ಅತೃಪ್ತ ಶಾಸಕ ಎಂಟಿಬಿಯಿಂದ ಕಾಂಗ್ರೆಸ್ ವಿರುದ್ಧ ಬ್ಲಾಕ್‌ಮೇಲ್ ತಂತ್ರ?
ಬೆಂಗಳೂರು, ನವೆಂಬರ್ 03: ಸಂಪುಟ ವಿಸ್ತರಣೆ ಸನಿಹ ಬರುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಪೋಟಗೊಳ್ಳುತ್ತಿದೆ. ಈಗಾಗಲೇ ಸತೀಶ್ ಜಾರಕಿಹೊಳಿ ಆಪರೇಷನ್ ಕಮಲದ ಸುಳಿವು ನೀಡಿದ್ದರೆ ಶಾಸಕ ಎಂಟಿಬಿ ನಾಗರಾಜು ಸಹ ಅದೇ ಮಾದರಿಯ ಒತ್ತಡವನ್ನು ಕಾಂಗ್ರೆಸ್ ಮೇಲೆ ಹೇರುತ್ತಿದ್ದಾರೆ.
ಮೂಲಗಳ ಪ್ರಕಾರ ರಾಜ್ಯ ಕಾಂಗ್ರೆಸ್ ಮೇಲೆ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರು ಬ್ಲಾಕ್‌ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ. ಸಚಿವ ಸ್ಥಾನ ನೀಡದಿದ್ದಲ್ಲಿ ಪಕ್ಷ ಬಿಡುತ್ತೇನೆ ಎಂದು ಎಂಟಿಬಿ ಹಿರಿಯ ಕಾಂಗ್ರೆಸ್ಸಿಗರ ಬಳಿಯೇ ಹೇಳಿದ್ದಾರೆ ಎನ್ನಲಾಗಿದೆ.
ಎಂಟಿಬಿ ನಾಗರಾಜು ಅವರು ಮೂರು ಬಾರಿ ಹೊಸಕೋಟೆಯಲ್ಲಿ ಗೆದ್ದು ಬಂದಿದ್ದಾರೆ. ಬಚ್ಚೇಗೌಡ ಅಂತಹಾ ಕಠಿಣ ಎದುರಾಳಿ ಹೊಂದಿ ಮೂರು ಬಾರಿ ಗೆದ್ದು ಬಂದಿದ್ದರೂ ಸಹ ತಮಗೆ ಸಚಿವ ಸ್ಥಾನ ನೀಡಿಲ್ಲ ಎಂದು ಎಂಟಿಬಿ ಅವರು ಬೇಸರಗೊಂಡಿದ್ದಾರೆ.
ಸಚಿವ ಸ್ಥಾನಕ್ಕಾಗಿ ಹಲವು ಬಾರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಎಂಟಿಬಿ ಅವರು ಕೊನೆಗೆ ಅವರ ಬಳಿಯೂ ಇದೇ ವಿಷಯಕ್ಕೆ ಮನಸ್ಥಾಪ ಉಲ್ಬಣ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರು ಸಹ ಎಂಟಿಬಿ ಕೋರಿಕೆಯನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಸಂಪುಟದಲ್ಲಿ ಸ್ಥಾನ ಸಿಗದಿದ್ದರೆ ಬಂಡಾಯ ಸಾಧ್ಯತೆ
ಕುರುಬ ಸಮುದಾಯದ ಎಂಟಿಬಿ ಅವರು ಕಳೆದ ಬಾರಿಯೂ ಅವರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದರು ಆದರೆ ದೊರೆತಿರಲಿಲ್ಲ. ಈ ಬಾರಿ ಅವರು ಬಂಡಾಯದ ಸುಳಿವು ನೀಡಿದ್ದು, ಸಂಪುಟದಲ್ಲಿ ಸ್ಥಾನ ದೊರೆಯದಿದ್ದರೆ ಕಾಂಗ್ರೆಸ್ ಬಿಡುವ ಸಾಧ್ಯತೆ ಇದೆ.

ಬಿಜೆಪಿ ಸಂಪರ್ಕದಲ್ಲಿ ಎಂಟಿಬಿ?
ಈಗಾಗಲೇ ಎಂಟಿಬಿ ನಾಗರಾಜು ಅವರು ರೇಣುಕಾಚಾರ್ಯ ಸೇರಿದಂತೆ ಇನ್ನೂ ಕೆಲವು ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಎಂಟಿಬಿ ಪ್ರತಿನಿಧಿಸುವ ಹೊಸಕೋಟೆ ಕ್ಷೇತ್ರದಲ್ಲಿಯೇ ಕೇಳಿ ಬರುತ್ತಿದೆ. ಬಿಜೆಪಿಯು ಎಂಟಿಬಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎನ್ನಲಾಗಿದೆ.

ಹಿಂದೊಮ್ಮೆ ಬಂಡಾಯದ ಬಿಸಿ ಮುಟ್ಟಿಸಿದ್ದರು
ಕೆಲವು ತಿಂಗಳುಗಳ ಹಿಂದೆ ಎಂಟಿಬಿ ಅವರು ಮತ್ತಿಬ್ಬರು ಸಚಿವ ಸ್ಥಾನ ಆಕಾಂಕ್ಷಿಗಳಾದ ಚಿಕ್ಕಬಳ್ಳಾಪುರದ ಸುಧಾಕರ್ ಹಾಗೂ ಬಾಗೇಪಲ್ಲಿಯ ಸುಬ್ಬಾರೆಡ್ಡಿ ಅವರ ಜೊತೆ ಗೋವಾ ಹಾದಿ ಹಿಡಿದಿದ್ದಾರೆ. ಅಲ್ಲಿ ಹೋಗಿ ರೆಸಾರ್ಟ್ ಸೇರಿಕೊಳ್ಳುತ್ತಾರೆ ಎಂಬ ಊಹಾಪೋಹ ಹರಿದಾಡಿತ್ತು, ಆದರೆ ಆ ನಂತರ ಅದು ಸುಳ್ಳಾಯಿತು.

ಕುರುಬ ಸಮುದಾಯದ ಶಾಸಕ
ಕುರುಬ ಸಮುದಾಯದ ಎಂಟಿಬಿ ಅವರಿಗೆ ಸಚಿವ ಸ್ಥಾನ ಪಕ್ಕಾ ಎನ್ನಲಾಗಿತ್ತು ಆದರೆ ಕೊನೆಯ ಕ್ಷಣದಲ್ಲಿ ಅವರಿಗೆ ಸ್ಥಾನ ಕೈತಪ್ಪಿತು. ಈಗ ಕಾಂಗ್ರೆಸ್‌ನ ಮತ್ತೊಬ್ಬ ಕುರುಬ ಸಮುದಾಯದ ಶಾಸಕ ಶಿವಳ್ಳಿ ಅವರು ಸಹ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದು, ಇಬ್ಬರಲ್ಲಿ ಯಾರಿಗೆ ರಾಜ್ಯ ಕಾಂಗ್ರೆಸ್ ಮಣೆ ಹಾಕುತ್ತದೆಯೋ ಕಾದು ನೋಡಬೇಕು.












Click it and Unblock the Notifications