By election result: ರಾಜ್ಯದ ಜನ ಕೋಮುವಾದ ಬಯಸಲ್ಲ ಎಂಬುದು ಸಾಬೀತು
ಕರ್ನಾಟಕದ ಪ್ರಬುದ್ಧ ಹಾಗೂ ಪ್ರಜ್ಞಾವಂತ ಮತದಾರರು ಪ್ರಗತಿ, ಶಾಂತಿ, ಸೌಹಾರ್ದತೆಯನ್ನು ಬಯಸುತ್ತಾರೆ. ಭವಿಷ್ಯ ರೂಪಿಸುವ ಉದ್ಯೋಗ ಸೃಷ್ಟಿಯನ್ನು ಬಯಸುತ್ತಾರೆಯೇ ಹೊರತು ಕೋಮುವಾದವನ್ನಲ್ಲ ಎಂಬ ಸಂದೇಶವನ್ನು ಮತ್ತೊಮ್ಮೆ ಈ ಚುನಾವಣೆಯ ಮೂಲಕ ನೀಡಿದ್ದಾರೆ ಎಂದು ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಬಗ್ಗೆ ಪ್ರಿಯಾಂಕ್ ಖರ್ಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು, ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವದಿಸಿದ ಮತದಾರರಿಗೆ ಧನ್ಯವಾದಗಳು ಎಂದಿದ್ದಾರೆ.

ಈ ಉಪ ಚುನಾವಣೆಯ ಅಭೂತಪೂರ್ವ ಫಲಿತಾಂಶವು ನಮ್ಮ ಸರ್ಕಾರದ ಜನಪರ ಆಡಳಿತಕ್ಕೆ, ಅಭಿವೃದ್ಧಿಪರ ನೀತಿಗೆ ಹಾಗೂ ಜನರ ಬದುಕನ್ನು ಬದಲಿಸಿದ ಗ್ಯಾರಂಟಿ ಯೋಜನೆಗಳ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಈ ಉಪ ಚುನಾವಣೆಯ ಗೆಲುವು ನಮ್ಮ ಸರ್ಕಾರಕ್ಕೆ ಮತ್ತಷ್ಟು ಬಲ ನೀಡಿದೆ, ಇನ್ನಷ್ಟು ಜನಹಿತದ ಕಾರ್ಯಕ್ರಮಗಳನ್ನು ಕೈಗೊಳ್ಳಲು ಪ್ರೇರಣೆ ಮತ್ತು ಚೈತನ್ಯವನ್ನು ನೀಡಿದೆ ಎಂದು ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ಹಗಲು ರಾತ್ರಿ ಎನ್ನದೆ ಅತ್ಯಂತ ಉತ್ಸಾಹದಿಂದ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರಿಗೆ, ನಾಯಕರಿಗೆ, ಕಾರ್ಯಕರ್ತರಿಗೆ ಧನ್ಯವಾದಗಳು. ಜನಾಶೀರ್ವಾದ ಪಡೆದ ಎಲ್ಲಾ ಅಭ್ಯರ್ಥಿಗಳಿಗೂ ಅಭಿನಂದನೆಗಳು, ಸರ್ಕಾರದ ಜನಹಿತದ ಯೋಜನೆಗಳನ್ನು ತಮ್ಮ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದಕ್ಕೆ ಶ್ರಮಿಸುತ್ತೀರಿ ಎಂಬ ನಂಬಿಕೆ ನನಗಿದೆ ಎಂದು ಪ್ರಿಯಾಂಕ್ ಖರ್ಗೆ ಆಶಿಸಿದ್ದಾರೆ.
ಮೈತ್ರಿ ಪಕ್ಷದಲ್ಲಿ ಸ್ವಾರ್ಥ ಇತ್ತು. ಜನ ಅವರ ಕುಟುಂಬ ರಾಜಕಾರಣಕ್ಕೆ ತೆರೆ ಎಳೆದಿದ್ದಾರೆ, ಜೆಡಿಎಸ್ ಬಿಜೆಪಿ ಮೈತ್ರಿ ವರ್ಕೌಟ್ ಆಗಿಲ್ಲ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ತಮ್ಮ ಪುತ್ರರನ್ನು ಬೆಳೆಸಬೇಕು ಎಂದು ಹೋರಾಡುತ್ತಿದ್ದಾರೆ. ಇವರ ಷಡ್ಯಂತ್ರದಿಂದ ನಾನು ಎನ್‌ಡಿಎ ಪಕ್ಷದಿಂದ ಹೊರ ಬರಬೇಕಾಯಿತು. ಆದರೆ ಕ್ಷೇತ್ರದ ಜನ ಹಾಗೂ ಕಾಂಗ್ರೆಸ್ ಪಕ್ಷ ನನ್ನನ್ನು ಕೈ ಬಿಡಲಿಲ್ಲ ಎಂದು ಚನ್ನಪಟ್ಟಣದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮಾತನಾಡಿದ್ದಾರೆ.

ಉಪಚುನಾವಣೆ ಕಾಂಗ್ರೆಸ್ ಗೆಲುವಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಕರ್ನಾಟಕ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಗೆಲುವು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೆಯ ಮೈಸೂರು ಭಾಗ ಮತ್ತು ಸಮಗ್ರ ಕರ್ನಾಟಕದ ಅಭಿವೃದ್ಧಿಯ ಗೆಲುವು ಎಂದು ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿ ವಿಜಯ ಸಾಧಿಸಿದೆ. ಜೊತೆಗೆ ಜನರು ಕೂಡ ಅಭಿವೃದ್ಧಿಯಿಂದ ವಂಚಿತರಾಗುತ್ತೇವೆ ಎಂಬ ದೃಷ್ಟಿಯಿಂದ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಸರ್ಕಾರದ ಹಗರಣ ಬಯಲಿಗೆಳೆಯುವ ಕೆಲಸವನ್ನು ಬಿಜೆಪಿ ಮುಂದುವರಿಸಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಭರವಸೆ ಇತ್ತು. ಸದ್ಯ ನಮ್ಮ ಲೆಕ್ಕಾಚಾರ ತಲೆಕೆಳಗಾಗಿಲ್ಲ ಎಂದು ಹುಬ್ಬಳ್ಳಿಯಲ್ಲಿ ಸಂಸದ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಸಂಡೂರು ಮತ್ತು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆದ್ದಿದೆ, ನಮಗೆ ಕಠಿಣ ಸವಾಲು ಎನಿಸಿದ್ದು ಸಂಡೂರು ಎಂದು ಹೇಳಿದ್ದಾರೆ.












Click it and Unblock the Notifications