ಸದ್ದಿಲ್ಲದೇ ನಡೆದಿದ್ಯಾ ಸಿಎಂ ಬದಲಾವಣೆ ಚರ್ಚೆ? ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಕಲಬುರ್ಗಿ, ಸೆಪ್ಟೆಂಬರ್ 09: ಮುಡಾ ಹಗರಣದಿಂದಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ. ಈ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಶುರುವಾಗಿದ್ದು, ಡಿ ಕೆ ಶಿವಕುಮಾರ್, ಎಂ ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಸಿಎಂ ಸ್ಥಾನದ ಮೇಲೆ ಕಣ್ಣೀಟ್ಟಿದ್ದು, ಸದ್ದಿಲ್ಲದೇ ಸಿಎಂ ಬದಲಾವಣೆಯ ಚರ್ಚೆ ನಡೆದಿದ್ಯಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಈ ಕುರಿತು ಮುಖ್ಯಮಂತ್ರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಸಿಎಂ ಬದಲಾವಣೆ ಪ್ರಸ್ತಾಪ ಹೈಕಮಾಂಡ್ ಮುಂದೆ ಇಲ್ಲ. ಅಂತಹ ಪ್ರಸ್ತಾವನೆ ಇದ್ದಿದ್ರೆ ಸ್ವಲ್ಪನಾದ್ರೂ ನಮಗೂ ಗೊತ್ತಾಗುತ್ತಿತ್ತಲ್ಲ. ಸಿಎಂ ಬದಲಾವಣೆ ಊಹಾಪೋಹ ಎಂದು ಸ್ಪಷ್ಟನೆ ನೀಡಿದರು.

ಸಿಎಂ ಬದಲಾವಣೆ ಚರ್ಚೆ ಸಂಪುಟದಲ್ಲಿ ನಡೆದಿಲ್ಲ ಅದು ಮಾಧ್ಯಮಗಳಲ್ಲಿ ಮಾತ್ರ ನಡೆದಿದೆ. ಸಚಿವರಾದ ಎಂಬಿ ಪಾಟೀಲ್ ಹಾಗೂ ಶಿವಾನಂದ್ ಪಾಟೀಲರು ಈ ವಿಚಾರದಲ್ಲಿ ಮಾತನಾಡಿರುವುದು ಗೊತ್ತಿದೆ. ಸಿಎಂ ಖುರ್ಚಿ ಖಾಲಿ ಇಲ್ಲ. ಯಾರೇ ಸಿಎಂ ಆದರೂ ಬೆಂಬಲವಿದೆ ಎಂದಷ್ಟೆ ಹೇಳಿದ್ದಾರೆ ಎಂದರು.
ಸಿದ್ದಾರ್ಥ ಟ್ರಸ್ಟ್ ಗೆ ಭೂಮಿ ಮಂಜೂರು ಪ್ರಕ್ರಿಯೆ ಎಲ್ಲವೂ ಕಾನೂನುಬದ್ಧವಾಗಿ ನಡೆದಿದೆ. ಈ ಬಗ್ಗೆ ಮೊದಮೊದಲು ಜೋರಾಗಿ ಆರೋಪ ಮಾಡಿದ್ದ ವಿರೋದ ಪಕ್ಷದ ನಾಯಕರು ಹಾಗೂ ಬಿಜೆಪಿ ಅಧ್ಯಕ್ಷರು ಈಗ ಮೌನವಾಗಿದ್ದರೆ. ಶಿಕ್ಷಣ ಸಂಸ್ಥೆ ನಡೆಸಲು ಅನಮತಿ ಪಡೆದುಕೊಂಡು ಈಗ ಬಿರಿಯಾನಿ ಹೊಟೇಲ್ ನಡೆಸುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕರು ರಾಜ್ಯ ಪಾಲರಿಗೆ ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ದ ಕೂಡಲೇ ಕ್ರಮ ಜರುಗಿಸುವ ರಾಜ್ಯಪಾಲರು ಈಗ ಏಕೆ ಕ್ರಮ ಜರುಗಿಸಿಲ್ಲ. ಹಾಗೇ ಕುಮಾರಸ್ವಾಮಿ ವಿರುದ್ದದ ದೂರಿನ ಬಗ್ಗೆಯೂ ಕ್ರಮವಿಲ್ಲ ಯಾಕೆ ? ಎಲ್ಲಿ ಬಿಜೆಪಿ ಪಕ್ಷ ಬಲಹೀನವಾಗಿದೆಯೋ ಅಲ್ಲಲ್ಲಿ ರಾಜ್ಯಪಾಲರ ಅಧಿಕಾರವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸದರು.
