ರಾಜ್ಯಕ್ಕೆ ರಾಹುಲ್ ಗಾಂಧಿ ಎಂಟ್ರಿ: ಆತ ಎಲ್ಲಿ ಕಾಲಿಡುತ್ತಾನೋ ಕಾಂಗ್ರೆಸ್ ಭಸ್ಮಾ: ಶ್ರೀರಾಮುಲು
ರಾಜ್ಯಕ್ಕೆ ಆಗಮಿಸುತ್ತಿರುವ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ವಿರುದ್ದ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ವಿಜಯನಗರ, ಮಾರ್ಚ್17: ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಇತ್ತ ಚುನಾವಣಾ ಪ್ರಚಾರ ಹಿನ್ನೆಲೆ ರಾಜ್ಯಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸುತ್ತಿದ್ದು, ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ದ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.
ಗುರುವಾರ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಚಿವ ಶ್ರೀರಾಮುಲು ಮಾತನಾಡಿ, ರಾಹುಲ್ ಗಾಂಧಿ ರಾಜ್ಯಕ್ಕೆ ಬರ್ತಾ ಇದ್ದಾರೆ. ಆತ ಎಲ್ಲಿ ಕಾಲಿಡುತ್ತಾನೋ ಕಾಂಗ್ರೆಸ್ ಭಸ್ಮಾ ಆಗುತ್ತದೆ. ಕಾಂಗ್ರೆಸ್ ನವರಿಗೂ ಭಯ ಎಲ್ಲಿ ಭಸ್ಮ ಆಗುತ್ತೋ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನವರು ಬಸ್ ಯಾತ್ರೆಯ ಪಂಚರ್ ಹಾಕಿಕೊಂಡು ಕೂತವರು ಭ್ರಷ್ಟಾಚಾರ ದ ಆರೋಪ ಮಾಡ್ತಾ ಇದಾರೆ. ನಿಮ್ಮ ನಾಯಕರೇ ಭ್ರಷ್ಟಾಚಾರ ಮಾಡಿ ಬೇಲ್‌ಮೇಲೆ ಹೊರಗೆ ಇದಾರೆ, ಇವರು ನಮ್ಮ ಮೇಲೆ ಭ್ರಷ್ಟಾಚಾರ ದ ಆರೋಪ ಮಾಡ್ತಾ ಇದಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವಂತಾಗಿದೆ ಕಾಂಗ್ರೆಸ್ ನವರ ಪರಿಸ್ಥಿತಿ ಎಂದ ಅವರು ಎಐಸಿಸಿ ಅಧ್ಯಕ್ಷ ರಾಗಿ ಮಲ್ಲಿಕಾರ್ಜುನ್ ಖರ್ಗೆಯವರನ್ನು ನೇಮಕ ಮಾಡಿ ಹರಕೆ ಕುರಿ ಮಾಡಿದ್ದಾರೆ ಎಂದು ಹೇಳಿದರು
ರಾಜ್ಯದ ನಾಲ್ಕು ಯಾತ್ರೆಗಳು ಪ್ರವಾಸ ಮಾಡುತ್ತಿದ್ದೇವೆ. ಎಲ್ಲಾ ಯಾತ್ರೆಗಳು ದಾವಣಗೆರೆಯಲ್ಲಿ ಮಹಾ ಸಂಗಮವಾಗುತ್ತವೆ. ಪ್ರಧಾನಿ ನರೇಂದ್ರ ಮೋದಿಯವರು ಮಹಾಸಂಗಮ ಸಮವೇಶಕ್ಕೆ ಬರಲಿದ್ದಾರೆ. ಸಂಕಲ್ಪ ಯಾತ್ರೆ ನೋಡ್ತಾ ಇದ್ರೆ ಈ ಕಾಂಗ್ರೆಸ್ ನ ಬಸ್ ಯಾತ್ರೆ ಪಂಚರ್ ಆಗಿದೆ. ನಮ್ಮ ಸಂಕಲ್ಪ ಯಾತ್ರೆಯನ್ನು ನೋಡಿ ಹೆದರಿ ಕೂತಿದ್ದಾರೆ ಎಂದು ಕಾಂಗ್ರೆಸ್ ಬಸ್ ಯಾತ್ರೆಯನ್ನು ಸಚಿವ ಶ್ರೀ ರಾಮುಲು ಗೇಲಿ ಮಾಡಿದರು.

ಕರುಣಾಕರ್ ರೆಡ್ಡಿ ಗೆ ಟಿಕೆಟ್ ನೀಡಿದರೆ ಎಲ್ಲಾರೂ ಸೇರಿ ಕೆಲಸ ಮಾಡುತ್ತಾರೆ. ಬೇರೆ ಪಾರ್ಟಿಯಂತೆ ಅಕಾಂಕ್ಷಿಗಳಂತೆ ಮಾಡೋದಿಲ್ಲ, ಎಲ್ಲಾ ಒಟ್ಟಾಗಿ ಒಂದಾಗಿ ಗೆಲ್ಲಿಸುವ ಕೆಲಸ ಮಾಡುತ್ತೇವೆ
ಶ್ರೀರಾಮುಲು ರಾಜಕೀಯಕ್ಕಾಗಿ ಮೀಸಲಾತಿ ಬಗ್ಗೆ ಮಾತನಾಡುತ್ತಾರೆ ಎನ್ನುತ್ತಿದ್ದರು. ಆದರೆ, ನಾನು ರಾಜಕೀಯಕ್ಕಾಗಿ ಮಾತನಾಡುವ ಮನುಷ್ಯ ಅಲ್ಲ. ಮಾತಿನಂತೆ ಕೇಂದ್ರ ರಾಜ್ಯ ಸರ್ಕಾರದಿಂದ ಮೀಸಲಾತಿ ಹೆಚ್ವಿಸಲಾಗಿದೆ ಎಂದು ಹೇಳಿದರು.
ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ 15% ವೇತನ ಹೆಚ್ಚಳ ಮಾಡಲಾಗಿದೆ. ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡುತ್ತೇವೆ. ರಾಜ್ಯದ ಜನತೆಗೆ ಸಾಕಷ್ಟು ಅಭಿವೃದ್ದಿ ಕೆಲಸವನ್ನ ನಮ್ಮ ಬಿಜೆಪಿ ಸರ್ಕಾರ ನೀಡಿದೆ. ನಮ್ಮ ಸರಕಾರ ಜನರ ಸಂಕಷ್ಟಗಳಿಗೆ ನೆರವಾಗಿದೆ. ಮುಂದೆ ಸೂರ್ಯ ಚಂದ್ರ ಬರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ನಮ್ಮ 150 ಸ್ಥಾನಗಳನ್ನ ಪಡೆದು ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications