'ರಾಗಾ ಸುಳ್ಳಿನ ಟೈರ್ ಪಂಚರ್', SIR ವಿಚಾರದಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆ ಉಲ್ಲೇಖಿಸಿ ಬಿಜೆಪಿ ಸವಾಲು
ಬೆಂಗಳೂರು: ದೆಹಲಿಯಲ್ಲಿ SIR ವಿರುದ್ಧ ಸಂಸದ ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನೆಗೂ ಮುನ್ನ ಅವರದ್ದೇ ಪಕ್ಷದ ಕರ್ನಾಟಕ ಸಚಿವ ಸತೀಶ್ ಜಾರಕಿಹೊಳಿ ಅವರು ನೀಡಿದ ಹೇಳಿಕೆ ಹೆಚ್ಚು ಚರ್ಚೆ ಆಗುತ್ತಿದೆ. ಎಸ್‌ಐ ಆರ್ ಕುರಿತು ಕಾಂಗ್ರೆಸ್ ನಾಯಕರು ಮತ್ತು ರಾಹುಲ್ ಗಾಂಧಿ ಅವರ ನಾಟವಾಡುತ್ತಿರುವುದಕ್ಕೆ ಸಚಿವರ ಹೇಳಿಕೆಯೇ ಕನ್ನಡಿ ಹಿಡಿದಂತಾಗಿದೆ ಎಂದು ಬಿಜೆಪಿ ಟೀಕಿಸಿದೆ. ತಮ್ಮ ಹೇಳಿಕೆಗೆ ಸಚಿವರು ಶುಕ್ರವಾರ ಸ್ಪಷ್ಟನೆ ಸಹ ನೀಡಿದ್ದಾರೆ.
ಚುನಾವಣಾ ಅಕ್ರಮ, ಮತಗಳ್ಳತನ, SIR ವಿರುದ್ಧ ಮತ್ತು ಕೇಂದ್ರ ಚುನಾವಣೆ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಆಗ್ರಹಿಸಿ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ನೇತೃತ್ವದ ನವೆಂಬರ್ 1ರಂದು 'ದೆಹಲಿ ಚಲೋ' ಮತ್ತು ಬೃಹತ್ ಪ್ರತಿಭಟನೆ ನಡೆಯಲಿದೆ. ಇಂಡಿಯಾ ಮೈತ್ರಿಕೂಟದ ನಾಯಕರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸಲು ಪ್ಲ್ಯಾನ್ ಮಾಡಿದ್ದಾರೆ.

'ರಾಗಾ' ಸುಳ್ಳಿನ ಟೈರ್ ಪಂಚರ್!
ಸಚಿವ ಸತೀಶ್ ಜಾರಕಿಹೊಳಿ ಅವರು 'ರಾಜ್ಯದಲ್ಲಿ ಎಸ್‌ಐಆರ್ ಸಮರ್ಪಕವಾಗಿ ನಡೆದಿದೆ' ಎಂಬಂತೆ, ಎಲ್ಲವು ಸರಿ ಇದೆ ಎಂಬಂತೆ ಹೇಳಿಕೆ ನೀಡಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರಕ್ಕೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, 'ರಾಹುಲ್ ಗಾಂಧಿ ಅವರ ಸುಳ್ಳಿನ ಟೈರ್ ಅನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಪಂಚರ್ ಮಾಡಿದ್ದಾರೆ'
'ಎಸ್ ಐಆರ್ ಬಗ್ಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ನಾಟಕೀಯ ಪ್ರಹಸನಕ್ಕೆ ಈಗ ಸ್ವತಃ ಅವರದ್ದೇ ಸಂಪುಟದ ಸಚಿವ ಸತೀಶ್ ಜಾರಕಿಹೊಳಿ ಕನ್ನಡಿ ಹಿಡಿದಿದ್ದಾರೆ ರಾಜ್ಯದಲ್ಲಿ ಎಸ್.ಐ.ಆರ್ (SIR) ಪ್ರಕ್ರಿಯೆ ಅತ್ಯಂತ ಸಮರ್ಪಕವಾಗಿ ನಡೆದಿದೆ ಎಂದು ಜಾರಕಿಹೊಳಿ ನೀಡಿರುವ ಹೇಳಿಕೆ, ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಬೀದಿಯಲ್ಲಿ ನಿಂತು ನಾಟಕವಾಡುತ್ತಿರುವ ಕಾಂಗ್ರೆಸ್ ನಾಯಕರ ಬೂಟಾಟಿಕೆಯನ್ನು ಸಂಪೂರ್ಣವಾಗಿ ಬಯಲು ಮಾಡಿದೆ. ಸ್ವತಃ ಕಾಂಗ್ರೆಸ್ ಸಚಿವರೇ "ಕರ್ನಾಟಕದಲ್ಲಿ SIR ಪ್ರಕ್ರಿಯೆಯನ್ನು ನಾವು ವಿರೋಧಿಸಿಲ್ಲ, ಇಲ್ಲಿ ಎಲ್ಲವೂ ಸರಿಯಾಗಿ ನಡೆದಿದೆ" ಎಂದು ಒಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಸಚಿವರ ವಜಾ ಕುರಿತು ಸಿಎಂಗೆ ಸವಾಲು
"ಹಾಗಾದರೆ ದೆಹಲಿಗೆ ಹೋಗಿ ಬೃಹತ್ ಪ್ರತಿಭಟನೆ ಹೆಸರಿನಲ್ಲಿ ರಾಜ್ಯದ ಜನತೆಗೆ ಮತ್ತು ದೇಶಕ್ಕೆ ಸುಳ್ಳು ಹರಡುತ್ತಿರುವುದು ಏಕೆ? ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ನೇರವಾಗಿ ಪ್ರಶ್ನಿಸಿದ್ದಾರೆ.