ಜಿಲ್ಲೆಯಲ್ಲಿ ಇತ್ತೀಚಿಗೆ ಬಿದ್ದ ಮಳೆಯಿಂದಾಗಿ ಹೆಸರು,ತೊಗರಿ, ಉದ್ದು ಬೆಳೆ ಹಾಳಾಗಿದ್ದು, ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸರ್ವೆಗೆ ಸೂಚಿಸಲಾಗಿದೆ. ಈಗಾಗಲೇ 15,000 ರೈತರು ದೂರು ಸಲ್ಲಿಸಿದ್ದು ಸಮೀಕ್ಷೆ ವರದಿ ಬಂದ ನಂತರ ಬೆಳೆ ಹಾಳಾದ ಸಂಪೂರ್ಣ ವಿವರ ದೊರಕಲಿದೆ ಎಂದರು.
ಮಳೆಯಿಂದ ಜಿಲ್ಲೆಯ ರಸ್ತೆಗಳು ಹಾಳಾಗಿದ್ದು ಗುಂಡಿ ಮುಚ್ಚಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಎರಡು ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಸಧ್ಯ ಮಳೆ ಬೀಳುತ್ತಿರುವುದರಿಂದ ಕೆಲಸ ನಡೆಯುತ್ತಿಲ್ಲ.ಸ್ವಲ್ಪ ಮಳೆ ಬಿಡುವಾದ ನಂತರ ಗುಂಡಿ ಮುಚ್ಚುವ ಕೆಲಸ ನಡೆಯಲಿದೆ. ಭೀಮಾ ಬ್ರಿಜ್ ಹಾಗೂ ದಂಡೋತಿ ಬ್ರಿಜ್ ಮೇಲಿನ ರಸ್ತೆ ರಿಪೇರಿಗಾಗಿ ಕೆಆರ್ ಐಡಿ ಎಲ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕಲಬುರಗಿ ಯಲ್ಲಿ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಯ ಕುರಿತಂತೆ ಸಮಗ್ರವಾಗಿ ಚರ್ಚೆ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ಯ ಐವಾನ್ ಶಾಹಿ ಅತಿಥಿಗೃಹದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಸಾಮಾನ್ಯವಾಗಿ ಸಚಿವ ಸಂಪುಟ ಸಭೆಯಲ್ಲಿ ಇಡೀ ರಾಜ್ಯದ ಅಭಿವೃದ್ದಿ ಕುರಿತಂತೆ ಚರ್ಚೆ ನಡೆಯುತ್ತದೆ. ಆದರೆ, ಬಹಳ ವರ್ಷಗಳ ನಂತರ ಕಲಬುರಗಿ ಯಲ್ಲಿ ನಡೆಯುತ್ತಿರುವ ಸಂಪುಟ ಸಭೆಯಲ್ಲಿ ನಮ್ಮ ಭಾಗದ ಜನರ ಆಶಯದಂತೆ ಚರ್ಚೆ ನಡೆಸಿ ಅಭಿವೃದ್ದಿಯ ನೀಲಿನಕ್ಷೆ ತಯಾರಿಸಲಾಗುವುದು ಎಂದರು.
