ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಸಚಿವ ಎಂ.ಸಿ ಸುಧಾಕರ್
ಬೆಂಗಳೂರು, ಅಕ್ಟೋಬರ್ 13: ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳು ಬಂದ ವಿದ್ಯಾರ್ಥಿಗಳನ್ನು ಖುದ್ದು ಸಚಿವರು ಭೇಟಿಯಾಗಿ ಪರಿಹಾರ ನೀಡುವ ಭರವಸೆ ನೀಡಿದ ಘಟನೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ನಡೆದಿದೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂದೆ ತಮ್ಮ ಸಮಸ್ಯೆಯ ಬುತ್ತಿ ಹೊತ್ತು ಪರಿಹಾರ ಸಿಗಬಹುದು ಅನ್ನುವ ನಿರೀಕ್ಷೆಯ ಮೇರೆಗೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಸೇರುತ್ತಲೇ ಇರುತ್ತಾರೆ. ಆದರೆ ಸ್ಪಂದನೆ ಮಾತ್ರ ತೀರ ವಿರಳ ಎನ್ನುವಂತಾಗಿದೆ. ಆದರೆ ಇಂದು ಕೆಇಎ ಗೇಟ್ ಬಳಿ ಕುಳಿತಿದ್ದ ವಿದ್ಯಾರ್ಥಿಗಳಿಗೆ ಖುದ್ದು ಸಚಿವರು ಬಂದು ಪರಿಹಾರ ಒದಗಿಸುವ ಕೆಲಸ ಮಾಡಿದರು.

KEA ಮುಂದೆ ಕೇವಲ ವಿದ್ಯಾರ್ಥಿಗಳು ಮಾತ್ರ ಅಲ್ಲ, ಸಾಕಷ್ಟು ಪೋಷಕರು ಕೂಡ ಸೇರಿ ಕೊಂಡಿದ್ದಾರೆ. ಇಲ್ಲಿ ಕೇವಲ ಬೆಂಗಳೂರು ಮಾತ್ರವಲ್ಲ , ರಾಜ್ಯದ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳು ಸಮಸ್ಯೆಗಳ ಪಟ್ಟಿ ಹೊತ್ತು ಪ್ರಾಧಿಕಾರದ ಮುಂದೆ ಬಂದಿದ್ದಾರೆ, ಆದರೆ ಇವರಿಗೆಲ್ಲಾ ನಿತ್ಯ ಯಾವುದೇ ಉತ್ತರ ಸಿಗದೆ ನಿರಾಸೆಯಾಗುತಿತ್ತು.
ಸದ್ಯ ಇದೆಲ್ಲಾ ಮನಗಂಡು ಖುದ್ದು ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಇವತ್ತು KEAಗೆ ಭೇಟಿ ನೀಡಿ ಪ್ರತಿಯೊಂದು ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ಬೆಳಿಗ್ಗೆ 10.30ಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬಂದ ಸಚಿವರು ಮಧ್ಯಾಹ್ನ 2 ಗಂಟೆಯವರೆಗೂ ಸ್ಥಳದಲ್ಲೇ ಇದ್ದು ಸಮಸ್ಯೆ ಅಲಿಸಿದರು.
ಮೆಡಿಕಲ್, ಇಂಜಿನಿಯರಿಂಗ್ ಏಕಕಾಲಕ್ಕೆ ಕೌನ್ಸೆಲಿಂಗ್ ಆರಂಭ ಮಾಡಲಾಗಿತ್ತು. ಆದರೆ ರಿಜಿಸ್ಟ್ರೇಷನ್ ಪ್ರಕ್ರಿಯೆ ಅಲ್ಲಿ ಹಲವು ವಿದ್ಯಾರ್ಥಿಗಳು ತಪ್ಪು ಮಾಡಿರುವುದು. ಸೀಟ್ ಅಲಾಟ್ ಆದ ಮೇಲೆ ಆ ಕಾಲೇಜು ಬೇಡ ಅಂತ ಕ್ಯಾನ್ಸಲ್ ಮಾಡಲು ಮುಂದಾಗಿರುವುದು ಪ್ರಮುಖವಾಗಿ ತಮಗೆ ಅಲಾಟ್ ಆಗಿರುವ ಸೀಟ್ ಬೇಡ ಹಣ ವಾಪಾಸ್ ಕೊಡಿ ಅಂತ ಬೇಡಿಕೆ ಇಡುವ ವಿದ್ಯಾರ್ಥಿಗಳ ಸಂಖ್ಯೆಯೇ ಏರಿಕೆ ಇತ್ತು. ಆದರೆ ಈ ಸಮಸ್ಯೆಗೆ ಸಚಿವರು ಕೂಡ ಪರಿಹಾರ ಕೊಡುವ ಬಗ್ಗೆ ಮೌನ ಮುರಿಯಲಿಲ್ಲ. ಬದಲಾಗಿ ಹೆಚ್ಚುವರಿ ಸೀಟ್ ಕೆಲವೊಂದು ಕಾಂಬಿನೇಶನ್ ಅಲ್ಲಿ ಉಳಿದು ಕೊಂಡಿದೆ ಅಂತ ಬೇಸರ ವ್ಯಕ್ತ ಪಡಿಸಿದರು.

