ್ನ ಮಾಡಿಸಲಾಗುತ್ತಿದೆ. ಈಗಾಗಲೇ ಹೈಕಮಾಂಡ್ ಒಪ್ಪಿಗೆ ನೀಡಿದ್ರೆ ವಿ.ಸೋಮಣ್ಣ ಚಾಮರಾಜನಗರದಲ್ಲಿ ಸ್ಪರ್ಧೆ ನಡೆಸಬೇಕು ಸಿದ್ದತೆಯನ್ನ ನಡೆಸಿದ್ರು.

ಚಾಮರಾಜನಗರದಲ್ಲಿ ತಾನು ಸ್ಪರ್ಧೆ ಮಾಡಿ ಗೋವಿಂದರಾಜನಗರ ನಗರದಲ್ಲಿ ತಮ್ಮ ಪುತ್ರ ಅರುಣ್ ಸೋಮಣ್ಣ ಅವರಿಗೆ ಬಿಟ್ಟು ಕೊಡುವ ನಿರ್ಧಾರವನ್ನ ಮಾಡಿದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಂ. ರುದ್ರೇಶ್ ಚಾಮರಾಜನಗರ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿರುವುದು ವಿ.ಸೋಮಣ್ಣ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಇನ್ನೊಂದು ಮೂಲದ ಪ್ರಕಾರ, ವಿಜಯ ಸಂಕಲ್ಪ ಯಾತ್ರೆಯ ಈ ಕಾರ್ಯಕ್ರಮದ ಉಸ್ತುವಾರಿಯನ್ನು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ವಹಿಸಲಾಗಿದೆ. ತಾವು ಉಸ್ತುವಾರಿ ಇರುವಾಗ ಹೊರ ಜಿಲ್ಲೆಯವರಿಗೆ ಉಸ್ತುವಾರಿ ನೀಡಲಾಗಿದೆ. ಆ ಮೂಲಕ ತಮ್ಮನ್ನು ಕಡೆಗಣಿಸಲಾಗಿದೆ ಎಂಬುದು ಸೋಮಣ್ಣ ಅವರ ಮುನಿಸಿಗೆ ಕಾರಣ ಇರಬಹುದು ಎನ್ನಲಾಗುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ಸೋಮಣ್ಣ ಅವರು ಮಾರ್ಚ್1 ರಂದು ನಡೆದ ವಿಜಯ ಸಂಕಲ್ಪ ಯಾತ್ರೆಯಿಂದ ದೂರ ಉಳಿದರು ಎಂಬ ಮಾತುಗಳು ಕೇಳಿ ಬರುತ್ತಿವೆ.
ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ವಿ. ಸೋಮಣ್ಣ ಜತೆಗೆ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರೂ ಗೈರಾಗಿರುವುದು ಅಚ್ಚರಿ ಮೂಡಿಸಿದ್ದು, ಈ ಬೆಳವಣಿಗೆ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದೆ ಎನ್ನಲಾಗಿದೆ.












Click it and Unblock the Notifications