Priyank Kharge resignation: ರಾಜೀನಾಮೆ ನೀಡುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಕೇಳಿಬಂದಿದೆ. ಈ ಹಿನ್ನೆಲೆ ಪ್ರಿಯಾಂಕ್ ಅವರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಖಡಕ್ ಉತ್ತರ ನೀಡಿರುವ ಪ್ರಿಯಾಂಕ್, ಬಿಜೆಪಿಯವರು ಏನು ಮಾಡಿದರೂ ರಾಜೀನಾಮೆ ಕೊಡಲ್ಲ ಎಂದಿದ್ದಾರೆ.
ವಿಜಯೇಂದ್ರ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಸುಮ್ಮನೆ ಇಲ್ಲಸಲ್ಲದ ಮಾತನ್ನ ಹೇಳಿ ವಿಜಯೇಂದ್ರ ಮರ್ಯಾದೆ ಕಳೆದುಕೊಳ್ಳೋದು ಏಕೆ? ಈ ಹಿಂದೆ ಮಣಿಕಂಠ ರಾಥೋಡ್ ವಿಚಾರದಲ್ಲಿ ಇದೇ ಬಿಜೆಪಿ ಅವರು ಕಲಬುರಗಿಗೆ ಬಂದು ರಾಜೀನಾಮೆ ಕೇಳಿದ್ದರು. ಆದರೆ ಆಮೇಲೇನಾಯ್ತು? ಕಲಬುರಗಿ ರಿಪಬ್ಲಿಕ್ ಅನ್ನುವ ಬದಲು ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡಿ ಎಂದು ಸವಾಲು ಹಾಕಿದ್ದಾರೆ.

ಅಕ್ಕಿ ಕಳ್ಳತನ, ಹಾಲು ಕಳ್ಳತನದಲ್ಲಿ ಕೇಸ್ ಹಾಕಿಸಿಕೊಂಡಿದ್ದು ಯಾರು? ಮರಳು ಮಾಫಿಯಾ ಮಾಡಿದವರು ಯಾರು? ಐಪಿಎಲ್ ದಂಧೆ ಮಾಡುವ ಶಾಸಕರ ಯಾರು ಎಂಬುದನ್ನು ವಿಜಯೇಂದ್ರ ಇತಿಹಾಸ ನೋಡಿ, ನಂತರ ಮಾತನಾಡಲಿ. ಇನ್ನು ಅವರು ಆರೋಪ ಮಾಡ್ತಿರೋ ರಾಜು ಕಪನೂರು ಬಿಜೆಪಿ ಎಸ್‌ಸಿ ವಿಭಾಗದಲ್ಲಿದ್ದವರು. ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದಿದ್ದಾರೆ. ಅವರ ಆರೋಪಗಳಿಗೆ ನಾವೇನು ಹೆದರಿ ಓಡಿ ಹೋಗುವವರಲ್ಲ. ಎಫ್‌ಎಸ್‌ಎಲ್ ವರದಿ ಬರಲಿ, ತನಿಖೆಯೂ ಆಗಲಿ ಎಂದು ತಿರುಗೇಟು ನೀಡಿದ್ದಾರೆ.
ಅವರದೇ ಪಕ್ಷದ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ಇದೆ, ಅದರ ಬಗ್ಗೆ ಮಾತನಾಡಲಿ. ಮುನಿರತ್ನ ಕೇಸ್, ಸಿ.ಟಿ.ರವಿ ಕೇಸ್ ಬಗ್ಗೆ ಬಿಜೆಪಿ ನಾಯಕರು ಏನು ಹೇಳುತ್ತಾರೆ? ನನ್ನ ರಾಜೀನಾಮೆ ಕೇಳುವ ನೈತಿಕತೆ ಅವರಿಗೆ ಇದೆಯಾ? ಎಂದು ಗುಡುಗಿದ್ದಾರೆ.