ಇನ್ನು ಈ 5 ಟೈಮ್ ಪೆನಾಲ್ಟಿ ಅನ್ನೋದೆ ಪೋಷಕರಿಗೆ ವಿದ್ಯಾರ್ಥಿಗಳಿಗೆ ದೊಡ್ಡ ತಲೆ ನೋವಾಗಿದೆ. ಅಂದರೆ ಒಬ್ಬ ವಿದ್ಯಾರ್ಥಿ ಯಾವುದಾದರೂ ಕಾಲೇಜು ಆಯ್ಕೆ ಮಾಡಿ ಕೊಂಡಾಗ , ವಿದ್ಯಾರ್ಥಿಗೆ ಆ ಕಾಲೇಜು ಹಿಡಿಸದೇ ಹೋದರೆ ಮತ್ತೆ ಆ ಸೀಟು ಕೈ ಬಿಡುವ ಆಯ್ಕೆ ಉನ್ನತ ಶಿಕ್ಷಣ ಇಲಾಖೆ ಕೊಟ್ಟಿಲ್ಲ. ಒಂದೊಮ್ಮೆ ವಿದ್ಯಾರ್ಥಿ ಕಾಲೇಜು ಬದಲಾವಣೆ ಮಾಡಲೇ ಬೇಕಾದ್ರೆ 5 ಸಲ ಆ ಕೋರ್ಸ್‌ಗೆ ಪೆನಾಲ್ಟಿ ಕಟ್ಟಬೇಕಾಗುತ್ತದೆ. ಇದು ಅತೀ ಹೆಚ್ಚು ಪೋಷಕರ ಕೆಂಗಣ್ಣಿಗೆ ಕಾರಣ ಆಗಿರುವುದು.
ಈ ಬಗ್ಗೆ ಸಚಿವರು ಮಾತನಾಡಿದ್ದು, ಮುಂದಿನ ದಿನಗಳಲ್ಲಿ ಈ ಪೆನಾಲ್ಟಿ ಬಗ್ಗೆ ಹೆಚ್ಚೆಚ್ಚು ಅರಿವು ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. ವಿದ್ಯಾರ್ಥಿಗಳು ಪೋಷಕರು ಬಹಳ ದೂರದ ಭಾಗದಿಂದ ಕೆಇಎ ಬಂದಿರುವುದರಿಂದ ಜನ ಸ್ನೇಹಿಯಾಗಿ ಅವರ ಸಮಸ್ಯೆಗೆ ಪರಿಹಾರ ಕೊಡಲು ಪರ್ಮನೆಂಟ್ ಆಗಿ ಒಂದು ವ್ಯವಸ್ಥೆ ಮಾಡುತ್ತೇವೆ ಅನ್ನುವ ಭರವಸೆಯನ್ನು ಸಚಿವರು ನೀಡಿದ್ದಾರೆ.












Click it and Unblock the Notifications