ಹಿಂದೆ ಪಕ್ಷದ ನಿಲುವಿನ ವಿರುದ್ಧ ಮಾತನಾಡಿದರೆಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದಂತೆ, ಈಗ ನಿಮ್ಮ ರಾಹುಲ್ ಗಾಂಧಿ ಅವರು ಸುಳ್ಳನ್ನು ಬಯಲು ಮಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಅವರನ್ನೂ ಸಂಪುಟದಿಂದ ವಜಾ ಮಾಡುವ ಧೈರ್ಯ ತೋರಿಸುತ್ತೀರಾ? ಎಂದು ಸವಾಲು ಹಾಕಿದರು.
ಎಸ್‌ಐಆರ್ ಕುರಿತಂತೆ ಕಾಂಗ್ರೆಸ್ ನಾಯಕರ ಬೂಟಾಟಿಕೆ ಮತ್ತು ಡಬಲ್ ಸ್ಟ್ಯಾಂಡರ್ಡ್ ಈಗ ರಾಜ್ಯದ ಜನತೆಗೆ ಸಂಪೂರ್ಣವಾಗಿ ಅರ್ಥವಾಗಿದೆ' ಎಂದು ಟಾಂಗ್ ಕೊಟ್ಟಿದ್ದಾರೆ.
ಸತೀಶ್ ಜಾರಕಿಹೊಳಿ ಕೊಟ್ಟ ಸ್ಪಷ್ಟನೆ ಏನು!
SIR ಕುರಿತು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ! ಎಂದು ಶುಕ್ರವಾರ ಸತೀಶ್ ಜಾರಕಿಹೊಳಿ ಅವರು ಎಕ್ಸ್‌ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. SIR ಬಗ್ಗೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಫಾರಂ-7 ಮೂಲಕ ಕಾಂಗ್ರೆಸ್ ಬೆಂಬಲಿಗ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸುವ ಬಿಜೆಪಿಯ ಷಡ್ಯಂತ್ರವನ್ನು ನಮ್ಮ ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿ ಅವರ ಹೋರಾಟ ಹಾಗೂ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಫಲಗೊಳಿಸಲಾಗಿದೆ ಎಂಬುದು ನನ್ನ ಹೇಳಿಕೆಯ ಉದ್ದೇಶವಾಗಿತ್ತು. ಆದರೆ, SIR ಪ್ರಕ್ರಿಯೆ ಸರಿಯಾಗಿದೆ ಎಂಬ ಅರ್ಥದಲ್ಲಿ ನಾನು ಹೇಳಿಕೆ ನೀಡಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದಲ್ಲಿ ಫಾರಂ-7 ಮೂಲಕ ಅರ್ಹ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನವನ್ನು ನಾವು ವಿಫಲಗೊಳಿಸಿದ್ದೇವೆ. ಈ ಹೋರಾಟಕ್ಕೆ ನಮ್ಮ ಬೆಳಗಾವಿ ಜಿಲ್ಲೆಯಿಂದಲೇ ಚಾಲನೆ ನೀಡಿ ಯಶಸ್ವಿಯಾಗಿ ಎದುರಿಸಿದ್ದೇವೆ.
ಅರ್ಹ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನದ ವಿರುದ್ಧ ನನ್ನ ನಿಲುವು ಮೊದಲಿನಿಂದಲೂ ದೃಢವಾಗಿದೆ. ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕುವ ಪ್ರಯತ್ನಗಳನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮತದಾನದ ಹಕ್ಕಿನ ರಕ್ಷಣೆಗಾಗಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರೊಂದಿಗೆ ದೃಢವಾಗಿ ನಿಲ್ಲುವುದಾಗಿ ತಿಳಿಸಿದ್ದಾರೆ.


Click it and Unblock the Notifications
