ಸಂಶಿ ಪಿಡಿಓ ಅಮಾನತ್ತಿಗೆ ಸಚಿವ ಸಂತೋಷ ಲಾಡ್ ಆದೇಶ
ಧಾರವಾಡ : ಕಳೆದ ಒಂದು ತಿಂಗಳಿನಿಂದ ಅನಧಿಕೃತ ರಜೆ ಉಳಿದಿರುವ ಹಾಗೂ ಅತಿವೃಷ್ಟಿ ಸಮಯದಲ್ಲೂ ಸ್ಪಂದಿಸದಿರುವ ಕುಂದಗೋಳ ತಾಲೂಕಿನ ಸಂಶಿ ಗ್ರಾಮ ಪಂಚಾಯತ ಪಿಡಿಓ ನಾಗರಾಜ ಗಿಣಿವಾಲ ಅವರನ್ನು ಅಮಾನತ್ತು ಮಾಡಲು ತಕ್ಷಣ ಕ್ರಮವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜಿಲ್ಲಾ ಪಂಚಾಯತ ಸಿಇಓ ಅವರಿಗೆ ಆದೇಶಿಸಿದರು.
ಮೇಲಾಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡದೇ, ಅನುಮತಿ ಪಡೆಯದೇ, ಕಳೆದ ಒಂದು ತಿಂಗಳಿನಿಂದ ಸಂಶಿ ಗ್ರಾಮ ಪಂಚಾಯತ ಪಿಡಿಓ ಕೆಲಸಕ್ಕೆ ಗೈರಾಗಿದ್ದಾರೆ. ಅವರನ್ನು ತಕ್ಷಣ ಅಮಾನತ್ತು ಮಾಡಬೇಕು. ಮತ್ತು ಈ ಕುರಿತು ಜಿಲ್ಲಾ ಪಂಚಾಯತ ಸಿಇಓ ಅವರಿಗೆ ಮಾಹಿತಿ ನೀಡದೆ, ಉದಾಸೀನತೆ ತೋರಿದ ಕುಂದಗೋಳ ತಾಲೂಕು ಪಂಚಾಯತ ಇಓ ಅವರಿಗೂ ಕಾರಣ ಕೇಳಿ ನೋಟಿಸ್ ನೀಡಬೇಕು ಎಂದು ಉಸ್ತುವಾರಿ ಸಚಿವರು ತಿಳಿಸಿದ್ದಾರೆ.

ಕಠಿಣ ಕ್ರಮ
ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಸಾಕಷ್ಟು ಜನರಿಗೆ ತೊಂದರೆ ಆಗುತ್ತಿದೆ. ಮನೆಗಳು ಹಾನಿಯಾಗಿದೆ. ಜನ ಜೀವನ ಅಸ್ತವ್ಯಸ್ತವಾಗುವ ಸಮಯದಲ್ಲಿ ಸ್ಥಳೀಯ ಅಧಿಕಾರಿಗಳು ಖುದ್ದು ಹಾಜರಿದ್ದು, ಸರಿಯಾದ ವ್ಯವಸ್ಥೆ ಕಲ್ಪಿಸಬೇಕು. ಇಂತಹ ಸಮಯದಲ್ಲಿ ಸಂಬಂಧಿಸಿದ ಅಧಿಕಾರಿಗಳು ರಜೆ, ಬೇಜವಾಬ್ದಾರಿತನ, ಕರ್ತವ್ಯ ಲೋಪ ತೊರಿದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜೂನ್, ಜುಲೈ ತಿಂಗಳ ಮಳೆಯಿಂದ ಜನರಿಗೆ ಸಾಕಷ್ಟು ತೊಂದರೆ ಆಗಿದೆ. ಆಗಸ್ಟ್ ತಿಂಗಳಲ್ಲೂ ಅತಿ ಮಳೆ ಆಗುವ ಮುನ್ಸೂಚನೆ ಇದೆ. ಗ್ರಾಮಮಟ್ಟದಿಂದ ಜಿಲ್ಲಾಮಟ್ಟದವರೆಗಿನ ಪ್ರತಿ ಅಧಿಕಾರಿ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಬೇಕು. ತಹಶೀಲ್ದಾರ ಮತ್ತು ಇಓಗಳು ಜಂಟಿಯಾಗಿ ತಾಲೂಕು ಸುತ್ತಬೇಕು. ಜನರಲ್ಲಿ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಚಿವರು ತಿಳಿಸಿದರು.
ಮುನ್ನೆಚ್ಚರಿಕೆ ನೀಡಿ
ಪ್ರತಿ ಗ್ರಾಮ ಮತ್ತು ನಗರದ ವಾರ್ಡಗಳಲ್ಲಿ ಸಂಬಂಧಿಸಿದ ಸ್ಥಳೀಯ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ, ಹಳೆಯದಾದ, ಕಚ್ಚಾ ಮತ್ತು ಸೋರುತ್ತಿರುವ ಮನೆಗಳ ಸಮೀಕ್ಷೆ ಮಾಡಿ, ಅಲ್ಲಿ ವಾಸವಿರುವ ಕುಟುಂಬಗಳಿಗೆ ಮುನ್ನೆಚ್ಚರಿಕೆ ನೀಡಬೇಕು. ಅಗತ್ಯವಿದ್ದಲ್ಲಿ ಸಮುದಾಯಭವನ ಅಥವಾ ಇತರ ಕಟ್ಟಡಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವರು ನಿರ್ದೇಶಿಸಿದರು.
ರಸ್ತೆ ಹಾಗೂ ಸೇತುವೆಗಳ ಬಗ್ಗೆ ಲೋಕೋಪಯೋಗಿ, ಪಂಚಾಯಾತರಾಜ್ ಇಂಜನಿಯರಿಂಗ್ ಇಲಾಖೆಗಳು ಹೆಚ್ಚು ಗಮನ ಹರಿಸಬೇಕು. ರಸ್ತೆ ಹಾಳಾಗಿ ಅಥವಾ ಸೇತುವೆ ಶೀಥಿಲವಾಗಿ ಜನರ ಸಂಚಾರಕ್ಕೆ, ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ನಿಗಾವಹಿಸಬೇಕು. ಸಮಸ್ಯೆ ಕಂಡುಬಂದಲ್ಲಿ ಲಭ್ಯ ಅನುದಾನ ಬಳಸಿ, ತಕ್ಷಣ ಸಮಸ್ಯೆ ಪರಿಹರಿಸಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಹಾಗೂ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗಿದೆ. ಅತಿ ಮಳೆಯಿಂದಾಗಿ 10 ಮನೆಗಳು ತೀವ್ರ ತರಹದಲ್ಲಿ ಮತ್ತು 433 ಮನೆಗಳು ಭಾಗಶಃ ಹಾನಿಯಾಗಿವೆ. ವಿಎ, ಪಿಡಿಓ ಮತ್ತು ಇಂಜನಿಯರ ಜಂಟಿಯಾಗಿ ಹಾನಿಯಾದ ಮನೆಗಳ ಸಮೀಕ್ಷೆ ಮಾಡುತ್ತಿದ್ದು, ತಹಶೀಲ್ದಾರರ ಮೂಲಕ ವರದಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.












Click it and Unblock the Notifications