ಬಿಜೆಪಿ ತಾಳಕ್ಕೆ ನಾನೇಕೆ ಕುಣಿಯಲಿ? ನಾನು ಯಾವ ಕಾರಣಕ್ಕೂ ರಾಜೀನಾಮೆ ಕೊಡೋದಿಲ್ಲ. ಎಂಟು ಜನ ಆರೋಪಿಗಳ ಪೈಕಿ ಈ ಪ್ರಿಯಾಂಕ್ ಖರ್ಗೆ ಹೆಸರು ಡೆತ್‌ನೋಟ್‌ನಲ್ಲಿ ಇಲ್ಲ. ಬಿಜೆಪಿಯವರು ಹೇಳ್ತಾರೆ ಅಂತ ರಾಜೀನಾಮೆ ಕೊಡೋಕೆ ಆಗುತ್ತಾ? ತನಿಖೆ ನಡೆಯಲಿ ಬಿಡಿ ಎಂದಿದ್ದಾರೆ.
ಒಂದು ಹೆಣ ಬಿದ್ದಾಗ ಬಿಜೆಪಿಗೆ ರಾಜಕೀಯ ಮಾಡಲು ಮುಂದೆ ಬರುತ್ತದೆ. ಆದರೆ ಯಾರಿಗೂ ನ್ಯಾಯ ಕೊಡಿಸುವುದಿಲ್ಲ. ನನಗೆ ನೈತಿಕತೆ ಇರುವ ಕಾರಣಕ್ಕೆ ಬಂದು ಎಲ್ಲರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದೇನೆ. ಮೊದಲು ಅವರು ಆರೋಪ ಮಾಡಿರುವ ಡೆತ್‌ನೋಟ್‌ನಲ್ಲಿ ನನ್ನ ಹೆಸರು ಎಲ್ಲಿದೆ? ಎನ್ನುವುದನ್ನು ನೋಡಲಿ. ಬಿಜೆಪಿಯವರೇ ಖಾಸಗಿಯಾಗಿ ತನಿಖೆ ನಡೆಸುತ್ತಿದ್ದಾರೆ. ಸತ್ಯ, ಸುಳ್ಳನ್ನು ತಿರುಚುವುದರಲ್ಲಿ ಅವರು ನಿಪುಣರು. ಮೊದಲು ಅವರು ಕಲಬುರಗಿ ಶಾಸಕರ ಇತಿಹಾಸ ತಿಳಿದುಕೊಂಡು ಚರ್ಚೆಗೆ ಬರಲಿ ಎಂದು ವಿಜಯೇಂದ್ರ ಹಾಗೂ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

ಬಿಜೆಪಿ ಶಾಸಕರ ಕೊಲೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಗೆ ಸುಪಾರಿ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸರ್ಕಾರವು ಈ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಸಚಿವ ಪ್ರಿಯಾಂಕ್ ಅವರ ಬಲಗೈ ಬಂಟ ರಾಜುವಿನ ಕಿರುಕುಳದಿಂದ ಆತ್ಮಹತ್ಯೆಗೀಡಾದ ಬೀದರ್‌ನ ಗುತ್ತಿಗೆದಾರ ಸಚಿನ್ ಡೆತ್‌ನೋಟ್ ಬರೆದಿದ್ದಾರೆ.
ಡೆತ್‌ನೋಟ್‌ನಲ್ಲಿ ನಮ್ಮ ಪಕ್ಷದ ಶಾಸಕರಾದ ಬಸವರಾಜ್ ಮತ್ತಿಮಡು, ಬಿಜೆಪಿ ನಾಯಕರಾದ ಚಂದು ಪಾಟೀಲ್, ಮಣಿಕಂಠ ರಾಥೋಡ್ ಹಾಗೂ ಆಂದೋಲ ಸ್ವಾಮೀಜಿಯವರ ಹತ್ಯೆಗೆ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ್‌ಗೆ ಸುಪಾರಿ ನೀಡಿರುವ ಆತಂಕಕಾರಿ ಹಾಗೂ ಗಂಭೀರ ಮಾಹಿತಿ ಬಹಿರಂಗವಾಗಿದೆ ಎಂದು ಆರೋಪಿಸಿದ್ದಾರೆ.












Click it and Unblock the Notifications