ಪ್ರತ್ಯೇಕ ಸಚಿವಾಲಯ
ಆರ್ಟಿಕಲ್ 371 (J) ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವ ಕುರಿತಂತೆ ಬೇಡಿಕೆ ಎದ್ದಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ಬಗ್ಗೆಯೂ ಕೂಡಾ ಚರ್ಚಿಸಲಾಗುವುದು. ಆರ್ಟಿಕಲ್ 371 (J) ಅಡಿಯಲ್ಲಿ ಈ ಭಾಗದಲ್ಲಿ 22,000 ಇಂಜಿನಿಯರಿಂಗ್ ಹಾಗೂ 2000 ವೈದ್ಯಕೀಯ ಸೀಟು ಹಂಚಿಕೆಯಾಗಿವೆ. ಇದೂ ಕೂಡಾ ಕಟ್ಟುನಿಟ್ಟಿನ ಜಾರಿಯಲ್ಲವೇ? ಈ ಬಗ್ಗೆ ಟೀಕೆಗಳು ಸಹಜ. ಆದರೆ, ನಮ್ಮ ಪ್ರಾಮಾಣಿಕ ಪ್ರಯತ್ನ ನಡೆಯಲಿದೆ ಎಂದರು.
ಹನಿ ಟ್ರ್ಯಾಪ್ ಕಪ್ಪುಚುಕ್ಕೆ
ಜಿಲ್ಲೆಯಲ್ಲಿ ಹನಿಟ್ರ್ಯಾಪ್ ನಡೆದಿರುವ ಕುರಿತಂತೆ ಈಗಾಗಲೇ ದೂರು ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಫಾರೆನ್ಸಿಕ್ ವರದಿ ಕೇಳಲಾಗಿದ್ದು ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಇದೊಂದು ಗಂಭೀರ ಪ್ರಕರಣವಾಗಿದ್ದು ಹೆಚ್ಚಿನ ವಿವರ ಈಗಲೇ ಹೇಳಲು ಆಗದು. " ಹನಿಟ್ರ್ಯಾಪ್ ಕಲಬುರಗಿ ಜಿಲ್ಲೆಗೆ ಒಂದು ಕಪ್ಪುಚುಕ್ಕೆಯಾಗಿದೆ. ಆರೋಪಿಗಳು ಯಾವುದೇ ಸಂಘಟನೆಯವರು ಇರಲಿ ಅಥವಾ ಎಂತದ್ದೆ ವ್ಯಕ್ತಿಗಳಾಗಿರಲಿ, ಪೊಲೀಸ್ ತನಿಖೆ ನಂತರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಲು ಸೆನ್ ಇಲಾಖೆಗೆ ಸೂಚಿಸಲಾಗಿದೆ. ಹನಿಟ್ರ್ಯಾಪ್ ಗೆ ಸಂಬಂಧಿಸಿದಂತೆ ಏನಾದರೂ ದೂರುಗಳಿದ್ದರೆ ನೊಂದವರು ನೇರವಾಗಿ ನನಗೆ ಇಲ್ಲವೇ ನಗರ ಪೊಲೀಸ್ ಕಮೀಷನರ್ ಅವರಿಗೆ ದೂರು ಸಲ್ಲಿಸಲಿ. ಅಂತವರ ವಿವರ ಹಾಗೂ ಗುರುತು ಗೌಪ್ಯವಾಗಿಡಲಾಗುವುದು " ಎಂದರು.
ಜೂಜಾಟಕ್ಕೆ ಕಡಿವಾಣ
ಜಿಲ್ಲೆಯಲ್ಲಿ ನಡೆಯುತ್ತಿದ್ದ ಜೂಜು ಸೇರಿದಂತೆ ಹಲವು ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶೇ 50 ರಷ್ಟು ಕಡಿವಾಣ ಬಿದ್ದಿದೆ. ಸಮಾಜದಲ್ಲಿ ಎಲ್ಲವೂ ಒಮ್ಮೆಲೆ ಸುಧಾರಣೆ ಕಷ್ಟಸಾಧ್ಯ, ಆದರೂ ಇಂತಹ ಚಟುವಟಿಕೆಗಳನ್ನು ಬಂದ್ ಮಾಡಲು ನಮ್ಮ ಪ್ರಾಮಾಣಿಕ ಪ್ರಯತ್ನ ನಡೆದಿರುತ್ತದೆ ಎಂದು ಸಚಿವರು ಹೇಳಿದರು.












Click it and Unblock the Notifications